ಬೆಂಗಳೂರು, ಏ.30 www.bengaluruwire.com : ಕೇಂದ್ರ ಚುನಾವಣಾ ಆಯೋಗ, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಅವರು ಇಂದು ತಮ್ಮ ಮನೆಯಿಂದಲೇ ಮತವನ್ನು ಚಲಾಯಿಸಿದರು.
ಚಿಕ್ಕೋಡಿ-ಸಾದಲಗಾ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿರಿಯ ಮತದಾರರೆನಿಸಿರುವ ಶತಾಯುಷಿ ಮಹದೇವ ಮಹಾಲಿಂಗ ರವರು ಎಲ್ಲಾ ಮತದಾರರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಈ ವಯಸ್ಸಿನಲ್ಲಿಯೂ ತಮ್ಮ ಕೆಲಸಗಳನ್ನು ಸ್ವತ: ತಾವೇ ಮಾಡಿಕೊಳ್ಳುವ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ 2023 ಹಾಗೂ ಮತದಾನದ ಪ್ರಾಮುಖ್ಯತೆಯನ್ನು ವಿವರಿಸಿ, ಭಾರತ ಚುನಾವಣಾ ಆಯೋಗದ ಈ ನೂತನ ಸೇವೆಯನ್ನು ಶ್ಲಾಘಿಸಿದರು. ಜವಾಬ್ದಾರಿಯುತ ಪ್ರಜೆಗಳಾಗಿ ದೇಶದ ಪ್ರತಿ ನಾಗರಿಕರೂ ತಪ್ಪದೇ ಮತವನ್ನು ಚಲಾಯಿಸಬೇಕೆಂದು ಕರೆ ನೀಡಿದರು.



ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ – 2023 ರ ಅಂಗವಾಗಿ ಕೇಂದ್ರ ಚುನಾವಣಾ ಆಯೋಗ, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿದೆ. ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನದ ಪ್ರಕ್ರಿಯೆಯನ್ನು ಏಪ್ರಿಲ್ 29 ರಿಂದ ಪ್ರಾರಂಭಿಸಲಾಗಿದ್ದು , ಮೇ 6 ರಂದು ಕೊನೆಗೊಳ್ಳಲಿದೆ. ಮತದಾನ ದೇಶದ ಪ್ರತಿ ನಾಗರಿಕನ ಸಂವಿಧಾನಿಕ ಹಕ್ಕು. ಈ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕೆಂಬ ಉದ್ದೇಶದಿಂದ ಈ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ, ಇದು ಯುವ ಮತದಾರರಿಗೆ ಸ್ಪೂರ್ತಿಯಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


