ಬೆಂಗಳೂರು, ಮಾ.31 www.bengaluruwire.com : ಚುನಾವಣಾ ನೀತಿಸಂಹಿತೆ ಜಾರಿಯಾದ ನಂತರ ಯಾವೆಲ್ಲ ಕಾಮಗಾರಿ ಪ್ರಾರಂಭವಾಗಿಲ್ಲ ಅದು ಶುರುವಾಗುವುದಿಲ್ಲ. ಈಗಾಗಲೇ ಕಾರ್ಯಾದೇಶ ನೀಡಿ ಕೆಲಸ ಆರಂಭವಾದ ಕೆಲಸಗಳನ್ನಷ್ಟೇ ಮಾಡಬಹುದು ಎಂದು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿಗಳ ಅಂದಾಜುವೆಚ್ಚ, ಮೇಲಧಾರಿಗಳಿಂದ ಒಪ್ಪಿಗೆ ಪಡೆದು ಅನುಷ್ಠಾನ ಮಾಡುವ ಹಿನ್ನಲೆಯಲ್ಲಿ ಅವರನ್ನೇ ಚುನಾವಣಾ ನೀತಿಸಂಹಿತೆ ಮೇಲ್ವಿಚಾರಣೆಗೆ ವಹಿಸದೆ ಪ್ರತ್ಯೇಕವಾಗಿ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದರು.
ಹೀಗಾಗಿ ಬಹಳ ಕನಿಷ್ಠ ಪ್ರಮಾಣದಲ್ಲಿ ಪಾಲಿಕೆ ಎಂಜಿನಿಯರ್ ಗಳನ್ನು ಸಾಮಾನ್ಯ ಚುನಾವಣಾ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ಬೆಳಗ್ಗೆ ಎಂಜಿನಿಯರ್ ಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಳತೆ ಪುಸ್ತಕದಲ್ಲಿ ಅದನ್ನು ದಾಖಲಿಸಿ ನಂತರ ಚುನಾವಣಾ ಕೆಲಸಗಳಿಗೆ ಬರುತ್ತಾರೆ. ನಗರದಲ್ಲಿ ಹಾಕಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆಗೆಯಲು ಎಂಜಿನಿಯರ್ ಗಳು ತಮ್ಮ ಬಳಿಯಿರುವ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುತ್ತೇವೆ.
ಹೀಗಾಗಿ ನಗರದಲ್ಲಿ ನಡೆಯುತ್ತಿರುವ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಯಾವುದೇ ಸಮಸ್ಯೆಯಿಲ್ಲದೆ ನಡೆಯಲಿದೆ. ನಗರದಲ್ಲಿನ ಬೃಹತ್ ನೀರುಗಾಲುವೆ ವಿಭಾಗದಲ್ಲಿ ಮಳೆಗಾಲ ಸಮೀಪಿಸುತ್ತಿರುವ ಕಾರಣ ಇಲ್ಲಿನ ರಾಜಕಾಲುವೆ ನಿರ್ಮಾಣ ಕೆಲಸಗಳು, ಮಳೆ ನೀರು ಹರಿಯುವಿಕೆಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ಯಾವುದೇ ಪಕ್ಷಗಳು ಅಥವಾ ಉಮೇದುದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿವುದು ತಿಳಿದು ಬಂದರೆ ಅಂತಹವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.