ಬೆಂಗಳೂರು, ಮೇ.03 www.bengaluruwire.com : ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವಾಕಥಾನ್, ಬೈಕ್ ರ್ಯಾಲಿ, ಬೀದಿ ನಾಟಕದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಮಧ್ಯೆ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಬಿಡುವಿಲ್ಲದ ಕೆಲಸ ನಡುವೆಯೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮಹತ್ವವನ್ನು ಸಾರುವ ಕಿರುಚಿತ್ರವನ್ನು ನಿರ್ಮಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.
‘ಡೆಮಾಕ್ರಸಿ ಅವ್ರು’ (Democracy Avru) ಎಂಬ 9.07 ನಿಮಿಷಗಳ ಈ ಕಿರುಚಿತ್ರವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಹರೀಶ್ ಮೊಟ್ಟ ಮೊದಲ ಬಾರಿಗೆ ರಚಿಸಿ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶಿಸಿದ್ದಾರೆ. ಗೌರಿಬಿದನೂರಿನ ಮಣಿವಾಲ ಹಳ್ಳಿಯ ಜನರನ್ನು ಬಳಸಿಕೊಂಡು ‘ಜನಪದರು’ ಎಂಬ ರಂಗತಂಡದ ಕಲಾವಿದರನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ.
ಒಂಭತ್ತು ನಿಮಿಷಗಳ ಈ ಕಿರುಚಿತ್ರದಲ್ಲಿ ರಾಜಕೀಯ ಪಕ್ಷಗಳು ಓಟಿಗಾಗಿ ಚುನಾವಣೆ ಸಂದರ್ಭದಲ್ಲಿ ಆಮಿಷ ಒಡ್ಡುವ, ಅದನ್ನು ಸ್ವೀಕರಿಸುವ ಮತದಾರರ ಮಧ್ಯೆಯೇ ಅದನ್ನು ಪ್ರಜ್ಞಾಪೂರ್ವಕವಾಗಿ ವಿರೋಧಿಸಿ ಚುನಾವಣೆಯಲ್ಲಿ ಜವಾಬ್ದಾರಿಯುತವಾಗಿ ಮತ ಚಲಾಯಿಸುವ ಅನಿವಾರ್ಯತೆಯನ್ನು ಆಮಿಷಕ್ಕೆ ಒಳಗಾಗುವ ಜನತೆಗೆ ತಿಳಿಸುವ ಪ್ರಜ್ಞಾವಂತ ಮತದಾರನ ಎಳೆಯುಳ್ಳ ಕಥಾ ಹಂದರವನ್ನು ಈ ಕಿರುಚಿತ್ರ ಹೊಂದಿದೆ. ಏಪ್ರಿಲ್ 30ರಂದು ‘ಡೆಮಾಕ್ರಸಿ ಅವ್ರು’ ಕಿರುಚಿತ್ರವನ್ನು ರೈಸಿಂಗ್ ಸನ್ ಎಂಬ ಯೂಟ್ಯೂಬ್ ಚಾನಲ್ (YOU Tube Channel) ನಲ್ಲಿ ಅಪಲೋಡ್ ಮಾಡಲಾಗಿದ್ದು, ಇದುವರೆಗೆ ಸಾವಿರಾರು ಜನರು ಇದನ್ನು ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೊಂದು ಶಾರ್ಟ್ ಫಿಲಮ್ ಆಗಿದ್ದರೂ ಸಹ ಪ್ರಜಾಪ್ರಭುತ್ವದ ಉಳಿವಿಗೆ ಹಾಗೂ ಭದ್ರ ಬುನಾದಿಗೆ ಜವಾಬ್ದಾರಿಯುವ ಮತದಾರ ತಪ್ಪದೇ ಓಟು ಹಾಕುವ ಅನಿವಾರ್ಯತೆಯನ್ನು ಮಾರ್ಮಿಕವಾಗಿ ಹಾಗೂ ವ್ಯಂಗ್ಯವಾಗಿ ಪಾತ್ರದ ಮೂಲಕ ಅನಾವರಣ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಚುನಾವಣಾ ಆಯೋಗವು ಮತದಾರರಲ್ಲಿ ಜಾಗೃತಿ ಮೂಡಿಸಲು ಇಂತಹ ಕಿರುಚಿತ್ರಗಳನ್ನು ಸಾಮಾಜಿಕ ಮಾಧ್ಯಮ, ತನ್ನ ಅಧಿಕೃತ ವೆಬ್ ಸೈಟ್, ರೇಡಿಯೋ, ಟಿವಿ, ವೆಬ್ ನ್ಯೂಸ್ ಪೋರ್ಟಲ್ ಗಳಲ್ಲಿ ಪ್ರಸಾರ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಈ ಕಿರುಚಿತ್ರವನ್ನು ನೋಡಿದವರು ಯೂಟ್ಯೂಬ್ ಚಾನಲ್ ನಲ್ಲಿ ಹಾಗೂ ಸಾರ್ವಜನಿಕವಾಗಿಯೂ ಅಭಿಪ್ರಾಯಪಟ್ಟಿದ್ದಾರೆ.
