ಬೆಂಗಳೂರು, ಏ.14 www.bengaluruwire.com : ವಿಧಾನಸಭೆ ಚುನಾವಣೆಯ ಬಿಸಿಗಿಂತ ರಾಜ್ಯದಲ್ಲಿ ಬೇಸಿಗೆ ಬಿಸಿಲು ತೀವ್ರವಾಗಿ ಹೆಚ್ಚಾಗುತ್ತಿದೆ. ಕಲಬುರ್ಗಿಯಲ್ಲಿ ಗುರುವಾರ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಈ ಸಲದ ಬೇಸಿಗೆಯಲ್ಲಿ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚು ಉಷ್ಣಾಂಶವಾಗಿದೆ. ಆದರೆ ರಾಯಚೂರಿನಲ್ಲಿ 40 ಡಿಗ್ರಿ ತಾಪಮಾನವಿತ್ತು.
ರಾಜ್ಯದಾದ್ಯಂತ ಕಳೆದ ವಾರದಿಂದ ಬಿಸಿಲ ಬೇಗೆ ಏರಿಕೆಯಾಗುತ್ತಿದೆ. ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ತಂಪು ಪಾನೀಯ, ಎಳನೀರು, ಐಸ್ ಕ್ರೀಂ ಮೊರೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಯಲ್ಲಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡಿದೆ. ಏಪ್ರಿಲ್ 5 ರಿಂದ 13ರವರೆಗೆ ಆರು ದಿನ 40 ಡಿಗ್ರಿಗೂ ಅಧಿಕ ಉಷ್ಣಾಂಶ ಅಲ್ಲಿ ದಾಖಲಾಗಿದೆ. ವಾಡಿಕೆಗಿಂತ ಎರಡು ಡಿಗ್ರಿ ಹೆಚ್ಚಳ ಆಗಿದೆ. ರಾಯಚೂರಿನಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗದಗ 38.9, ಕೊಪ್ಪಳ 38.07, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ 37.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರದಿಂದ ಬೀಸುತ್ತಿರುವ ಗಾಳಿಯಲ್ಲಿ ತೇವಾಂಶ ಇಲ್ಲದ ಕಾರಣ ಉಷ್ಣಾಂಶದಲ್ಲಿ ಏರಿಕೆ ಕಂಡಿದೆ. ಕರಾವಳಿಯಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಯ ಮುನ್ಸೂಚನೆಯಂತೆ ಮುಂದಿನ 24 ಗಂಟೆಗಳಲ್ಲಿ ತಿಳಿಯಾಕಾಶವಿದ್ದು, ಗರಿಷ್ಠ ಉಷ್ಣಾಂಶ 36 ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕಡಿತ ಈ ಬೇಸಿಗೆಯಲ್ಲಿ ಹಿಂದಿನಷ್ಟು ಆಗುತ್ತಿಲ್ಲ. ಹಾಗಾಗಿ ಅಷ್ಟರ ಮಟ್ಟಿಗೆ ನಾಗರೀಕರು ಬಚಾವಾಗಿದ್ದಾರೆ.