ಬೆಂಗಳೂರು, ಮಾ.07 www.bengaluruwire.com : ಸಾಮಾನ್ಯವಾಗಿ ಕುಟುಂಬದ ಜೊತೆನೋ, ಸ್ನೇಹಿತರ ಜೊತೆಗೋ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಿಗೆ ಹೋಗಿ ಊಟ- ತಿಂಡಿ ಮಾಡಿ ಬರುತ್ತೇವೆ. ಆದರೆ ಎಷ್ಟೋ ಜನ ಆ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಲ್ಲಿ ಜಿಎಸ್ ಟಿ ತೆರಿಗೆ ಜೊತೆಗೆ ಸೇವಾ ಶುಲ್ಕವನ್ನು ತಮಗೆ ಅರಿವಿಲ್ಲದೆ ಕಟ್ಟಿ ಬರುತ್ತಿದ್ದಾರೆ. ಕಾನೂನಿನಲ್ಲಿ, ಹೋಟೆಲ್ ಗಳು ಈ ರೀತಿ ಬಿಲ್ ನಲ್ಲಿ ಜೆಎಸ್ ಟಿ ತೆರಿಗೆ ಹಾಕುವಾಗ ಸೇವಾ ಶುಲ್ಕವನ್ನು ಸ್ವಯಂಪ್ರೇರಿತವಾಗಿ ಹಾಕುವಂತಿಲ್ಲ ಎಂದಿದೆ.
ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (Central Consumer Protection Authority – CCPA) ನೀಡಿರುವ ಮಾರ್ಗಸೂಚಿ ಪ್ರಕಾರ ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳು ಗ್ರಾಹಕರಿಗೆ ತಮ್ಮ ಬಿಲ್ ನಲ್ಲಿ ಜಿಎಸ್ ಟಿ ತೆರಿಗೆ ಜೊತೆಗೆ ಸೇವಾ ಶುಲ್ಕವನ್ನು ಸ್ವಯಂಪ್ರೇರಿತವಾಗಿ ಹಾಕುವಂತಿಲ್ಲ ಎಂದು ತಿಳಿಸಿದೆ. ಆದರೂ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಹೋಟೆಲ್- ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಸೇವಾಶುಲ್ಕ ವಿಧಿಸಿ ಸಂಗ್ರಹಿಸಲಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ.
ಇತ್ತೀಚೆಗಷ್ಟೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸರ್ಕಾರೇತರ ಸಂಸ್ಥೆಯು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಫೆ.1 ಹಾಗೂ ಮಾ.3ರಂದು ಎರಡು ಪ್ರತ್ಯೇಕ ದೂರುಗಳನ್ನು ಸಲ್ಲಿಸಿದೆ. ಈ ದೂರಿನಲ್ಲಿ “ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ‘ಈಡನ್ ಪಾರ್ಕ್ ರೆಸ್ಟೋರೆಂಟ್’, ಕುಮಾರ ಪಾರ್ಕ್ ನಲ್ಲಿ ‘ದಿ ಲಲಿತ್ ಅಶೋಕ್’ ನ ‘ಬಲುಚಿ’ಯಲ್ಲಿ ಹಾಗೂ ವಸಂತನಗರದ ‘ಇಂಡಿಯನ್ ಚಾಯ್’ ಹೋಟೆಲ್ ಗಳಲ್ಲಿ ಕಾನೂನು ಬಾಹಿರವಾಗಿ ಬಿಲ್ ಜೊತೆಗೆ ಸೇವಾ ಶುಲ್ಕ ಹಾಗೂ ಸೇವಾ ತೆರಿಗೆ ವಿಧಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ” ಎಂದು ದೂರು ನೀಡಿತ್ತು.
“ಅಲ್ವಿನ್ ಎಂಬುವರು ತಮ್ಮ ಸಂಸ್ಥೆಗೆ ನೀಡಿರುವ ದೂರಿನಲ್ಲಿ ಫೆ.7 ರಂದು ಕುಮಾರ ಪಾರ್ಕ್ ನಲ್ಲಿ ‘ದಿ ಲಲಿತ್ ಅಶೋಕ್’ ನ ‘ಬಲುಚಿ’ಯಲ್ಲಿ ಊಟಕ್ಕೆಂದು ತೆರಳಿದಾಗ ಅವರ ಊಟದ ಬಿಲ್ ನಲ್ಲಿ 2076.80 ಪೈಸೆ ನಮೂದಾಗಿದ್ದು, ಅದರಲ್ಲಿ 750 ಎಂಎಲ್ ನೀರಿಗೆ 300 ರೂ. ವಿಧಿಸಿ ಎಂಆರ್ ಪಿ ನಿಯಮವನ್ನು ಉಲ್ಲಂಘಿಸಿ ಹಣ ವಸೂಲಿ ಮಾಡಿದ್ದಾರೆ. ಅಲ್ಲದೆ ಶೇ.10ರಷ್ಟು ಸೇವಾ ಶುಲ್ಕ ಲೆಕ್ಕಹಾಕಿ 160 ರೂ. ಹಾಗೂ ಸಿಜಿಎಸ್ ಟಿ (ಶೇ.9) 144ರೂ. ಹಾಗೂ ಎಸ್ ಜಿಎಸ್ ಟಿ (ಶೇ.9) 144 ರೂ. ಹಾಗೂ ಸಿಜಿಎಸ್ ಟಿ- ಎಸ್ ಸಿ (ಶೇ.9) 14 ರೂ., ಎಸ್ ಜಿಎಸ್ ಟಿ-ಎಸ್ ಸಿ (ಶೇ.9) 14 ರೂ. ವಿಧಿಸಲಾಗಿದೆ. ಈ ಹೋಟೆಲ್ ನಲ್ಲಿ ಗ್ರಾಹಕರಿಂದ ನಿಯಮ ಬಾಹಿರವಾಗಿ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಸೇವಾ ತೆರಿಗೆ ವಸೂಲಿ ಮಾಡುತ್ತಿರುವ ಬಗ್ಗೆ ದೂರಿದ್ದಾರೆ.” ಎಂದು ದೂರಿನ ಪತ್ರದಲ್ಲಿ ಹೇಳಿದೆ.
