ಬೆಂಗಳೂರು, ಮಾ.13 www.bengaluruwire.com : ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಸಿನಿಮಾ ದಿಗ್ಗಜರು, ರಾಜಕೀಯ ಗಣ್ಯರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಶುಭಾಶಯ ಕೋರಿದ್ದಾರೆ.
ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದಂತಾಗಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದರು.
ಆರ್ ಆರ್ ಆರ್ ಹಾಡಿನ ಹಕ್ಕು ಖರೀದಿಸಿದ್ದ ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಈ ಬಗ್ಗೆ ಬೆಂಗಳೂರು ವೈರ್ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಲಹರಿ ವೇಲು, ಕನ್ನಡಾಂಬೆ ಮಡಿಲಿಗೆ, ಭಾರತಾಂಬೆ ಮಡಿಲಿಗೆ, ಸಂಗೀತ ಪ್ರೀಯರಿಗೆ, ಸಾಹಿತಿ, ಸಿನಿಮಾ ನಿರ್ಮಾಪಕರು ಹಾಗೂ ಎಲ್ಲಾ ಭಾರತೀಯರಿಗೆ ಈ ಪ್ರಶಸ್ತಿ ಅರ್ಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
“ಇಂಥಹ ಹಾಡನ್ನು ಲಹರಿ ಸಂಸ್ಥೆಯಲ್ಲಿ ರಿಲೀಸ್ ಮಾಡಿ ವಿಶ್ವದಾದ್ಯಂತ ಪ್ರಚಾರ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕಳೆದ 48 ವರ್ಷಗಳ ಕಾಲ ಲಹರಿ ಸಂಸ್ಥೆ ಸಂಗೀತ ಸೇವೆ ಮಾಡಿದ್ದಕ್ಕೆ ಈ ಪ್ರಶಸ್ತಿ ಬಂದು ಸಾರ್ಥಕವಾದಂತಾಗಿದೆ” ಎಂದು ಲಹರಿ ವೇಲು ಬೆಂಗಳೂರು ವೈರ್ ಗೆ ಪ್ರತಿಕ್ರಿಯಿಸಿದ್ದಾರೆ.
ನಾಟು ನಾಟು ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದೆ.