ಬೆಂಗಳೂರು, ಏ.18 www.bengaluruwire.com : ನಗರದ ಕೆಂಪೇಗೌಡ ಅಂತರರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2022-23ರ ಅವಧಿಯಲ್ಲಿ ಒಟ್ಟು 31.91 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುವ ಮೂಲಕ ನಿರೀಕ್ಷೆಗೂ ಮೀರಿದ ದಾಖಲೆ ನಿರ್ಮಿಸಿದೆ. ಜೊತೆಗೆ, ಬಹುಬೇಗನೆ ಹಾಳಾಗುವ (Perishable) ಸರಕು ಸಾಗಣೆಯಲ್ಲೂ ತನ್ನ ಮುಂಚೂಣಿಯನ್ನು ಕಾಯ್ದಿರಿಸಿಕೊಂಡಿದೆ.
2022-23 ವಾರ್ಷಿಕ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಒಟ್ಟು 31.91 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, 28.12 ದಶಲಕ್ಷ ದೇಶೀಯ ಮತ್ತು 3.78 ದಶಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಂಡುಬಂದಿದೆ. ದೇಶೀಯ (DOM) ವಲಯವು ಶೇ. 85ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಅಂತಾರಾಷ್ಟ್ರೀಯ (INT) ವಲಯವು ಶೇ. 245ರಷ್ಟು ಬೆಳವಣಿಗೆ ಕಂಡಿದೆ.
ಇನ್ನು, ಸರಕು ಸಾಗಣೆ (Cargo) ವಿಭಾಗಕ್ಕೆ ಬಂದರೆ, ಬೆಂಗಳೂರು ವಿಮಾನ ನಿಲ್ದಾಣವು ಸತತ ಎರಡನೇ ವರ್ಷವೂ ಭಾರತದಲ್ಲಿ ಪೆರಿಷಬಲ್ ಸರಕು ಸಾಗಣೆಯಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಮುಂದುವರೆದಿದೆ.
ಬಿಐಎಎಲ್ನ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, ಈ ವಾರ್ಷಿಕ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿನ ಚೇತರಿಕೆ ಅತ್ಯಂತ ಸಂತಸ ಮೂಡಿಸಿದೆ. ವಾಯುಯಾನ ಉದ್ಯಮದ ಚೇತರಿಕೆಯು ಒಂದು ಅಸಾಧಾರಣ ಕಾರ್ಯವಾಗಿದೆ. ನಮ್ಮ ಪ್ರಯಾಣಿಕರು, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಸಹಾಯ ಹಾಗೂ ಸರ್ಕಾರಿ ಸಂಸ್ಥೆಗಳ ಅಚಲ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಪ್ರಮುಖ ಮಾರ್ಗಗಳ ಮರು-ಪರಿಚಯ ಮತ್ತು ಪ್ರಮುಖ ವ್ಯಾಪಾರ ಮತ್ತು ವಿರಾಮ ಸ್ಥಳಗಳ ನಡುವೆ ಹೊಸ ಸಂಪರ್ಕಗಳ ಸೇರ್ಪಡೆಯು ತ್ವರಿತ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಇನ್ನು, ಪ್ರಯಾಣಿಕರ ಅನುಕೂಲಕ್ಕಾಗಿ ಚಾಲನೆ ನೀಡಿದ ಹೊಸ ಸೇವೆಗಳ ಪೈಕಿ, ಸಿಡ್ನಿಗೆ ಕ್ವಾಂಟಾಸ್ನ ಸೇವೆ, ಎಮಿರೇಟ್ಸ್ನಿಂದ ದೈನಂದಿನ ಏರ್ಬಸ್ A380 ಸೇವೆ ಆರಂಭ ಪ್ರಮುಖವಾಗಿದೆ.
ಟರ್ಮಿನಲ್ 2 (T2) ನ ಇತ್ತೀಚಿನ ಕಾರ್ಯಚರೆಣೆಯಿಂದಾಗಿ, ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಗೇಟ್ವೇ ಆಗಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಹಿಂದೆಂದಿಗಿಂತಲೂ ಉತ್ತಮವಾಗಿ ಸಜ್ಜಾಗಿದೆ. ಅಲ್ಲದೆ ಇಲ್ಲಿನ ಪ್ರಯಾಣಿಕರ ತೃಪ್ತಿ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುವುದನ್ನು ಮುಂದುವರಿಸುವುದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಹಾಗೂ ಉತ್ತಮಗೊಳಿಸುವ ತಮ್ಮ ಬದ್ಧತೆಯು ಅಚಲವಾಗಿ ಉಳಿದಿದೆ ಎಂದು ಅವರು ತಿಳಿಸಿದರು.