ಈ ಕಿರುಚಿತ್ರದ ಬಗ್ಗೆ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಏನಂತಾರೆ? :
“ಚುನಾವಣೆಗಳಲ್ಲಿ ಮತದಾನ ಎಷ್ಟು ಅಮೂಲ್ಯ ಹಾಗೂ ಅದೊಂದು ಪವಿತ್ರವಾದ ಹಕ್ಕು. ಇದನ್ನು ಯಾವುದೇ ಕಾರಣಕ್ಕೂ ಆಸೆ, ಆಮಿಷಕ್ಕೂ ಒಳಗಾಗದೆ ಮುಕ್ತವಾಗಿ ಮತದಾನ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತೆ ಎಂಬ ಸಂದೇಶವನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಆ ಕಿರುಚಿತ್ರದಲ್ಲಿ ಬಿಂಬಿಸಿದ್ದಾರೆ ನಮ್ಮ ಇಲಾಖೆಯ ಇಒ ಆರ್.ಹರಿಶ್. ಈ ಕಿರುಚಿತ್ರವನ್ನು ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿದಾಗ ಜನರು ಜಾಗೃತರಾಗುತ್ತಾರೆ. ಮತದಾನ ಮಾಡುವಾಗ ಪಾರದರ್ಶಕವಾಗಿ ತಮ್ಮ ಆಯ್ಕೆಯ ಪ್ರಕಾರ ಅರ್ಹ ಹಾಗೂ ನೆಚ್ಚನ ಅಭ್ಯರ್ಥಿಗೆ ಜವಾಬ್ದಾರಿಯುತವಾಗಿ ಮತದಾನ ಮಾಡಲು ಅನುಕೂಲವಾಗುತ್ತದೆ. ಹಣ, ಇತರ ಆಮಿಷಕ್ಕೆ ಒಳಗಾಗದೆ ಓಟು ಹಾಕಿ ಎಂಬ ಸಂದೇಶ ರವಾನೆ ಮಾಡುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ. ಇದಕ್ಕೆ ಹರೀಶ್ ಅವರನ್ನು ಅಭಿನಂದಿಸುತ್ತೇನೆ.“
– ಎಲ್.ಕೆ.ಅತೀಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಆರು ದಿನಗಳಲ್ಲಿ ತಯಾರಾದ ಶಾರ್ಟ್ ಫಿಲಮ್ :
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರ ತನ್ನ ಹಕ್ಕನ್ನು ಸೂಕ್ತ ರೀತಿಯಲ್ಲಿ ಚಲಾಯಿಸದಿದ್ದಾಗ ಇಡೀ ಪ್ರಜಾಪ್ರಭುತ್ವವೇ ಕುಸಿತಕೊಳಗಾಗುವ ಅಂಶವನ್ನು ಸಂದೇಶ ರೂಪದಲ್ಲಿ ಆರ್.ಹರೀಶ್ ತಮ್ಮ ಕಿರುಚಿತ್ರದಲ್ಲಿ ನೀಡಿದ್ದಾರೆ. ಶೇ.100ಕ್ಕೆ 100ರಷ್ಟು ಮತದಾನವಾದರೆ ಸಮಾಜಕ್ಕೆ ಆಗುವ ಲಾಭಗಳನ್ನು ಸೂಚ್ಯವಾಗಿ ಇಲ್ಲಿ ತಿಳಿಸಲಾಗಿದೆ. ಕೇವಲ ಆರು ದಿನಗಳಲ್ಲಿ ಚಿತ್ರದ ಕಥಾವಸ್ತು ಸಿದ್ಧಪಡಿಸಿ, ಚಿತ್ರಕಥೆ, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ. ರೈಸಿಂಗ್ ಸನ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಶಾರ್ಟ್ ಫಿಲಂ ಸಿನಿಮಾಟೋಗ್ರಫಿ, ಸಂಕಲನವನ್ನು ಎಸ್.