ಬೆಂಗಳೂರು, ಮಾ.2 www.bengaluruwire.com : ಲೋಕಾಯುಕ್ತ ಪೊಲೀಸರು ಗುರುವಾರ ಬೆಂಗಳೂರು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ಕೊಳಕು ಮುಖವನ್ನು ಅನಾವರಣ ಮಾಡಿದ್ದಾರೆ. ಕರ್ನಾಟಕ ಸೋಪು ಮತ್ತು ಮಾರ್ಜಕ ಲಿ. (KSDL)ಸಂಸ್ಥೆಯಲ್ಲಿ ಟೆಂಡರ್ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆಯಿಟ್ಟು 40 ಲಕ್ಷ ರೂ. ನಗದು ಹಣ ಪಡೆಯುವಾಗ ಈ ಭ್ರಷ್ಟ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾದಲ್ ಎಂಬುವರೇ ಲೋಕಾಯುಕ್ತ ಪೊಲೀಸರಿಗೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ. ಈತ ಅಸಲಿಗೆ ಕೆಎಸ್ ಡಿಎಲ್ ಸಂಸ್ಥೆಯಲ್ಲಿ ಕಚ್ಚಾವಸ್ತು ಖರೀದಿ ಟೆಂಡರ್ ಗುತ್ತಿಗೆಯನ್ನು ಕೊಡಿಸಲು ದೂರುದಾರರಿಂದ 81 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆ ಪೈಕಿ ಗುರುವಾರ ಸಂಜೆ 40 ಲಕ್ಷ ರೂ. ನಗದು ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗೆ ತರಲೆಂದು ಕಂತೆ ಕಂತೆ ನಗದು ಹಣವನ್ನು ಬ್ಯಾಗ್ ಗಳಲ್ಲಿ, ಚೀಲಗಳಲ್ಲಿ ಹೊತ್ತು ತರಲಾಗಿತ್ತು. ಈ ನಗದು ಹಣದಲ್ಲಿ ಬಹುತೇಕ 500 ರೂ. ನೋಟುಗಳೇ ತುಂಬಿ ಹೋಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವ ಹೊತ್ತಿನಲ್ಲಿ ಕೆಎಸ್ ಡಿಎಲ್ ಅಧ್ಯಕ್ಷ ಹಾಗೂ ಚನ್ನಗಿರಿ ವಿಧನಸಭಾ ಕ್ಷೇತ್ರದ ಶಾಸಕ ಕೆ.ಮಾದಲ್ ವಿರೂಪಾಕ್ಷಪ್ಪ ಎಂಬುವರ ಪರವಾಗಿ ಪ್ರಶಾಂತ್ ಮಾದಲ್ ಈ ನಗದು ಹಣವನ್ನು ಗುರುವಾರ ಸಂಜೆ 6.45ರ ಸಂದರ್ಭದಲ್ಲಿ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆ ನಗದು ಹಣವನ್ನು ಸಾಕ್ಷಿ ಸಮೇತ ವಶಪಡಿಸಿಕೊಂಡಿದ್ದು, ಆರೋಪಿ ವಿರುದ್ಧ ಕಾನುನು ಕ್ರಮ ಜರುಗಿಸಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆ ಮಾಧ್ಯಮಗಳಿಗೆ ತಿಳಿಸಿದೆ.
ಆರೋಪಿ ಪ್ರಶಾಂತ್ ಮಾದಲ್ ಶಾಸಕ ಕೆ.ಮಾದಲ್ ವಿರೂಪಾಕ್ಷಪ್ಪನ ಪುತ್ರರಾಗಿದ್ದು, ತಂದೆಯ ಬದಲಿಗೆ ಈ ನಗದು ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.