ಅದೇ ರೀತಿ “ಫೆ.4 ರಂದು ವಸಂತನಗರದಲ್ಲಿನ ‘ಇಂಡಿಯನ್ ಚಾಯ್’ ಹೋಟೆಲ್ ಚಹಾ ಖರೀದಿಸಿದ್ದು, ಈ ಹೋಟೆಲ್ ನವರು 218 ರೂ. ಬಿಲ್ ನೀಡಿ, ಸೇವಾ ಶುಲ್ಕವಾಗಿ 9.90 ರೂ. ಸಂಗ್ರಹಿಸಿದ್ದಾರೆ ಎಂದು ದೂರಿದ್ದಾರೆ. ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿ, ಕಾನೂನು ಬಾಹಿರವಾಗಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ತಪ್ಪಿತಸ್ಥ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಿಯಮ ಮೀರಿ ಸಂಗ್ರಹಿಸಿದ ಸೇವಾ ಶುಲ್ಕ ಹಾಗೂ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಾಗಿ ಸಂಗ್ರಹಿಸಿದ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಸಿಟಿಜನ್ ರೈಟ್ಸ್ ಫೌಂಡೇಷನ್ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಸಿಸಿಪಿಎ ಮಾರ್ಗಸೂಚಿ ಏನು ಹೇಳುತ್ತೆ?:
ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಈ ಹೊರಡಿಸಿದ ಮಾರ್ಗಸೂಚಿಯಲ್ಲಿ “ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಆಹಾರ ಬಿಲ್‌ನಲ್ಲಿ ಡೀಫಾಲ್ಟ್ ಆಗಿ ಸೇವಾ ಶುಲ್ಕವನ್ನು ಸೇರಿಸಬಾರದು ಎಂದು ಷರತ್ತು ವಿಧಿಸುತ್ತದೆ. ಯಾವುದೇ ಬೇರೆ ಹೆಸರಿನಿಂದ ಸೇವಾ ಶುಲ್ಕವನ್ನು ಸಂಗ್ರಹಿಸಬಾರದು. ಯಾವುದೇ ಹೋಟೆಲ್ ಅಥವಾ ರೆಸ್ಟೊರೆಂಟ್ ಗ್ರಾಹಕರನ್ನು ಸೇವಾ ಶುಲ್ಕ ಪಾವತಿಸಲು ಒತ್ತಾಯಿಸುವಂತಿಲ್ಲ ಮತ್ತು ಸೇವಾ ಶುಲ್ಕವು ಸ್ವಯಂಪ್ರೇರಿತ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಒಳಪಟ್ಟಿದ್ದು, ಇದರ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಸೇವಾ ಶುಲ್ಕದ ಸಂಗ್ರಹದ ಆಧಾರದ ಮೇಲೆ ಸೇವೆಗಳ ಪ್ರವೇಶ ಅಥವಾ ನಿಬಂಧನೆಗಳ ಮೇಲೆ ಯಾವುದೇ ನಿರ್ಬಂಧವನ್ನು ಗ್ರಾಹಕರ ಮೇಲೆ ವಿಧಿಸಲಾಗುವಂತಿಲ್ಲ. ಸೇವಾ ಶುಲ್ಕವನ್ನು, ಆಹಾರದ ಬಿಲ್‌ನೊಂದಿಗೆ ಸೇರಿಸುವ ಮೂಲಕ ಮತ್ತು ಒಟ್ಟು ಮೊತ್ತದ ಮೇಲೆ ಜಿಎಸ್ ಟಿ ವಿಧಿಸುವ ಮೂಲಕ ಸಂಗ್ರಹಿಸುಂತಿಲ್ಲ.” ಎಂದು ಸ್ಪಷ್ಟವಾಗಿ ತಿಳಿಸಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ದೂರು ಸಲ್ಲಿಸಬಹುದು :
ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ನಿಯಮಬಾಹಿರವಾಗಿ ಸೇವಾಶುಲ್ಕ ವಿಧಿಸುತ್ತಿರುವುದರ ಬಗ್ಗೆ ದೂರುಗಳಿದ್ದಲ್ಲಿ ಗ್ರಾಹಕರು 1915 ನಂಬರಿನ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಯಲ್ಲಿ ದೂರು ಸಲ್ಲಿಸಬಹುದು. ಅಥವಾ ಎನ್ ಸಿಎಚ್ ಮೊಬೈಲ್ ಆಂಡ್ರಾಯ್ಡ್ ಆಪ್ ಡೌನ್ ಲೋಡ್ ಮಾಡಿಕೊಂಡು ಅಲ್ಲಿಯೂ ದೂರು ದಾಖಲಿಸಬಹುದು.