ವಿ.ಚಂದ್ರ, ಸಂಗೀತ ದೇಶಿ ಮೋಹನ್, ಧ್ವನಿ ನಾಗರಾಜ ಹುಲಿವನ, ಛಾಯಾಗ್ರಹಣದಲ್ಲಿ ಅಭಿ, ಗಂಗಾ ಹಾಗೂ ಸಚಿನ್ ಅವರು ಕಾರ್ಯನಿರ್ವಹಿಸಿದ್ದಾರೆ.ಮೂಲತಃ ತುಮಕೂರಿನವರಾದ ಆರ್.ಹರೀಶ್ ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಮುಗಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಡೆಮಾಕ್ರಸಿ ಅವ್ರು’ ಕಿರುಚಿತ್ರ ನಿರ್ದೇಶಕರು ಈ ಚಿತ್ರದ ಬಗ್ಗೆ ಏನಂತಾರೆ? :
’ಚುನಾವಣೆಯಲ್ಲಿ ಮತದಾರರ ಜಾಗೃತಿಗಾಗಿ ವಾಕಥಾನ್, ಬೈಕ್ ರಾಲಿ, ಅಣುಕು ಮತದಾನ ಮತ್ತಿತರ ರೀತಿಯ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ, ಏಕ ಕಾಲಕ್ಕೆ ಸಾವಿರಾರು ಜನರನ್ನು ಪರಿಣಾಮಕಾರಿಯಾಗಿ ತಲುಪಲು ಹಾಗೂ ಮತದಾನ ಪ್ರಾಮುಖ್ಯತೆ ಬಗ್ಗೆ ಮತದಾರರಿಗೆ ಮನ ಮುಟ್ಟುವಂತೆ ಹೇಳಲು ಯಾವುದಾದರೂ ಮಾರ್ಗವಿದೆಯೇ ಎಂದು ಹುಡುಕುತ್ತಿದ್ದಾಗ ಹೊಳೆದಿದ್ದೇ ಈ ಒಂದು ಕಿರುಚಿತ್ರ ನಿರ್ಮಾಣ ಮಾಡಲು ಕಾರಣವಾಯಿತು. ಇದರ ಕಾನ್ಸೆಪ್ಟ್ ಸಿದ್ಧಪಡಿಸಿ ನಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಚಿತ್ರಕಥೆ ಅಂತಿಮಗೊಳಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಗರಾಜ್, ಜಿ.ಪಂ ಸಿಇಒ ಪ್ರಕಾಶ್ .ಜಿ ನಿಟ್ಟಾಲಿ ಅವರು, ಗೌರಿಬಿದನೂರು ತಾಲ್ಲೂಕು ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಈ ಕಿರುಚಿತ್ರ ನಿರ್ಮಾಣಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.”
– ಹರೀಶ್.ಆರ್, ಕಾರ್ಯನಿರ್ವಾಹಕ ಅಧಿಕಾರಿ, ಗೌರಿಬಿದನೂರು ತಾಲ್ಲೂಕು
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.