ಬೆಂಗಳೂರು, ಮಾ.08 www.bengaluruwire.com : ಮುಂಬರುವ 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಿಯಲ್ಲಿ ಕುರುಬ ಸಮುದಾಯಕ್ಕೆ ಮೂರು (ಕಾಂಗ್ರೆಸ್, ಬಿಜೆಪಿ, ಜೆಡಿಎಸ್) ರಾಜಕೀಯ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘ ಮೂರು ಪಕ್ಷಗಳನ್ನು ಒತ್ತಾಯಿಸಿದೆ.
ಸಂಘದ ಕಾರ್ಯಾಧ್ಯಕ್ಷ ಬಿ.ಸುಬ್ರಮಣ್ಯ ನಗರದ ಕುರುಬರ ಸಂಘದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕರ್ನಾಟಕದಲ್ಲಿ ಪ್ರಬಲ ಜಾತಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕುರುಬ ಸಮುದಾಯವು ಸುಮಾರು 75 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ರಾಜ್ಯದ 150ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಸುವಲ್ಲಿ ನಿರ್ಣಾಯಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿಯ 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಿಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಮ್ಮ ಸಮಾಜದ ಕನಿಷ್ಠ 40 ಆಕಾಂಕ್ಷಿಗಳನ್ನ ಗುರುತಿಸಿ – ಗೆಲ್ಲುವಂತಹ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇದ್ದರೂ ಕಳೆದ ಹಲವು ದಶಕಗಳಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡದೇ ಸಮಾಜವನ್ನು ಕೇವಲ ಮತದಾನಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂದು ದೂರಿದರು.
ಸಮಾಜದ ಅಭ್ಯರ್ಥಿಗಳು ಗೆಲ್ಲುವ ಕಡೆಗೂ ಐಕೇಟ್ ನೀಡದೇ ಇರುವುದು ನಮ್ಮನ್ನು ಜಾಗೃತಗೊಳಿಸಿದೆ.
ತನ್ನದೇ ರಾಜಕೀಯ ಹಿನ್ನೆಲೆ ಹೊಂದಿರುವ ಸ್ವಾತಂತ್ರ್ಯ ಸಂದರ್ಭದಲ್ಲಿ 1951ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಕೊಲ್ಲೂರು ಮಲ್ಲಪ್ಪ ಅವರು ಸುರಪುರ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗುವ ಮೂಲಕ ಕುರುಬ ಸಮುದಾಯವನ್ನು ಪ್ರತಿನಿಧಿಸಿದರು. ಅಲ್ಲಿಂದೀಚೆಗೆ ಮದ್ರಾಸ್ ಪ್ರಾಂತ್ಯದಲ್ಲಿ ನಾಗನಗೌಡ, ಟಿ. ಮರಿಯಪ್ಪ, ವೈ.ರಾಮಚಂದ್ರ, ನಂತರ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ಒಂದು ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರ ವರೆಗೂ ಹಲವು ಮಂದಿ ರಾಜಕೀಯ ನೇತಾರರು ಕುರುಬ ಸಮುದಾಯದ ಪ್ರಾತಿನಿಧ್ಯ ವಹಿಸಿದ್ದಾರೆ.
ಆ ಮೂಲಕ ರಾಜ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ 1952 ರಿಂದ 2018ರ ವರೆಗೆ 15 ವಿಧಾನಸಭಾ ಚುನಾವಣಿ ಹಾಗೂ ಎರಡು ಉಪಚುನಾವಣೆಗಳಲ್ಲಿ ನಮ್ಮ ಸಮಾಜದ ನಾಯಕರು ವಿಧಾನಸಭೆ ಪ್ರವೇಶಿಸಿದ್ದಾರೆ. ಅಲ್ಲದೇ 2019ರ ವರೆಗೆ ಲೋಕಸಭಾ ಚುನಾವಣಿಗೂ ಸ್ಪರ್ಧಿಸಿದ್ದಾರೆ ಎಂದರು.
ರಾಜ್ಯದ 31 ಜಿಲ್ಲೆಗಳ ಪೈಕಿ, ಕುರುಬ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಜಿಲ್ಲೆಗಳ ಪೈಕಿ, ಎಲ್.ಜಿ. ಹಾವನೂರು ವರದಿಯ ಅನ್ವಯ ರಾಜಕೀಯ ಪಕ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ರಾಜಕೀಯ ನಾಯಕರು ತಮ್ಮ ವರ್ಚಸ್ಸಿನಿಂದಲೇ ಗೆದ್ದು ಬಂದವರಾಗಿದ್ದಾರೆ. ಉಳಿದವರು ಗೆಲ್ಲಲು ಶಕ್ತರಾಗಿದ್ದರೂ ಟಿಕೆಟ್ ವಂಚಿತರಾಗಿ ” ರಾಜಕೀಯವಾಗಿ ಸ್ಥಾನಮಾನ ಕಳೆದುಕೊಳ್ಳುವಂತಾಗಿದೆ. ಕುರುಬ ಸಮಾಜದ ಮತದಾರರು ರಾಜ್ಯಾದ್ಯಂತ ಹರಡಿರುವು ದರಿಂದ 2023ರ ಚುನಾವಣೆಯಲ್ಲಿ ಈ ಹಿಂದಿನಂತೆ ಅನ್ಯಾಯ ಮುಂದುವರಿಯಬಾರದು ಎಂದು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ ಆಗ್ರಹಿಸಿದ್ದಾರೆ.
2008ರಲ್ಲಿ ಸಿದ್ದರಾಮಯ್ಯರವರು ಸೇರಿ ಒಟ್ಟು 6 ಮಂದಿ ಶಾಸಕರಾಗಿದ್ದರು, 2013ರಲ್ಲಿ 14 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ 12 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕಾಂಗ್ರೆಸ್‌ನ 8 ಮಂದಿ, ಒಬ್ಬರು ಬಿಜೆಪಿ ಮತ್ತು ಇಬ್ಬರು ಜೆಡಿಎಸ್‌ನಿಂದ ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. 2018ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಿಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ಪಕ್ಷದಿಂದ 11 ಮಂದಿ, ಬಿಜೆಪಿ ಪಕ್ಷದಿಂದ 5 ಮಂದಿಗೆ ಟಿಕೆಟ್ ನೀಡಿದ್ದು, ಅದರಲ್ಲೂ ಕುರುಬರಿಗೆ ಅನ್ಯಾಯವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳ ವರದಿಗಳ ಪ್ರಕಾರ ಸಿದ್ದರಾಮಯ್ಯರವರ ಅವಧಿಯ ಸರ್ಕಾರದಲ್ಲಿ ನಡೆಸಲಾದ ಜಾತಿ ಗಣತಿ 2016ರ ಆಧಾರದಲ್ಲಿ, ಕುರುಬರ ಸಂಖ್ಯೆ ಹೆಚ್ಚಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಕನಿಷ್ಠ 40 ಮಂದಿಗೆ ಟಿಕೆಟ್ ನೀಡಬೇಕು ಎಂದು ಪಕ್ಷಾತೀತವಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘವು ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಮುಖಂಡರುಗಳಿಗೆ ಆಗ್ರಹಿಸುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಚಾಂಚಿ ದೇವರಾಜ ಸುಬ್ಬರಾಯಪ್ಪ, ನಿರ್ದೇಶಕರಾದ ಕೆ.ಟಿ.ನಾಗರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.