ಮಾರ್ಗಸೂಚಿ ಕುರಿತಂತೆ ನ್ಯಾಯಾಲಯ ಮೆಟ್ಟಲೇರಿದ್ದ ಪ್ರಕರಣ :
ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕ ವಿಧಿಸಿರುವುದನ್ನು ಪ್ರಶ್ನಿಸಿ ಸಿಸಿಪಿಎ ವಿಧಿಸಿರುವ ಮಾರ್ಗಸೂಚಿಯನ್ನು ಪ್ರಶ್ನಿಸಿ ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಘ (NRAI) ಹಾಗೂ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಒಕ್ಕೂಟ (FHRAI) ಮತ್ತಿತರರು ದೆಹಲಿ ಹೈಕೋರ್ಟ್ ಮೆಟ್ಟಲೇರಿದ್ದರು. ಆಗ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ನ್ಯಾಯಮೂರ್ತಿ ಯಶವಂತ್ ವರ್ಮಾ 2022ರ ಜು.20ರಂದು ಸಿಸಿಪಿಎ ನ ಮಾರ್ಗಸೂಚಿಗೆ ತಡೆಯಾಜ್ಞೆ ನೀಡಿದ್ದರು. ಬಳಿಕ ಸಿಸಿಪಿಎ ಹಾಗೂ ಕೇಂದ್ರ ಸರ್ಕಾರ ಏಕ ಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರು. ಆಗ ನ್ಯಾಯಪೀಠ, ಈ ವಿಚಾರವನ್ನು ಏಕ ಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳುವಂತೆ ತಿಳಿಸಿತ್ತು. ಆನಂತರದಲ್ಲಿ ತಡೆಯಾಜ್ಞೆ ತೆರವಿಗೆ ಕೇಂದ್ರ ಹಾಗೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಏಕ ಸದಸ್ಯ ಪೀಠದ ಎದುರು ಅರ್ಜಿ ಸಲ್ಲಿಸಿತ್ತು.
“ಜಿಎಸ್ ಟಿ ಕಟ್ಟಿಯೂ ಸೇವಾ ಶುಲ್ಕ ಸಂಗ್ರಹ ತಪ್ಪು” :
“ಬೆಂಗಳೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕೆಲವು ಹೋಟೆಲ್- ರೆಸ್ಟೋರೆಂಟ್ ಗಳು ಆಹಾರದ ಬಿಲ್ ಜೊತೆಗೆ ಜಿಎಸ್ ಟಿ ವಿಧಿಸುವುದಲ್ಲದೆ ಸೇವಾ ಶುಲ್ಕವನ್ನು ಅಕ್ರಮವಾಗಿ ವಿಧಿಸುತ್ತಿದ್ದಾರೆ. ಇದು ಅಕ್ಷಮ್ಯ ತಪ್ಪು. ಉದಾಹರಣೆಗೆ, ಒಂದು ದಿನಕ್ಕೆ ಒಬ್ಬ ವ್ಯಕ್ತಿಯಿಂದ ಹೊಟೆಲೊಂದರಲ್ಲಿ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಮೇಲೆ ಸೇವಾ ತೆರಿಗೆಯಿಂದ 2076 ಬಿಲ್ ನಲ್ಲಿ 188 ರೂ. ಸರ್ವೀಸ್ ಚಾರ್ಜ್ ಹಾಗೂ ಜಿಎಸ್ ಟಿ ಸರ್ವೀಸ್ ಚಾರ್ಜ್ ಸಂಗ್ರಹಿಸಿದರೆ ಉಳಿದ ಗ್ರಾಹಕರಿಂದ ಇನ್ನೆಷ್ಟು ಹಣವನ್ನು ಸೇವಾ ಶುಲ್ಕದ ಹೆಸರಿನಲ್ಲಿ ಸಂಗ್ರಹಿಸಿ ಜನರ ಕಣ್ಣಿಗೆ ಕೆಲವು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಮಂಕುಬೂದಿ ಎರೆಚುತ್ತಿದ್ದಾರೆ? ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.”
– ಕೆ.ಎ.ಪೌಲ್, ಅಧ್ಯಕ್ಷರು, ಸಿಟಿಜನ್ಸ್ ರೈಟ್ಸ್ ಫೌಂಡೇಷನ್