ಬೆಂಗಳೂರು, ಮಾ.07 www.bengaluruwire.com : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.8ರಂದು ನಗರದ ಮಹಿಳೆಯರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯ ಎಲ್ಲಾ ಬಸ್ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ಬಿಎಂಟಿಸಿ ಸಂಸ್ಥೆಯು ಬೆಂಗಳೂರು ನಗರ ಮತ್ತು ಹೊರವಲಯ ಪ್ರದೇಶದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಥ, ಸುರಕ್ಷಿತ, ವಿಶ್ವಾಸಾರ್ಹ, ದಕ್ಷ, ಸಮರ್ಪಕ, ಉತ್ತಮ ಹಾಗೂ ಮಿತವ್ಯಯ ದರದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು ಪ್ರಸ್ತುತ ಸಂಸ್ಥೆಯು 48 ಘಟಕಗಳು, 50 ಬಸ್ ನಿಲ್ದಾಣಗಳು ಹಾಗೂ 6600 ವಾಹನ ಬಲವನ್ನು ಹೊಂದಿದ್ದು, ಪ್ರತಿದಿನ 5567 ಬಸ್ಸುಗಳಿಂದ, 54 ಸಾವಿರ ಸುತ್ತುವಳಿಗಳೊಂದಿಗೆ, 10.84 ಲಕ್ಷ ಕಿ.ಮೀಗಳನ್ನು ಕ್ರಮಿಸಿ ಸರಾಸರಿ 29.00 ಲಕ್ಷ ಪ್ರಯಾಣಿಕರಿಗೆ ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸುತ್ತಿದೆ.
ಮಹಿಳೆಯರು ಪ್ರತಿದಿನ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಹಾಗೂ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಭಾಗವಹಿಸಲು ಸುರಕ್ಷಿತ, ಉತ್ತಮ ಭದ್ರತೆಯುಳ್ಳ ಸಾರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಆರ್ಥಿಕವಾಗಿ ಶಕ್ತಿಯನ್ನು ತುಂಬಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಈ ಉಚಿತ ಪ್ರಯಟಣ ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಉಚಿತ ಪ್ರಯಾಣವು ಸಂಸ್ಥೆಯ ಹವಾನಿಯಂತ್ರಿತ ವಜ್ರ ಮತ್ತು ವಾಯುವಜ್ರ ಸೇವೆಗಳಿಗೆ ಸಹ ಅನ್ವಯಿಸುತ್ತದೆ.
ಮಹಿಳಾ ಪುಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವುದರಿಂದ ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುದಂತಾಗುತ್ತದೆ. ಮಹಿಳೆಯರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಉಪಯೋಗಿಸುವುದರಿಂದ, ನಗರದ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯ ಕಡಿಮೆಯಾಗುವುದು. ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.