ಬೆಂಗಳೂರು, ಮೇ.4 www.bengaluruwire.com : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಮೇ.6 ರಂದು ಬೆಂಗಳೂರಿನಲ್ಲಿ ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇದರಿಂದಾಗಿ ನಗರದ ಹಲವೆಡೆ ಭಿಗಿಭದ್ರತೆ ಹಿನ್ನಲೆಯಲ್ಲಿ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.
ನಗರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ರೋಡ್ ಶೋ ಪ್ರಮುಖ ಅಸ್ತ್ರದಂತೆ ಪರಿಗಣಿಸಿರುವ ಬಿಜೆಪಿ ಅಂದು ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ ದೂರದಷ್ಟು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ರೋಡ್ ಶೋ ಹಮ್ಮಿಕೊಂಡಿದೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ 10.1 ಕಿ.ಮೀ ಹಾಗೂ ಸಂಜೆ 4 ರಿಂದ ರಾತ್ರಿ 10 ರವರೆಗೆ 26.5 ಕಿ.ಮೀ ದೂರ ರೋಡ್ ಶೋ ನಡೆಯಲಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
ಈ ರೋಡ್ ಶೋನಲ್ಲಿ ಅಂದಾಜು 10 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬೆಳಿಗ್ಗೆ 10ಕ್ಕೆ ಸುರಂಜನ್‌ದಾಸ್ ರಸ್ತೆಯಿಂದ ಆರಂಭವಾಗುವ ಯಾತ್ರೆ, ಮಹದೇವಪುರ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಸಾಗಲಿದೆ.
ಸಂಜೆ 4 ಗಂಟೆಯಿಂದ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ವಿಜಯನಗರ, ಗೋವಿಂದರಾಜ ನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಮಲ್ಲೇಶ್ವರ ಕ್ಷೇತ್ರಗಳಲ್ಲಿ ರಾತ್ರಿ 10 ಗಂಟೆಯವರೆಗೆ ರೋಡ್ ಶೋ ನಡೆಯಲಿದೆ.