ಬೆಂಗಳೂರು, ಮಾ.17 www.bengaluruwire.com : ರಾಜ್ಯ ಸರ್ಕಾರದ ಆದಾಯದಲ್ಲಿ ಪ್ರಮುಖ ಮೂಲವಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮಾ.15ರ ತನಕ 16,711 ಕೋಟಿ ರೂ. ಆದಾಯ ಸಂಗ್ರಹಿಸಿ ಪರಿಷ್ಕೃತ ಗುರಿಯ ತಲುಪುವುದರ ಸನಿಹದಲ್ಲಿದೆ. ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಾಗ ಹಾಗೂ ಈ ವರ್ಷಾಂತ್ಯ ಪೂರ್ಣವಾಗಲು ದಿನಗಣನೆ ಆರಂಭವಾಗಿರುವಾಗ ಇಲಾಖೆಯು ಆದಾಯ ಸಂಗ್ರಹದಲ್ಲಿ ಹೊಸ ಇತಿಹಾಸ ಬರೆದಿದೆ.
2022-23ನೇ ಸಾಲಿನಲ್ಲಿ ಸರ್ಕಾರ ಮೊದಲಿಗೆ 15,807.91 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ನೀಡಿತ್ತು. ಆದರೆ ಈ ಗುರಿಯನ್ನು ಇಲಾಖೆಯು ಡಿಸೆಂಬರ್ 2022ರಲ್ಲೇ ಮಾಡಿ ಮುಗಿಸಿತ್ತು. ಬಳಿಕ ಸರ್ಕಾರವು 17,000 ಕೋಟಿ ರೂ. ಪರಿಷ್ಕೃತ ಗುರಿಯನ್ನು ನೀಡಿದ್ದು, ಇದನ್ನು ಮಾ.31ರ ಒಳಗೆ ತಲುಪಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇನ್ನು ಕೇವಲ 288.91 ಕೋಟಿ ರೂ. ಸಂಗ್ರಹಿಸಬೇಕಿದೆ. ಒಂದೊಮ್ಮೆ ಸರ್ಕಾರ ನೀಡಿದ ಗುರಿಯನ್ನು ತಲುಪಿದರೆ ರಾಜ್ಯದ ನೋಂದಣಿ ಮತ್ತು ಮುಂದ್ರಾಂಕ ಇಲಾಖೆ ಇತಿಹಾಸದಲ್ಲೇ ಇದೊಂದು ಮತ್ತೊಂದು ದಾಖಲೆಯಾಗಲಿದೆ.
ಏಕೆಂದರೆ ಈ ಹಿಂದೆ 2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಈ ಇಲಾಖೆಗೆ 11,844.59 ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಿತ್ತು. ಆದರೆ ಇಲಾಖೆಯು ಆಗ ಮೊತ್ತ ಮೊದಲ ಬಾರಿಗೆ 12,917.79 ಕೋಟಿ ರೂ. ಆದಾಯ ಸಂಗ್ರಹಿಸಿ ಹೊಸ ದಾಖಲೆ ಸೃಷ್ಟಿಸಿತ್ತು. ಕರೋನಾ ಸೋಂಕಿನಿಂದ ಆರ್ಥಿಕ ಸಂಪನ್ಮೂಲ ಸಂಗ್ರಹದಲ್ಲಿ ತತ್ತರಿಸಿ ಹೋಗಿದ್ದ ರಾಜ್ಯ ಸರ್ಕಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೈ ಹಿಡಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾ.15ರ ವರೆಗೆ 3,793.30 ಕೋಟಿ ರೂ. ಹೆಚ್ಚಿನ ಆದಾಯವನ್ನು ಸ್ಟಾಂಪ್ ಅಂಡ್ ರಿಜಿಸ್ಟ್ರೇಷನ್ ಇಲಾಖೆಯು ಸಂಗ್ರಹಿಸಿದಂತಾಗಿದೆ.