ದೇಶ- ವಿದೇಶಗಳ 100 ಸ್ಥಳಗಳಿಗೆ ವಿಮಾನ ಸೇವೆ :
ಕೆಐಎಲ್ ವಿಮಾನ ನಿಲ್ದಾಣವು ಒಟ್ಟು 100 ಸ್ಥಳಗಳಿಗೆ, ಅಂದರೆ ದೇಶದಾದ್ಯಂತ 75 ಸ್ಥಳಗಳಿಗೆ ಮತ್ತು 25 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಇದು ಸ್ಥಿರವಾದ ಚೇತರಿಕೆಗೆ ಕೊಡುಗೆ ನೀಡುತ್ತದೆ.
ಶೇ. 50.8 ಒಟ್ಟಾರೆ ಬೆಳವಣಿಗೆಯೊಂದಿಗೆ ವಾಯು ಸಾರಿಗೆ ಚಲನೆಗಳಲ್ಲಿ (ಎಟಿಎಂ) ಚೇತರಿಕೆ ಕಾಣುತ್ತಿದೆ. ದೇಶೀಯ ಎಟಿಎಂಗಳು ಶೇ.49.8ರಷ್ಟು ಬೆಳವಣಿಗೆ ಕಂಡರೆ ಅಂತಾರಾಷ್ಟ್ರೀಯ ಬೆಳವಣಿಗೆಯು ಶೇ.59.6 ರಷ್ಟಿದೆ. ಈ ವರ್ಷದ ಫೆಬ್ರವರಿ 26 ರಂದು, ಒಂದೇ ದಿನದಲ್ಲಿ 1,14,299 ಪ್ರಯಾಣಿಕರು ಪ್ರಯಾಣಿಸಿದ್ದು, ಇದು 2023ರ ವಾರ್ಷಿಕ ಅವಧಿಯಲ್ಲಿ ಅತಿ ಹೆಚ್ಚು ಎನ್ನಲಾಗಿದೆ.
ಪ್ರಮುಖ ಸ್ಥಳಗಳಿಗೆ ವಾಯುಯಾನ ವಿಸ್ತರಣೆ:
ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ಶೇ.100 ಹೆಚ್ಚು ಕಾರ್ಯಾಚರಣೆಯನ್ನು ಮರು ಪ್ರಾರಂಭಿಸಿವೆ. ಹೆಚ್ಚುವರಿಯಾಗಿ, ವಿಮಾನ ನಿಲ್ದಾಣವು ಹಲವಾರು ಅಂತಾರಾಷ್ಟ್ರೀಯ ಮಾರ್ಗಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಉದಾಹರಣೆಗೆ, ಕ್ವಾಂಟಾಸ್ ಏರ್ವೇಸ್ ನಾಲ್ಕು ಸಾಪ್ತಾಹಿಕ ತಡೆರಹಿತ ಬೆಂಗಳೂರು-ಸಿಡ್ನಿ ವಿಮಾನವನ್ನು ಪ್ರಾರಂಭಿಸಿದೆ. ಎಮಿರೇಟ್ಸ್ನ A380 ಕಾರ್ಯಾಚರಣೆಗಳು, ಬೆಂಗಳೂರು-ಕುವೈತ್ ಮಾರ್ಗದಲ್ಲಿ ಎರಡು ಜಜೀರಾ ಏರ್ವೇಸ್, ಮಲಿಂಡೋ ಏರ್ (ಬೆಂಗಳೂರಿನ ಹೊಸ ವಾಹಕ ) ಪ್ರಾರಂಭಗೊಂಡಿದೆ.
