ಬೆಂಗಳೂರು, ಮಾ.8 www.bengaluruwire.com : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬುಧವಾರ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಸಂಪೂರ್ಣ ಮಹಿಳಾ ಸಿಬ್ಬಂದಿ ಬೆಂಗಳೂರು-ಮೈಸೂರು ರಾಜ್ಯರಾಣಿ ಎಕ್ಸ್ಪ್ರೆಸ್ ರೈಲನ್ನು ನಿರ್ವಹಿಸಿದರು.
ಮಹಿಳಾ ಪಾಯಿಂಟ್ಸ್ ಮ್ಯಾನ್ ಜೆ. ಫಾತಿಮಾ, ಸರಸ್ವತಿ ಮತ್ತು ಪ್ರತಿಮಾ ಶರ್ಮಾ, ಸ್ಟೇಷನ್ ಮಾಸ್ಟರ್ ರೈಲಿಗೆ ಚಾಲನೆ ನೀಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ನಿರ್ವಹಣೆ) ಕುಸುಮಾ ಹರಿಪ್ರಸಾದ್, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ಹಿರಿಯ ವಿಭಾಗೀಯ ಎಲೆಕ್ಟ್ರಿಕಲ್ ಇಂಜಿನಿಯರ್ ಪೂಜಾ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿಭಾಗದ ಎಲ್ಲ ಮಹಿಳಾ ಸಿಬ್ಬಂದಿಗೆ ಶುಭಾಶಯ ಕೋರಿದರು.
ಅಭಿರಾಮಿ, ಲೋಕೋ ಪೈಲಟ್ ಮತ್ತು ಗಾಯತ್ರಿ ಕೃಷ್ಣನ್ ಸಹಾಯಕ ಲೋಕೋ ಪೈಲಟ್ ರೈಲನ್ನು ಚಾಲನೆ ಮಾಡಿದರು. ಶೈಲಜಾ ರೈಲು ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದರು. ರೈಲ್ವೆ ಸಂರಕ್ಷಣಾಪಡೆಯ ಛಾಯಾಮಣಿ, ಶಿಲ್ಪಾ, ಹರತಿ ಮೀನಾ, ವಿಜಯಲಕ್ಷ್ಮಿ, ಪಾರ್ಥಿಭಾ ಸಿಂಗ್ ಮತ್ತು ವಿದ್ಯಾ.ಎಂ ರೈಲಿಗೆ ಬೆಂಗಾವಲು ನೀಡಿದರು.
ಪ್ರಯಾಣ ಟಿಕೆಟ್ ಪರಿವೀಕ್ಷಕರಾದ ಉಮಾ ಪಿ.ಎಸ್. ಮೀನಾಕ್ಷಿ ದೇವಿ, ರಮಾ ಹಂಸ, ಟೀನಾ ಜೋಸೆಫ್, ಸೋನಾ ಮತ್ತು ಸಿ.ಎಸ್.ಭಾರತಿ, ಟಿಕೆಟ್ ಪರಿಶೀಲನೆ ನಡೆಸಿದರು.