ಬೆಂಗಳೂರು, ಏ.17 www.bengaluruwire.com : ಬಿಜೆಪಿಯಿಂದ ಹುಬ್ಬಳ್ಳಿ- ಧಾರವಾಡ ಕೇಂದ್ರದ ಕ್ಷೇತ್ರದ ಟಿಕೆಟ್ ವಂಚಿತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಮವಾರ ಇಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂದಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸೇರ್ಪಡೆಗೊಂಡರು. ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ- ಧಾರವಾಡ ಕೇಂದ್ರದ ಕ್ಷೇತ್ರದಿಂದಲೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ‘ಬಿಜೆಪಿಯಲ್ಲಿ ನಾನು ಯಾವುದೇ ಹುದ್ದೆಗೆ ಅಂಟಿಕೊಂಡಿರಲಿಲ್ಲ. ನಮ್ಮ ಇಡೀ ಕುಟುಂಬ ಜನಸಂಘದ ಸೇವೆ ಮಾಡಿದೆ. ತಾವು ಆರ್ ಎಸ್ ಎಸ್ ನಲ್ಲಿ ಸೇವೆ ಸಲ್ಲಿಸಿದ್ದೇನೆ. ಬಿಜೆಪಿಯಲ್ಲಿ ಕಳೆದ ಆರು ತಿಂಗಳಿಂದ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ. ಇದರಿಂದ ಬೇಸರವಾಗಿತ್ತು. ನನಗೆ ಟಿಕೆಟ್ ನೀಡುವುದಿಲ್ಲ ಎಂದು ಮೊದಲೇ ಹೇಳಿದ್ದರೆ ನನಗೆ ಬೇಜಾರಾಗುತ್ತಿರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಈ ವಿಷಯ ಹೇಳಿ ಅವಮಾನ ಮಾಡಿದರು’ ಎಂದು ನೊಂದು ನುಡಿದರು.
‘ಕರ್ನಾಟಕ ಬಿಜೆಪಿ ಕಚೇರಿ ಕೆಲವೇ ಕೆಲವು ವ್ಯಕ್ತಿಗಳ ವಶದಲ್ಲಿದ್ದು, ಸ್ವಾರ್ಥ ಸಾಧನೆಗಾಗಿ ಪಕ್ಷ ಕಟ್ಟಿ ಬೆಳೆಸಿದವರನ್ನು ಕಡೆಗಣಿಸುತ್ತಿದ್ದಾರೆ. ಈ ಎಲ್ಲ ವಿದ್ಯಮಾನ ಬಿಜೆಪಿ ಕೇಂದ್ರ ನಾಯಕರ ಗಮನಕ್ಕೆ ಬರುತ್ತಿಲ್ಲ. ಬಿಜೆಪಿ ಯಶಸ್ಸು ಈಗ ವ್ಯಕ್ತಿ ಕೇಂದ್ರಿತವಾಗುತ್ತಿದೆ. ತಾವು ಟಿಕೆಟ್ ಸಿಗಲಿಲ್ಲ ಎಂದು ಮೋದಿ, ಅಮಿತ್ ಶಾ, ನಡ್ಡಾ ಅವರ ವಿರುದ್ಧ ಟೀಕೆ ಮಾಡುವುದಿಲ್ಲ. ‘ ಎಂದು ಹೇಳಿದರು.
ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಪ್ರತಿಯಾಗಿ ಶೆಟ್ಟರ್ ಶನಿವಾರವೇ ಬೆಂಬಲಿಗರ ಸಭೆ ನಡೆಸಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಅವರನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡ ಮನವೊಲಿಸುವ ಪ್ರಯತ್ನ ವಿಫಲಾದ ಬೆನ್ನಲ್ಲೇ ಭಾನುವಾರ ಭಾನುವಾರ ಹೆಲಿಕಾಪ್ಟರ್ ನಲ್ಲಿ ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಬಳಿಕ ಹುಬ್ಬಳ್ಳಿಗೆ ತೆರಳಿ, ಪುನಃ ಬೆಂಗಳೂರಿಗೆ ಬಂದು ತಮ್ಮ ಬೀಗರಾದ ಶಾಮನೂರು ಶಿವಶಂಕರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಗಂಭೀರ ಚರ್ಚೆ ನಡೆಸಿದ್ದರು.
ಇಂದಿನ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.