ಮಾಗಡಿ, ಮಾ.10 www.bengaluruwire.com : ಬಿಜೆಪಿ ಸರ್ಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿತ್ತು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. 1 ಲಕ್ಷವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಯಾವ ಭರವಸೆಯನ್ನು ಬಿಜೆಪಿ ಸರಕಾರ ಈಡೇರಿಸಲಿಲ್ಲ. ಈ ಸರ್ಕಾರ ಕೊಟ್ಟ 600 ಭರವಸೆಗಳಲ್ಲಿ ಕೇವಲ 50 ಭರವಸೆ ಈಡೇರಿಸಿದ್ದು, 550 ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಮಾಗಡಿ ವಿಧಾನಸಭೆ ಕ್ಷೇತ್ರದ ಜಾಲಮಂಗಲದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನಿಮ್ಮ ನೋವು, ಕಷ್ಟಗಳಿಗೆ ಪರಿಹಾರ ನೀಡಲು ನಾವು ಈ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಮಾಡಿದ ಬಿಜೆಪಿ 600 ಭರವಸೆ ನೀಡಿತ್ತು. ಆದರೆ 550 ಈಡೇರಿಲ್ಲ ಎಂದರು.
ಇಂದಿನ ಪ್ರಜಾಧ್ವನಿ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿರುವುದು ಬಹಳ ಸಂತೋಷ ತಂದಿದೆ. ನನ್ನ ಸ್ನೇಹಿತರಾದ ಕಾಂತರಾಜ್ ಪಟೇಲ್, ಪುಟ್ಟಸ್ವಾಮಿ ಗೌಡ, ನಾರಾಯಣ ಅವರನ್ನು ಸ್ಮರಿಸುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಬೇರು ಇಲ್ಲದಿದ್ದರೆ ಮರ ಉಳಿಯಲ್ಲ, ಅದೇ ರೀತಿ ನಂಬಿಕೆ ಇಲ್ಲದಿದ್ದರೆ ಸಂಬಂಧ ಉಳಿಯುವುದಿಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು ಇಲ್ಲಿ ಬಂದಿರುವ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್ 38 ಕ್ಷೇತ್ರಗಳಲ್ಲಿ ಗೆದ್ದಿದ್ದವು. ನಾವು ಜೆಡಿಎಸ್ ಪಕ್ಷಕ್ಕೆ ಬೇಷರತ್ತಾಗಿ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ನಂತರ ರೈತರ ಸಾಲಮನ್ನಾ ಮಾಡಲು ನಾವು ಕುಮಾರಸ್ವಾಮಿ ಅವರಿಗೆ ಬೆಂಬಲವಾಗಿ ನಿಂತೆವು. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲೂ 50 ಸಾವಿರವರೆಗಿನ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು.
ಬಿಜೆಪಿ ಅಧಿಕಾರಕ್ಕೆ ಬಂದು ಉಚಿತ ಅಕ್ಕಿ 5 ಕೆಜಿಗೆ ಇಳಿಕೆ :
ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಿದೆವು. ನಂತರ ಇದನ್ನು 7 ಕೆ.ಜಿ.ಗೆ ಹೆಚ್ಚಳ ಮಾಡಿದೆವು. ಆದರೆ ಬಿಜೆಪಿ ಸರ್ಕಾರ ಇದನ್ನು 5 ಕೆ.ಜಿಗೆ ಇಳಿಸಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಡವರ ಕುಟುಂಬಗಳನ್ನು ಉಳಿಸಬೇಕು ಎಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು 10 ಕೆ.ಜಿ.ಗೆ ಹೆಚ್ಚಿಸಲಾಗುವುದು. ಆ ಮೂಲಕ ಹಸಿವುಮುಕ್ತ ರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿದ್ದೇವೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರೂ ಇಂತಹ ಯೋಜನೆ ಜಾರಿ ಮಾಡಲಿಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಬಂದರೆ ನುಡಿದಂತೆ ನಡೆಯುತ್ತಾರೆ ಎಂದು ನೀವೆಲ್ಲರೂ ನಂಬಿಕೆ ಇಟ್ಟಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಜಾರಿಗೆ ಪ್ರಯತ್ನ :
ಹೆಣ್ಣು ಕುಟುಂಬದ ಕಣ್ಣು, ಆಕೆಗೆ ಶಕ್ತಿ ನೀಡಬೇಕು. ಬೆಲೆ ಏರಿಕೆಯಿಂದ ಮಹಿಳೆಯರು ತಮ್ಮ ಸಂಸಾರ ನಿಭಾಯಿಸುವುದೇ ಕಷ್ಟವಾಗಿದೆ. ಆದಾಯ ಪಾತಾಳಕ್ಕೆ ಕುಸಿದಿದ್ದು, ವಸ್ತುಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂ. ನಂತೆ ವರ್ಷಕ್ಕೆ 24 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಇದರ ಜತೆಗೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು 1500ರಂತೆ ವರ್ಷಕ್ಕೆ 18 ಸಾವಿರ ಉಳಿತಾಯ ಮಾಡಬಹುದು. ಈ ಎರಡು ಯೋಜನೆಗಳ ಮೂಲಕ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2.10 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ನಾನು ಇಂಧನ ಸಚಿವನಾದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಇತ್ತು. ನಾನು ಸಚಿವ ಸ್ಥಾನದಿಂದ ಕೆಳಗೆ ಇಳಿಯುವ ಹೊತ್ತಿಗೆ 20 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಿದೆ.
