ಬೆಂಗಳೂರು, ಏ.19 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಏ.30ರ ಒಳಗೆ ಆಸ್ತಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ಶೇ.5ರಷ್ಟು ರಿಯಾಯಿತಿಯನ್ನು ಪಾಲಿಕೆ ಘೋಷಿಸಿದೆ.
ನಗರದ ಆಸ್ತಿ ಮಾಲೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು https://bbmptax.karnataka.gov.in/ ವೆಬ್ ಲಿಂಕ್ ಮೂಲಕ ಆನ್ ಲೈನ್ ನಲ್ಲಿ ತೆರಿಗೆ ಪಾವತಿಸಬಹುದಾಗಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಇದೇ ಅವಧಿಯಲ್ಲಿ 600 ಕೋಟಿ ರೂ. ಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದ್ದರೆ ಈ ಬಾರಿ ಕೇವಲ 313 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
ಕಳೆದ ವರ್ಷ ಜನವರಿ, ಫೆಬ್ರವರಿ ತಿಂಗಳಿಂದಲೇ 2022-23ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಕ್ಕೆ ಗುರಿ ನಿಗದಿಪಡಿಸಿ ಒತ್ತಡ ಹೇರಿದ್ದರಿಂದ ಕಂದಾಯ ಸಿಬ್ಬಂದಿ ಪ್ರಯತ್ನದ ಪರಿಣಾಮ ಮೇ ತಿಂಗಳ ಒಳಗೆ 2,005 ಕೋಟಿ ರೂ. ನಷ್ಟು ದಾಖಲೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿತ್ತು.
ಆದರೆ ಈ ಬಾರಿ 2022ರಿಂದಲೇ ಪಾಲಿಕೆ ಕಂದಾಯ ವಿಭಾಗದದ ಅಧಿಕಾರಿ, ಸಿಬ್ಬಂದಿಯನ್ನು ಸಾರ್ವತ್ರಿಕ ವಿಧಾನಸಭಾ ಚುನಾವಣಾ ಕೆಲಸಕ್ಕೆ ನಿಯೋಜಿಸಿದ್ದರಿಂದ ಹಾಗೂ ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಪ್ರಕರಣದಲ್ಲಿ ಬಿಬಿಎಂಪಿಯ ಹಲವು ಅಧಿಕಾರಿ- ಸಿಬ್ಬಂದಿ ವಿರುದ್ಧ ಆರೋಪ ಕೇಳಿ ಬಂದು ಕೆಲವರನ್ನು ಪೊಲೀಸರು ಬಂಧಿಸಿದ್ದರು. ಮಾರ್ಚ್ 29ರಂದು ಚುನಾವಣಾ ನೀತಿಸಂಹಿತೆ ಜಾರಿಗೆ ಬಂದ ನಂತರ ಚುನಾವಣಾ ಕೆಲಸ ಮತ್ತಷ್ಟು ಹೆಚ್ಚಾಗಿದೆ. ಇದೆಲ್ಲವೂ 2023-24ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಇಳಿಕೆಯಾಗಲು ಕಾರಣವಾಗಿದೆ ಎಂದು ಪಾಲಿಕೆ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.