2022-23ನೇ ಸಾಲಿನಲ್ಲಿ ಈ ತನಕ 24,10,855 ಆಸ್ತಿ, ಒಪ್ಪಂದ ಮತ್ತಿತರ ದಾಖಲೆಗಳನ್ನು ನೋಂದಣಿಯಾಗಿರುವುದು ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ಕಳೆದ ವರ್ಷ ಅಂದರೆ 2021-2022ರಲ್ಲಿ 19,93,283 ದಾಖಲೆಗಳನ್ನು ಇಲಾಖೆಯು ರಿಜಿಸ್ಟರ್ ಮಾಡಿಕೊಂಡಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ 4,17,572 ದಾಖಲೆಗಳು ಹೆಚ್ಚುವರಿಯಾಗಿ ನೋಂದಣಿ ಮಾಡಲಾಗಿದೆ.
2020-21ರ ಆರಂಭದಲ್ಲಿ ಕರೋನಾ ಸೋಂಕಿನ ಮೊದಲ ಅಲೆ ವ್ಯಾಪಕವಾದಾಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯ ನೆಲಕಚ್ಚಿತ್ತು. 2021-22ನೇ ಆರ್ಥಿಕ ವರ್ಷದ ಆಗಸ್ಟ್ ಬಳಿಕ ಇಲಾಖೆಯಲ್ಲಿ ಆಸ್ತಿ, ಒಪ್ಪಂದ ಮತ್ತಿತರ ದಾಖಲೆಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರದಲ್ಲಿ ಗಮನಾರ್ಹವಾಗಿ ಏರಿಕೆಯಾಗುತ್ತಾ ಬಂದಿತ್ತು.
ಮಾರ್ಗಸೂಚಿ ದರದಲ್ಲಿ ಶೇ.10 ರಿಯಾಯಿತಿ ಲೆಕ್ಕಾಚಾರ ಫಲ ನೀಡಿತ್ತು :
ಕರೋನಾ ಸೋಂಕಿನಿಂದ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರು ಆರ್ಥಿಕ ಸಮಸ್ಯೆಯಿಂದ ತತ್ತರಿಸಿದ್ದು, ಆಸ್ತಿ ನೋಂದಣಿ ಮತ್ತು ಆರ್ಥಿಕ ವ್ಯವಹಾರಕ್ಕೆ ಚೇತರಿಸಿಕೊಳ್ಳಲು, ರಾಜ್ಯಾದ್ಯಂತ ಇರುವ ಕೃಷಿಭೂಮಿ, ಕೃಷಿಯೇತರ ಭೂಮಿ, ಕಟ್ಟಡ, ಮನೆ, ಅಪಾರ್ಟ್ ಮೆಂಟ್, ಫ್ಲ್ಯಾಟ್, ವಿಲ್ಲಾ, ಭೂಪರಿವರ್ತಿತ ಜಮೀನುಗಳು ಸೇರಿದಂತೆ ವಿವಿಧ ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟ ಮಾಡುವಾಗ, ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. 2022ರ ಜನವರಿ 1ರಿಂದ ಮಾರ್ಚ್ 31ರ ಒಳಗೆ ಖರೀದಿ ಮತ್ತು ಮಾರಾಟ ಮಾಡುವ ಆಸ್ತಿಗಳಿಗೆ ಈ ರಿಯಾಯಿತಿ ಅನ್ವಯವಾಗುತ್ತಿತ್ತು. ಆದ್ದರಿಂದ ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ಸಂಗ್ರಹದಲ್ಲಿ ಏರಿಕೆ ಕಂಡು ಬರಲು ಸಾಧ್ಯವಾಯಿತು.
