ಬೆಂಗಳೂರು, ಏ.21 www.bengaluruwire.com : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಏ.13ರಿಂದ 20ರ ವರೆಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು. ರಾಷ್ಟ್ರೀಯ ಪಕ್ಷಗಳು ಸೇರಿದಂತೆ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಾರೆ 3632 ಅಭ್ಯರ್ಥಿಗಳಿಂದ 5,102 ನಾಮಪತ್ರಗಳು ಸಲ್ಲಿಕೆಯಾಗಿದೆ.
ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಏ.21ರಂದು ನಡೆಯಲಿದೆ. ಹಾಗೆಯೇ ನಾಮಪತ್ರ ಹಿಂಪಡೆಯಲು ಏ.24ರ ಸೋಮವಾರ ಕೊನೆಯ ದಿನವಾಗಿದೆ. ಆ ಬಳಿಕ ಮೇ.10ರಂದು ಮತದಾನ ನಡೆದು, ಮೇ.13ರಂದು ಮತಎಣಿಕಯ ನಂತರ ಫಲಿತಾಂಶ ಪ್ರಕಟವಾಗಲಿದೆ. ಏ.20ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ನಿನ್ನೆ ಒಂದೆ ದಿನವೇ ಒಟ್ಟಾರೆ 1,691 ಅಭ್ಯರ್ಥಿಗಳು 1,934 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಆ ಪೈಕಿ 1,544 ಪುರುಷರು ಹಾಗೂ 146 ಮಹಿಳೆಯರು ಹಾಗೂ 1 ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
2023ರ ಈ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಒಟ್ಟಾರೆ 3,632 ಅಭ್ಯರ್ಥಿಗಳ ಪೈಕಿ 3,327 ಪುರುಷ ಅಭ್ಯರ್ಥಿಗಳು ಹಾಗೂ 304 ಮಹಿಳೆಯರು ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಒಟ್ಟಾರೆ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಪೈಕಿ ಶೇ.91.60ರಷ್ಟು ಪುರುಷ ಅಭ್ಯರ್ಥಿಗಳಾಗಿದ್ದರೆ, ಕೇವಲ ಶೇ.8.37ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಅಲ್ಲಿಗೆ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಎಂಬುದಕ್ಕೆ ರಾಜಕೀಯ ಪಕ್ಷಗಳು ಎಷ್ಟು ಒತ್ತು ಕೊಟ್ಟಿವೆ ಎಂಬುದು ಇದರಿಂದ ಮನವರಿಕೆಯಾಗುತ್ತದೆ.
ವಿಧಾನಸಭಾ ಚುನಾವಣೆಗಾಗಿ ಏ.13ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿತ್ತು. ಮೊದಲ ದಿನವೇ 221 ನಾಮಪತ್ರ ಸಲ್ಲಿಸಲಾಗಿತ್ತು. ಈ ಬಳಿಕ ಏ.20ರ ಇಂದು ಕೊನೆಯ ದಿನವಾಗಿದ್ದು. ಎಲ್ಲೆಡೆ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇವಾರಿಕೆಯನ್ನು ಸಲ್ಲಿಸಿದ್ದಾರೆ.
ಯಾವ ಯಾವ ಪಕ್ಷಗಳಿಂದ ಎಷ್ಟೆಷ್ಟು ನಾಮಪತ್ರ ಸಲ್ಲಿಕೆಯಾಗಿದೆ? :
ಬಿಜೆಪಿಯಿಂದ ಒಟ್ಟಾರೆ 707, ಕಾಂಗ್ರೆಸ್ ನಿಂದ 651, ಜೆಡಿಎಸ್ ನಿಂದ 455, ಆಮ್ ಆದ್ಮಿ ಪಕ್ಷದಿಂದ ಒಟ್ಟಾರೆ 373 ನಾಮಪತ್ರ, ಬಿಎಸ್ ಪಿಯಿಂದ 179, ಸಿಪಿಐಎಮ್ ನಿಂದ 5, ಎನ್ ಪಿಪಿಯಿಂದ 5 ನಾಮಪತ್ರಗಳು ಸಲ್ಲಿಕೆಯಾಗಿದೆ. ಇನ್ನು ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳಿಂದ 1007 ನಾಮಪತ್ರಗಳು ಹಾಗೂ 1,720 ಸ್ವತಂತ್ರ್ಯ ಅಭ್ಯರ್ಥಿಗಳು ನಾಮಿನೇಷನ್ ಸಲ್ಲಿಕೆ ಮಾಡಿದ್ದಾರೆ.
200 ಕೋಟಿ ರೂ. ಮೌಲ್ಯಕ್ಕಿಂತ ಹೆಚ್ಚು ನಗದು- ವಸ್ತು ವಶ :
ರಾಜ್ಯದಲ್ಲಿ ಮಾ.29ರಂದು ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಏ.20ರ ವರೆಗೆ ಮತದಾರರಿಗೆ ಹಂಚಲು ವಿವಿಧ ರಾಜಕೀಯ ಪಕ್ಷಗಳು, ಅವರ ಬೆಂಬಲಿಗರು, ಅಭ್ಯರ್ಥಿಗಳು ಸಂಗ್ರಹಿಸಿಟ್ಟಿದ್ದ ಅಥವಾ ಸಾಗಿಸುವ ಸಂದರ್ಭದಲ್ಲಿ 200 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ನಗದು, ಮದ್ಯ, ಬೆಲೆ ಬಾಳುವ ಆಭರಣ, ಕೊಡುಗೆ ನೀಡುವ ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿದೆ.