ಬೆಂಗಳೂರು, ಮಾ.9 www.bengaluruwire.com : ಕೃಷಿ ಮ್ಯಾಪಿಂಗ್ ಮತ್ತು ಭೂಕುಸಿತದ ಅಪಾಯ ಎದುರಿ- ಸುತ್ತಿರುವ ಪ್ರದೇಶಗಳ ಅಧ್ಯಯನ ಸೇರಿದಂತೆ ನಾನಾ ಕಾರ್ಯಗಳಿಗೆ ಸಹಾಯಕವಾಗುವ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’, ಬುಧವಾರ ಅಮೆರಿಕದಿಂದ ಬೆಂಗಳೂರಿಗೆ ಬಂದು ಸೇರಿತು.
ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದ, ‘ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎನ್ಐಎಸ್ಎಆರ್) ಉಪಗ್ರಹವನ್ನು ಅಮೆರಿಕ ವಾಯುಪಡೆಯ ಸಿ-17 ವಿಮಾನ ಹೊತ್ತು ಬೆಂಗಳೂರಿಗೆ ಬಂದಿಳಿಯಿತು ಎಂದು ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿ ಟ್ವೀಟ್ ಮಾಡಿದೆ.
“ಇದು ಅಮೆರಿಕ ಮತ್ತು ಭಾರತದ ನಡುವಿನ ಬಾಹ್ಯಾಕಾಶ ಕ್ಷೇತ್ರದಲ್ಲಿನ ಬಾಂಧವ್ಯದ ಪ್ರತೀಕ’ ಎಂದು ಕಾನ್ಸುಲೇಟ್ ತಿಳಿಸಿದೆ.
ಈ ಅಪರ್ಚರ್ ರಾಡಾರ್, ಕೃಷಿ ಮ್ಯಾಪಿಂಗ್ ಮತ್ತು ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳ ಅಧ್ಯಯನ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ‘ನಿಸಾರ್’ ಅನ್ನು ಬಳಸಲು ಇಸ್ರೋ ನಿರ್ಧರಿಸಿದೆ. ಅಂದಹಾಗೆ ಈ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಉಡಾವಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.