ಬೆಂಗಳೂರು, ಮಾ.15 www.bengaluruwire.com : ಕರ್ನಾಟಕ ರಾಜ್ಯ ಗುತ್ತಿಗದಾರರ ಸಂಘ ಡಿ.ಕೆಂಪಣ್ಣ ಆರೋಪಿಸಿದಂತೆ ಬಿಬಿಎಂಪಿಯಲ್ಲಿ ಲಂಚ ಪಡೆದು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುತ್ತಿಲ್ಲ. ಜೇಷ್ಟತೆ ಆಧಾರ ಮೀರಿ ನನ್ನ ಅಧಿಕಾರಾವಧಿಯಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಬಿಲ್ ಪಾವತಿ ಮಾಡಿಲ್ಲ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ ಸ್ಪಷ್ಟಪಡಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಬಿಬಿಎಂಪಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಕುರಿತಂತೆ ಹಲವು ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ತುರ್ತು ಸುದ್ದಿಗೋಷ್ಟಿ ನಡೆಸಿದ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಮ್ಮ ಅವಧಿಯಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸುವಾಗ ಜೇಷ್ಠತೆ ಮೀರಿ ಹಣ ಪಾವತಿಸಿಲ್ಲ. ಶೇ.99ರಷ್ಟು ಜೇಷ್ಠತೆ ಆಧಾರದ ಮೇಲೆಯೇ ಹಣ ಪಾವತಿಸಲಾಗಿದೆ. ಕೇವಲ ಶೇ.1 ಹಾಗೂ ಅದಕ್ಕಿಂತ ಕಡಿಮೆಯಾಗಿ ವಿವೇಚನಾಧಿಕಾರ ಬಳಸಿ ಕಾಂಟ್ರಾಕ್ಟರ್ ಗಳಿಗೆ ಹಣ ಪಾವತಿಸಲಾಗಿದೆ.
ತುರ್ತು ಸಂದರ್ಭದಲ್ಲಿ ವಿವೇಚನಾಧಿಕಾರ ಬಳಸಿ 25 ಲಕ್ಷ ರೂ. ತನಕ ಪಾವತಿ:
ಗುತ್ತಿಗೆದಾರರಿಗೆ ಹಣ ಪಾವತಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಸುಖಾಸುಮ್ಮನೆ ಆರೋಪ ಮಾಡಿದಾಗ ಬೇಸವಾಗುತ್ತದೆ ಎಂದ ಅವರು ಪಾಲಿಕೆಯಲ್ಲಿ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿರುವಂತೆ ನೋಡಿಕೊಂಡಿದ್ದೇವೆ. ಹಾಗಾಗಿಯೇ ಗುತ್ತಿಗೆದಾರರರಿಗೆ ಆನ್ಲೈನ್ ಮೂಲಕವೇ ಪಾವತಿಯಾಗುತ್ತೆ. ಮದುವೆ, ಅತ್ಯಂತ ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ಮಾತ್ರವೇ ಗುತ್ತಿಗೆದಾರರಿಗೆ ಗರಿಷ್ಠ 25 ಲಕ್ಷದ ರೂ.ವರೆಗೆ ಮಾತ್ರ ವಿವೇಚನಾಧಿಕಾರ ಬಳಸಿ ಹಣ ಪಾವತಿಸಲಾಗುತ್ತಿದೆ. ಸಾಮಾನ್ಯವಾಗಿ ಕಾನೂನಿನಲ್ಲಿ ಬಿಲ್ ಪಾವತಿಸುವಾಗ ಶೇ.80ರಷ್ಟು ಜೇಷ್ಠತೆ ಆಧಾರ ಹಾಗೂ ಶೇ.20ರಷ್ಟು ವಿವೇಚನಾಧಿಕಾರ ಬಳಸಿ ಬಿಲ್ ಪಾವತಿಸಲು ಅವಕಾಶವಿದೆ. ಹೀಗಿದ್ದರೂ ವಿವೇಚನಾಧಿಕಾರವನ್ನು ಹೇಗಂದರೆ ಹಾಗೆ ಬಳಸಿಲ್ಲ ಎಂದು ಕೆಂಪಣ್ಣನವರ ಆರೋಪಗಳನ್ನು ಅಲ್ಲಗಳೆದರು.