ದೇಶೀಯ ವಿಮಾನ ಹಾರಾಟ :
ದೇಶೀಯ ವಿಭಾಗದಲ್ಲಿ, ಆಕಾಶ ಏರ್ ಮುಂಬೈ, ಕೊಚ್ಚಿ, ಅಹಮದಾಬಾದ್, ಚೆನ್ನೈ, ಪುಣೆ, ವೈಜಾಗ್, ಅಗರ್ತಲಾ, ಲಕ್ನೋ ಮತ್ತು ದೆಹಲಿಯಂತಹ 9 ವಲಯಗಳಿಗೆ 25 ದೈನಂದಿನ ನಿರ್ಗಮನದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇಂಡಿಗೋ ಶೇ. 57ರಷ್ಟು ವಿಮಾನ ಹಾರಾಟ ನಡೆಸುವ ಮೂಲಕ ಕೆಐಎಎಲ್ ವಿಮಾನ ನಿಲ್ದಾಣದಿಂದ ದೇಶೀಯ ಪ್ರಯಾಣಿಕರ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ. ನಂತರ ಟಾಟಾ ಗ್ರೂಪ್ ಶೇ. 27ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆಕಾಶ ಏರ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೇವಲ ಎಂಟು ತಿಂಗಳಲ್ಲಿ, ಬೆಂಗಳೂರು ಏರ್ಪೋರ್ಟ್ನ ದೇಶೀಯ ಕಾರ್ಯಾಚರಣೆಗಳಲ್ಲಿ ಶೇ.10ರಷ್ಟು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ರಮುಖ ವಾಯುಯಾನ ಗೇಟ್ವೇ :
ಬೆಂಗಳೂರು ವಿಮಾನ ನಿಲ್ದಾಣದ ವಿಶಾಲವಾದ ಸಂಪರ್ಕ ಪ್ರದೇಶವು 20 ಕ್ಕೂ ಹೆಚ್ಚು ನಗರಗಳಿಗೆ 75 ನಿಮಿಷಗಳ ಹಾರುವ ಅಂತರದಲ್ಲಿ ಸಂಪರ್ಕ ಕಲ್ಪಿಸುತ್ತದೆ ಮತ್ತು 100+ ದೈನಂದಿನ ವಿಮಾನಗಳನ್ನು ನೀಡುತ್ತದೆ. ವರ್ಗಾವಣೆ ದಟ್ಟಣೆಯನ್ನು ನಿರ್ಮಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಪ್ರಮುಖ ವಾಯುಯಾನ ಗೇಟ್ವೇ ಆಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಸರಕು-ಸೇವೆ ಬೆಳವಣಿಗೆ:
ಬೆಂಗಳೂರು ಕಾರ್ಗೋ ವಿಮಾನ ನಿಲ್ದಾಣವು ಪ್ರಸಕ್ತ ವರ್ಷದಲ್ಲಿ ಜನವರಿ 2023 ರವರೆಗೆ 44,143 ಮೆಟ್ರಿಕ್ ಟನ್ (MT) ಮತ್ತು 2022 ರ ಅವಧಿಯಲ್ಲಿ 52,366 ಮೆಟ್ರಿಕ್ ಟನ್ (MT) ನಷ್ಟು ಪೆರಿಷಬಲ್ ಸರಕುಗಳನ್ನು ಸಂಸ್ಕರಿಸಿದೆ. ಬೆಂಗಳೂರು ಕಾರ್ಗೋ ಭಾರತದ ಶೇ.28 ಮತ್ತು ದಕ್ಷಿಣ ಭಾರತದ ಮಾರುಕಟ್ಟೆಯ ಶೇ.45 ರಷ್ಟು ಪೆರಿಷಬಲ್ ಸರಕುಗಳಿಗೆ ಕೊಡುಗೆ ನೀಡುತ್ತಿದೆ. ಅಗ್ರ ರಫ್ತು ಸರಕುಗಳಲ್ಲಿ ಪ್ರಮುಖವಾಗಿ ಕೋಳಿ ಉತ್ಪನ್ನಗಳು, ಹೂವು ಸೇರಿದಂತೆ ಹಲವು ಬಗೆಯ ಸರಕುಗಳು ಮುಂಚೂಣಿಯಲ್ಲಿವೆ.
ಇನ್ನು, ಫಾರ್ಮಾ, ಇಂಜಿನಿಯರಿಂಗ್ ಸರಕುಗಳು, ಸಿದ್ಧ ಉಡುಪುಗಳು ಮತ್ತು ಎಲೆಕ್ಟ್ರಿಕಲ್ ವಸ್ತುಗಳ ರಫ್ತಿನಲ್ಲಿಯೂ ಬೆಳವಣಿಗೆ ಕಂಡು ಬಂದಿದೆ. ಪ್ರೇಮಿಗಳ ದಿನಾಚರಣೆ (ವ್ಯಾಲೆಂಟೈನ್ಸ್ ಡೇ) ಸಮಯದಲ್ಲಿ, ಬೆಂಗಳೂರು ವಿಮಾನ ನಿಲ್ದಾಣವು 17.4 ದಶಲಕ್ಷ ಗುಲಾಬಿಗಳನ್ನು ರಫ್ತು ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.14ರಷ್ಟು ಏರಿಕೆ ಸೂಚಿಸುತ್ತದೆ. ಮೇ 24, 2023 ರಿಂದ ಮುಂದಿನ 15 ವರ್ಷಗಳವರೆಗೆ ತನ್ನ ಕಾರ್ಗೋ ಟರ್ಮಿನಲ್ಗಳನ್ನು ನಿರ್ವಹಿಸಲು ಹೊಸ ಪಾಲುದಾರರ ನಿರೀಕ್ಷೆಯಲ್ಲಿದೆ. ಸುಮಾರು 1 ದಶಲಕ್ಷ ಮೆಟ್ರಿಕ್ ಟನ್ಗಳಷ್ಟು ಸರಕು ನಿರ್ವಹಣೆ ಸಾಮರ್ಥ್ಯ ಸೃಷ್ಟಿಸುವ ಗುರಿಯನ್ನು ಇವರು ಹೊಂದಿದ್ದಾರೆ.