ಬೆಂಗಳೂರು, ಏ.24 www.bengaluruwire.com : ಆಟೊರಿಕ್ಷಾದಂತೆ ಪ್ರಯಾಣಿಕ ಸೇವೆ ಒದಗಿಸಲು ನಾಲ್ಕು ಚಕ್ರದ ‘ಕ್ಯೂಟ್’ ( ಕ್ವಾಡ್ರಿಸೈಕಲ್)’ ವಾಹನಗಳು ನಗರದಲ್ಲಿ ಸೋಮವಾರದಿಂದ ಅಧಿಕೃತವಾಗಿ ರಸ್ತೆಗೆ ಇಳಿಯಲಿದೆ. ಸಾರಿಗೆ ಇಲಾಖೆ ಈ ವಾಹನಕ್ಕೆ ದರ ನಿಗದಿ ಮಾಡಿದೆ.
ಹೊಸ ಮಾದರಿಯ ಈ ಪುಟ್ಟ ನಾಲ್ಕು ಚಕ್ರದ ವಾಹನಗಳು ಮೀಟರ್ ಅಳವಡಿಕೆಯೊಂದಿಗೆ ರಸ್ತೆಗೆ ಇಳಿಯಲಿದೆ. ಬಜಾಜ್ ಕಂಪನಿ ಮುಖ್ಯಸ್ಥರು ವಾಹನಗಳಿಗೆ ಇಂದು ಚಾಲನೆ ನೀಡುವರು. ಇದರೊಂದಿಗೆ ನಗರದ ಜನತೆ ಆಟೊ ಮಾದರಿಯಲ್ಲಿ ಈ ವಾಹನದಲ್ಲಿ ಕೂತು ಪ್ರಯಾಣಿಸಬಹುದು.
ಈ ವಾಹನಗಳ ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸಾರಿಗೆ ಇಲಾಖೆ ಅನುಮತಿ ನೀಡಿ, ದರ ನಿಗದಿಪಡಿಸಿದೆ. 4 ಕಿ.ಮೀ ವರೆಗೆ 60 ರೂ. ಕನಿಷ್ಠ ದರವಿರಲಿದೆ. ನಂತರ ಪ್ರತಿ ಕಿಲೋ ಮೀಟರ್ಗೆ 16 ರೂ. ಇರಲಿದೆ ಎಂದು ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಕಾರು ಮಾದರಿಯ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವು 2019ರಲ್ಲಿಯೇ ಮಾರುಕಟ್ಟೆಗೆ ಬಂದಿತ್ತು. ಆದರೆ ಸಾರಿಗೆ ಇಲಾಖೆ ದರ ನಿಗದಿ ಪಡಿಸಿರಲಿಲ್ಲ. ಆದರೂ ಉಬರ್ (Uber) ಸಂಸ್ಥೆಯೊಂದಿಗೆ ಅವಲಂಬಿತವಾಗಿ ಟ್ಯಾಕ್ಸಿ ಸೇವೆ ಒದಗಿಸ ಸಲಾಗುತ್ತಿತ್ತು. ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿ ದರ ನಿಗದಿ ಮಾಡಲು ಕೋರಿದ್ದೆವು. ಸರ್ಕಾರ ಕಳೆದ ತಿಂಗಳು ದರ ನಿಗದಿ ಮಾಡಿದೆ ಎಂದು ಓಲಾ (Ola) ಮತ್ತು ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ನೀರ್ ಪಾಷ ಹೇಳಿದ್ದಾರೆ.
ಆಟೊರಿಕ್ಷಾ ಮಾದರಿಯಲ್ಲಿ ರಸ್ತೆಯಲ್ಲಿ ಈ ವಾಹನಗಳಲ್ಲಿ ಪ್ರಯಾಣಿಸಬಹುದು. ವಾಹನ ಖರೀದಿಸುವ ಚಾಲಕರು ಓಲಾ, ಉಬರ್ ರೀತಿಯ ಅಪ್ ಜತೆಗೂಡಿಯೂ ಸೇವೆ ಒದಗಿಸಲು ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.