ಬಿಬಿಎಂಪಿಯಲ್ಲಿ ಗುತ್ತಿಗೆ ಪಾವತಿಯಲ್ಲಿ ಶೇ.10ರಷ್ಟು ಕಮಿಷನ್ ಪಡೆದು ಹಣ ಬಿಡುಗಡೆ ಮಾಡಲಾಗುತ್ತಿದೆ ಎಂಬ ಕೆಂಪಣ್ಣನವರ ಆರೋಪದಲ್ಲಿ ಹುರುಳಿಲ್ಲ. ಹಾಗೇನಾದರೂ ಕಮಿಷನ್ ಪಡೆದು ಗುತ್ತಿಗೆ ಹಣ ಬಿಡುಗಡೆ ಮಾಡುತ್ತಿದ್ದರೆ ಪುರಾವೆ ನೀಡಲಿ, ಇಲ್ಲವಾದಲ್ಲಿ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಒಂದೊಮ್ಮೆ ಕ್ಷಮೆಯಾಚಿಸದಿದ್ದರೆ, ಸರ್ಕಾರದ ಒಪ್ಪಿಗೆ ಪಡೆದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಯರಾಮ್ ರಾಯಪುರ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಖಾತೆ ಮಾಹಿತಿ ನೀಡಲು ಮಾ.24 ಗಡುವು :
ಮುಂದಿನ ಮಾರ್ಚ್ 24ರ ಮಧ್ಯಾಹ್ನ 3 ಗಂಟೆಯ ಒಳಗೆ ಆಯಾಯ ವಲಯದಲ್ಲಿನ 64 ಕಂದಾಯ ಉಪವಿಭಾಗಗಳಲ್ಲಿ ಬಿ ಖಾತೆಯಿಂದ ಅಕ್ರಮವಾಗಿ ಎ ಖಾತೆಗೆ ಸೇರಿಸಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಲ್ಲಾ ಸಹಾಯಕ ಕಂದಾಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಕೊಡುವಂತೆ ಎಆರ್ ಒ ಗಳಿಗೆ ಸೂಚನೆ ಕೊಟ್ಟಿದ್ದೇವೆ. ಒಂದೊಮ್ಮೆ ಅಪೂರ್ಣ ಮಾಹಿತಿ ಕೊಟ್ಟರೆ ಪರಿಶೀಲನಾ ಸಂದರ್ಭದಲ್ಲಿ ಅದು ತಿಳಿದು ಬಂದಲ್ಲಿ ಅಂತಹ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಖಾತಾ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆಗಿರುವ ಜಯರಾಮ್ ರಾಯಪುರ ತಿಳಿಸಿದ್ದಾರೆ.
ಈ ಕುರಿತಂತೆ ಈಗಾಗಲೇ 64 ಕಂದಾಯ ಉಪ ವಿಭಾಗಗಳ ಎಆರ್ ಒಗಳಿಗೆ ಈ ಸಂಬಂಧ ಸೂಚನೆ ನೀಡಿದ್ದಾಗಿ ಹೇಳಿರುವ ಅವರು, ಮಾ.8ರಂದು ಅಕ್ರಮ ಎ ಖಾತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ಬೊಮ್ಮನಹಳ್ಳಿ ವಲಯದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂಜನಾಪುರ ಉಪವಿಭಾಗದ 194 ವಾರ್ಡ್ ಹಾಗೂ 196 ವಾರ್ಡ್ ಗಳಲ್ಲಿನ ಎಲ್ಲಾ ಖಾತೆಗಳನ್ನು ಪರಿಶೀಲಿಸಿದಾಗ, 194ನೇ ವಾರ್ಡಿನ 20 ವಹಿಗಳಲ್ಲಿ 357 ಅಕ್ರಮ ಎ ಖಾತೆಗಳು ಹಾಗೂ 196 ವಾರ್ಡಿನಲ್ಲಿನ 21 ವಹಿಗಳಲ್ಲಿ 341 ಸಂಖ್ಯೆಯ ಅಕ್ರಮ ಎ ಖಾತೆಗಳನ್ನು ಸೇರಿಸಿರುವುದು ಕಂಡು ಬಂದಿತ್ತು. ಇವುಗಳನ್ನು ಅಲ್ಲಿನ ವಾರ್ಡಿನ ಸಿಬ್ಬಂದಿ ಹಾಗೂ ಉಪವಿಭಾಗದ ಎಆರ್ ಒಗಳು ಎರಡೂ ವಾರ್ಡ್ ಗಳಲ್ಲಿ ಪತ್ತೆಯಾಗಿರುವ ಅಕ್ರಮ ಎ ಖಾತೆಗಳ ಸಂಖ್ಯೆ ಹಾಗೂ ವಿವರಗಳನ್ನು ದೃಢೀಕರಿಸಿರುತ್ತಾರೆ ಎಂದು ಅವರು ವಿವರಿಸಿದರು.
ಅಕ್ರಮ ಎ ಖಾತೆ ನೀಡಿ ಕೆಲವು ಸ್ವತ್ತುಗಳಲ್ಲಿ ನಿರ್ಮಿಸಿದ ಸ್ವತ್ತುಗಳು ಸ್ವಾಧಿನಾನುಭವ ಪ್ರಮಾಣ ಪತ್ರ (OC)ಗಳನ್ನು ಪಡೆದುಕೊಂಡಿದ್ದಲ್ಲಿ ಅವುಗಳನ್ನು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಡತವನ್ನು ಈಗಾಗಲೇ ಕಳುಹಿಸಿದ್ದು, ಬಜೆಟ್ ಗೆ ಒಪ್ಪಿಗೆಗಾಗಿ ಕಾಯುತ್ತಿದ್ದು, ಬಳಿಕ ಆಯವ್ಯಯದಲ್ಲಿನ ಅಂಶಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.