ಈ ಯೋಜನೆಗಳ ಕುರಿತು ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಕಾರ್ಡ್ ಗೆ ಸಹಿ ಮಾಡಿದ್ದು, ಈ ಕಾರ್ಡ್ ಅನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಬೇಕು. ಮೇ.15ರ ವೇಳೆಗೆ ಸರ್ಕಾರ ರಚನೆಯಾಗಲಿದ್ದು, ಜೂನ್ ತಿಂಗಳಿಂದಲೇ ಈ ಯೋಜನೆ ಜಾರಿಗೆ ನಾವು ಪ್ರಯತ್ನಿಸುತ್ತಿದ್ದೇವೆ. ಇಲ್ಲಿರುವ ನೀವುಗಳು ನಿಮ್ಮ ಮನೆಯವರು ಹಾಗೂ ಸಂಬಂಧಿಗಳು, ಅಕ್ಕಪಕ್ಕದ ಮನೆಯವರು ಸೇರಿದಂತೆ ಒಬ್ಬೊಬ್ಬರು ನಾಲ್ಕೈದು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸಬೇಕು.
ಪಿಎಸ್ಐ ಹುದ್ದೆ ಪಡೆಯಲು ಹಣ ನೀಡಿ ಜೈಲು ಸೇರಿದ ಯುವಕರು :
ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಕ್ಷೇತ್ರದಲ್ಲಿ ಕೆಲವು ಯುವಕರು ಪಿಎಸ್ಐ ಹುದ್ದೆ ಪಡೆಯಲು ಹಣ ನೀಡಿ ಜೈಲು ಸೇರಿ ಅವರ ಬದುಕು ನಾಶ ಮಾಡಿಕೊಂಡಿದ್ದಾರೆ. ನಮ್ಮ ಕಾಲದಲ್ಲಿ ನಾವು ಯಾರ ಬಳಿಯಾದರೂ ಹಣ ಪಡೆದು ಈ ರೀತಿ ಬದುಕು ನಾಶ ಮಾಡಿದ್ದೆವಾ? ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಹರಿಹಾಯ್ದರು.
“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ” ಎಂದು ಚಿತ್ರದ ಸಂಭಾಷಣೆಯಂತೆ ಮಾತಿನ ಧಾಟಿಯಲ್ಲಿ ಹೇಳುತ್ತಾ, “ನೀವು ಕೈ ಜತೆ ಕೈ ಜೋಡಿಸಬೇಕು ಎಂದು ಪ್ರಾರ್ಥಿಸುತ್ತೇನೆ. ಈ ಕ್ಷೇತ್ರದಲ್ಲಿ ಬಾಲಕೃಷ್ಣ ಅವರು ಮಾತ್ರ ಪಕ್ಷದ ಟಿಕೆಟ್ ಗೆ ಅರ್ಜಿ ಹಾಕಿದ್ದು, ನೀವೆಲ್ಲರೂ ಅವರನ್ನು ಗೆಲ್ಲಿಸಿ ವಿಧಾನ ಸೌಧದಲ್ಲಿ ಕೂರಿಸಿ ನಮಗೆ ಶಕ್ತಿ ನೀಡಬೇಕು” ಎಂದು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದಾಗ ವೇದಿಕೆ ಮುಂಭಾಗ ಕೂತಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಜೈಕಾರ ಕೇಳಿಬಂತು.
ಪ್ರಜಾಧ್ವನಿ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ ಕೆ ಸುರೇಶ್, ಮಾಜಿ ಸಚಿವ ಎಚ್ ಎಂ ರೇವಣ್ಣ, ಮಾಜಿ ಶಾಸಕ ಬಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.