ಇದರಿಂದ ಪ್ರೇರಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನಃ 2022ರ ಏಪ್ರಿಲ್ 21ರಿಂದ ಮೂರು ತಿಂಗಳವರೆಗೆ ಅಂದರೆ ಆಗಸ್ಟ್ 20ನೇ ತಾರೀಖಿನ ವರೆಗೆ ಈ ರಿಯಾಯಿತಿಯನ್ನು ಮುಂದುವರೆಸಿ ಆದೇಶಿಸಿದ್ದರು. ಹೀಗಾಗಿ 2022-23ನೇ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲೂ ಕೂಡ ಇದೇ ಟ್ರೆಂಡ್ ಮುಂದುವರೆದಿತ್ತು. ಸ್ಟಾಂಪ್ ಎಂಡ್ ರಿಜಿಸ್ಟ್ರೇಷನ್ ಇಲಾಖೆಯಲ್ಲಿ ಆಗಸ್ಟ್ ತಿಂಗಳೊಂದರಲ್ಲೇ 1,433.67 ಕೋಟಿ ರೂ.ಗಳಷ್ಟು ಸಂಗ್ರಹಿಸಿತ್ತು.
ಪ್ರತಿ ತಿಂಗಳು ಇಲಾಖೆಗೆ ಸರಾಸರಿ 1450- 1500 ಕೋಟಿ ರೂ. ಆದಾಯ ಸಂಗ್ರಹ :
ಒಂದಂತೂ ಸತ್ಯ ಕರೋನಾ ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ರಾಜ್ಯದಲ್ಲಿ . ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತೆ ಗರಿಗೆದರಿದಂತಾಗಿದೆ. ಹಾಗಾಗಿ 2022ರ ಆಗಸ್ಟ್ ನಂತರ ಪ್ರತಿ ತಿಂಗಳು ಸರಾಸರಿಯಾಗಿ 1450 ರಿಂದ 1500 ಕೋಟಿ ರೂ. ಮೊತ್ತದ ಆದಾಯ ಇಲಾಖೆ ಖಜಾನೆ ಸೇರುವಂತಾಗಿದೆ. ಪ್ರಸ್ತುತ 2023ರ ಮಾರ್ಚ್ ತಿಂಗಳಲ್ಲಿ 15 ದಿನದಲ್ಲಿ ಇಲಾಖೆಯು 1.22 ಲಕ್ಷ ದಾಖಲೆಗಳನ್ನು ನೋಂದಣಿ ಮಾಡಿ ಶುಲ್ಕದ ರೂಪದಲ್ಲಿ 737.84 ಕೋಟಿ ರೂ.ನಷ್ಟು ಸಂಗ್ರಹಿಸಿದೆ.
ಕಳೆದ 12 ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ಅತಿಹೆಚ್ಚು ಆದಾಯ ಸಂಗ್ರಹ :
ಮುದ್ರಣ ಮತ್ತು ನೋಂದಣಿ ಇಲಾಖೆಯ 2011-12ನೇ ಸಾಲಿನಿಂದ 2022-23ನೇ ಸಾಲಿನ ವರೆಗಿನ 12 ವರ್ಷದ ಇಲಾಖೆಯ ಆದಾಯ ಗುರಿ ಮತ್ತು ವಾಸ್ತವ ಸಂಗ್ರಹದ ಮೊತ್ತವನ್ನು ಗಮನಿಸಿದಾಗ ಕೇವಲ ಐದು ಆರ್ಥಿಕ ವರ್ಷದಲ್ಲಿ ಮಾತ್ರ ಗುರಿಯನ್ನು ಮೀರಿ ಉತ್ತಮ ಸಾಧನೆ ಮಾಡಲಾಗಿದೆ (2011-12ರಲ್ಲಿ 4,250 ಕೋಟಿ ರೂ. ಗುರಿಯನ್ನು ಮೀರಿ 4,971.53 ಕೋಟಿ ರೂ. ಸಂಗ್ರಹವಾಗಿತ್ತು. 