ಬೆಂಗಳೂರು, ಏ.24 www.bengaluruwire.com : ರಾಜಧಾನಿಯಲ್ಲಿ ವಿಧಾನಸಭಾ ಚುನಾವಣಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ಮಧ್ಯೆ ಇಂದು ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದು, ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಬೆಂಗಳೂರಿನ ಬಿಬಿಎಂಪಿ ಅಧಿಕಾರಿಯ ಮನೆಯಲ್ಲಿ ಭಾರೀ ಪ್ರಮಾಣ ಆಸ್ತಿ, ನಗದು, ಚಿನ್ನಾಭರಣ ಪತ್ತೆಯಾಗಿದೆ.
ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಅವರ ಮನೆ ಮೇಲೆ ಸೋಮವಾರ ಮುಂಜಾನೆಯೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಗಂಗಾಧರಯ್ಯ ಬಿಬಿಎಂಪಿಯ ಟೌನ್ ಪ್ಲಾನಿಂಗ್ ಅಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ (ADTP) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಚೇರಿ ಯಲಹಂಕದಲ್ಲಿದೆ.
ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 15 ಜನ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, ಮನೆ ಹಾಗೂ ಕಾರಿನ ಒಳಗಡೆಯು ಪರಿಶೀಲನೆ ಮಾಡಿದ್ದಾರೆ. ಒಬ್ಬರು ಎಸ್ಪಿ, ಇಬ್ಬರು ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಅಪಾರ ಪ್ರಮಾಣದ ಹಣ ಪತ್ತೆ :
ಲೋಕಾಯುಕ್ತ ದಾಳಿಯ ಸಂದರ್ಭದಲ್ಲಿ ಗಂದಾಧರಯ್ಯ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಅಲ್ಲದೆ, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಸೀರೆ, ಆಸ್ತಿ ಪತ್ರಗಳು ಹಾಗೂ ವಿದೇಶಿ ಕರೆನ್ಸಿಗಳು ಸಹ ಪತ್ತೆಯಾಗಿವೆ. ಸದ್ಯ ಹಣದ ಮೂಲದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪತ್ತೆಯಾಗಿರುವ ಹಣದ ಅಂದಾಜು ಮೊತ್ತ 1.5 ಕೋಟಿ ರೂ. ಎಂದು ತಿಳಿದುಬಂದಿದೆ. 2 ಕೋಟಿ ರೂಪಾಯಿಗೂ ಹೆಚ್ಚಿನ ವಸ್ತುಗಳು ಪತ್ತೆಯಾಗಿವೆ.
ಚುನಾವಣಾ ಕರ್ತವ್ಯಕ್ಕೂ ನಿಯೋಜನೆಯಾಗಿದ್ದ :
ಗಂಗಾಧರಯ್ಯಗೆ ಸೇರಿದ ಒಟ್ಟು 3 ಕಡೆ ದಾಳಿಯಾಗಿದೆ. ಬೆಂಗಳೂರಿನ ಕುರುಬರಹಳ್ಳಿ, ಯಲಹಂಕ ಮತ್ತು ಮಹಾಲಕ್ಷ್ಮೀ ಲೇಔಟ್ನಲ್ಲಿ ದಾಳಿಯಾಗಿದ್ದು, ಎಸ್ಪಿ ಅಶೋಕ್ ನೇತೃತ್ವದಲ್ಲಿ ಇದೀಗ ಪರಿಶೀಲನೆ ನಡೆಯುತ್ತಿದೆ. ಗಂಗಾಧರಯ್ಯ ಚುನಾವಣೆಯ ಕರ್ತವ್ಯಕ್ಕೂ ಸಹ ನೇಮಕವಾಗಿದ್ದ. ಆ ವ್ಯಕ್ತಿಯ ಕಾರಿನ ಮೇಲೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸ್ಟಿಕ್ಕರ್ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.