2018-19ರಲ್ಲಿ 10,400 ಕೋಟಿ ರೂ. ಗುರಿಯ ಬದಲಿಗೆ 10,845 ಕೋಟಿ ರೂ. ಹೆಚ್ಚುವರಿಯಾಗಿ ಆದಾಯ ಹರಿದು ಬಂದಿತ್ತು. ಇನ್ನು ಈ ಎರಡು ಆರ್ಥಿಕ ವರ್ಷ ಹೊರತುಪಡಿಸಿದರೆ ಈ ಒಂದು ದಶಕದಲ್ಲೇ 2022-23ನೇ ಸಾಲಿನಲ್ಲಿ ಮಾ.15ರ ತನಕ ಸರ್ಕಾರ ಮೊದಲಿಗೆ 15,807.91 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ನೀಡಿದ್ದರೂ ಡಿಸೆಂಬರ್ ನಲ್ಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಆ ಗುರಿಯನ್ನು ತಲುಪಿದರೆ ಆನಂತರ ರಾಜ್ಯ ಸರ್ಕಾರ ನೀಡಿದ 17 ಸಾವಿರ ಕೋಟಿ ರೂ. ಹೊಸ ಗುರಿಯನ್ನು ತಲುಪಲು ಇನ್ನು ಕೇವಲ 288.91 ಕೋಟಿ ರೂ. ಸಂಗ್ರಹಿಸಬೇಕಿದೆ. ಈ ಗುರಿ ತಲುಪುವುದು ಇಲಾಖೆಗೆ ಹೆಚ್ಚು ಕಷ್ಟವಲ್ಲ. ಅದು ಹೊರತುಪಡಿಸಿದರೆ 2021-22ರ ಸಾಲಿನಲ್ಲಿ 11,844.59 ಕೋಟಿ ರೂ. ಗುರಿಯ ಬದಲಿಗೆ 12,917.79 ಕೋಟಿ ರೂ. ಅತಿಹೆಚ್ಚು ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಿ ದಾಖಲೆ ನಿರ್ಮಿಸಿತ್ತು.
ಮುಂದಿನ ಜೂನ್ ಒಳಗಾಗಿ ರಾಜ್ಯದೆಲ್ಲಡೆ ‘ಕಾವೇರಿ ತಂತ್ರಾಂಶ-2‘ ಲಭ್ಯ :
‘ಕಾವೇರಿ ತಂತ್ರಾಂಶ-2’ ಪೂರ್ಣ ಪ್ರಮಾಣದ ಬಳಕೆಗೆ ಸಿದ್ಧವಾಗಿದ್ದು, ಈ ವರ್ಷದ ಜೂನ್ ತಿಂಗಳ ಒಳಗಾಗಿ ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಈಗಾಗಲೇ ಮಂಡ್ಯ, ಬೆಳಗಾವಿ ದಕ್ಷಿಣ ಹಾಗೂ ಚಿಕ್ಕೋಡಿಯಲ್ಲಿ ಪ್ರಾಯೋಗಿಕವಾಗಿ ‘ಕಾವೇರಿ ತಂತ್ರಾಂಶ-2’ ವ್ಯವಸ್ಥೆಯಡಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಹಳೆಯ ವ್ಯವಸ್ಥೆಯಲ್ಲಿ ಪ್ರತಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಿನವೊಂದರಲ್ಲಿ ಸರಾಸರಿಯಾಗಿ 40 ರಿಂದ 50 ದಾಖಲೆಗಳನ್ನಷ್ಟೇ ನೋಂದಣಿ ಮಾಡಬಹುದಿತ್ತು. ಹೊಸ ವ್ಯವಸ್ತೆಯಿಂದಾಗಿ ಪ್ರತಿದಿನ ಸರಾಸರಿ 70 ರಿಂದ 75 ದಾಖಲೆಗಳನ್ನು ರಿಜಿಸ್ಟ್ರೇಷನ್ ಮಾಡಿಸಬಹುದು ಎಂದು ಹೇಳುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.
ಏನಿದು ‘ಕಾವೇರಿ ತಂತ್ರಾಂಶ-2‘ ?:
ಸದಾ ಜನಜಂಗುಳಿಯಿಂದ ಅವ್ಯವಸ್ಥೆಯ ಆಗರವಾಗಿದ್ದ ಸಬ್ರಿಜಿಸ್ಟ್ರಾರ್ ಕಚೇರಿಗಳು ಇನ್ನುಮುಂದೆ ಸ್ಮಾರ್ಟ್ ಕಚೇರಿಯಾಗಲಿವೆ. ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಮತ್ತು ಉಯಿಲು (ವಿಲ್) ಸೇರಿ ನಾನಾ ಸೇವೆಗಳನ್ನು ಸಾರ್ವಜನಿಕರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನವಿಡೀ ಕಾಯುವ ತಲೆಬಿಸಿ ಇರುವುದಿಲ್ಲ ಹಾಗೂ ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ‘ಕಾವೇರಿ -2’ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಪಡೆಯಬಹುದಾಗಿದೆ. ಭೂಮಿ, ಇ-ಆಸ್ತಿ, ಇ-ಸ್ವತ್ತು ಎಲ್ಲದಕ್ಕೂ ಕಾವೇರಿ -2 ತಂತ್ರಾಂಶ ಲಿಂಕ್ ಆಗಿರಲಿದೆ. ಇದೊಂದು ಇಂಟೆಗ್ರೇಟೆಡ್ ತಂತ್ರಾಂಶವಾಗಿದ್ದು, ಆಸ್ತಿ ನೋಂದಣಿಗೆ ಸಲ್ಲಿಕೆಯಾದ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಕಲಿ ದಾಖಲೆ ಸೃಷ್ಟಿಸಿ ನೋಂದಣಿಗೆ ಯತ್ನಿಸಿದರೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಕೇಂದ್ರೀಯ ಸರ್ವರ್ ಹೊರತುಪಡಿಸಿ ಬೇರಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಳೀಯ ಸರ್ವರ್ ಇರುವುದಿಲ್ಲ. ಈ ಹೊಸ ವ್ಯವಸ್ಥೆಯಿಂದ ಇಲಾಖೆಯ ಕಾರ್ಯವೈಖರಿಯೂ ಸಂಪೂರ್ಣ ಬದಲಾಗಲಿದೆ. ಜತೆಗೆ ಆಸ್ತಿ ನೋಂದಣಿ ಪ್ರಕ್ರಿಯೆ ಸರಳ ಮತ್ತು ಸುಸೂತ್ರವಾಗಲಿದೆ.
ಇಲಾಖೆಯ ಐಜಿಆರ್ ಏನು ಹೇಳುತ್ತಾರೆ?:
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಹೊಸದಾಗಿ 17 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಗುರಿಯನ್ನು ನೀಡಿತ್ತು. ಆ ಪೈಕಿ ನಾವು ಮಾ.15ರ ತನಕ 16,711 ಕೋಟಿ ರೂ. ಸಂಗ್ರಹಿಸಿದ್ದೇವೆ. ಉಳಿದ 288.91 ಕೋಟಿ ರೂ. ಆದಾಯ ಕ್ರೋಢೀಕರಣದ ಗುರಿಯನ್ನು ತಲುಪಿ ಹೊಸ ದಾಖಲೆ ಸೃಷ್ಟಿಸುತ್ತೇವೆ ಎಂಬ ವಿಶ್ವಾಸವಿದೆ. ಕಾವೇರಿ ತಂತ್ರಾಂಶ-2 ವ್ಯವಸ್ಥೆಯನ್ನು ಮುಂದಿನ ಜೂನ್ ತಿಂಗಳ ಒಳಗಾಗಿ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಂಪೂರ್ಣವಾಗಿ ಅಳವಡಿಸುತ್ತೇವೆ.
– ಡಾ.ಮಮತ.ಬಿ.ಆರ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.