ಬೆಂಗಳೂರು, ಮಾ.2 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯು 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು 11,157.83 ಕೋಟಿ ರೂ. ಮೊತ್ತದ 6.14 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ.
ನಗರದ ಟೌನ್ ಹಾಲ್ ನಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರೆ ಗುರುವಾರ ಬೆಳಗ್ಗೆ ಆಯವ್ಯಯ ಮಂಡಿಸಿದರು. 20023-24ನೇ ಆಯವ್ಯಯದಲ್ಲಿ 7,070.11 ಕೋಟಿ ರೂ. ಪಾಲಿಕೆ ಆದಾಯ, ಕೇಂದ್ರ- ರಾಜ್ಯದ ಅನುದಾನಗಳು 4,093.86 ಕೋಟಿ ರೂ ಇರಲಿದ್ದು, ಒಟ್ಟು ಸ್ವೀಕೃತಿ 11,163.97 ಕೋಟಿ ರೂ.ಗಳಿದ್ದರೆ, 11,157.83 ಕೋಟಿ ರೂ. ಒಟ್ಟು ಖರ್ಚು ಸೇರಿದಂತೆ 6.14 ಕೋಟಿ ರೂ. ಉಳಿತಾಯ ಬಜೆಟ್ ಕೊಟ್ಟಿದ್ದಾರೆ.
ಒಟ್ಟಾರೆ ನೋಡಿದಾಗ ಈ ಬಾರಿ ವಿಧಾನಸಭಾ ಚುನಾವಣೆಯೂ ಸಮೀಪವಿರುವಾಗ ನಗರದ ಜನತೆಗೆ ಸಮತೋಲಿತ ಬಜೆಟ್ ನೀಡಿದ್ದಾರೆ ಹಣಕಾಸು ವಿಶೇಷ ಆಯುಕ್ತರು.
ಕಾರ್ಯನಿರತ ಮಹಿಳಾ ಉದ್ಯೋಗಿಗಳಿಗಾಗಿ ‘ಸಾವಿತ್ರಿ ವಸತಿ’ ಹಾಸ್ಟೆಲ್ :
ನಗರದಲ್ಲಿನ ಕಾರ್ಯನಿರತ ಮಹಿಳಾ ಉದ್ಯೋಗಿಗಳಿಗಾಗಿ ವಲಯಗಳಲ್ಲಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ‘ಸಾವಿತ್ರಿ ವಸತಿ’ ಹಾಸ್ಟೆಲ್ ಗಳನ್ನು ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ತೆರೆಯಲಾಗುತ್ತದೆ.
ಹಂತ ಹಂತವಾಗಿ ಪೌರಕಾರ್ಮಿಕರ ಖಾಯಂಮಾತಿ :
2023-24 ಇಸವಿಯಲ್ಲಿ 11,710 ನೇರವೇತನ ಕಾರ್ಮಿಕರನ್ನು ಹಂತ ಹಂತವಾಗಿ ಪಾಲಿಕೆಯ ಖಾಯಂ ನೌಕರರನ್ನಾಗಿ ನೇಮಿಸಲಾಗುತ್ತದೆ. ವಲಯಕ್ಕೆ ಒಂದರಂತೆ 8 ವೃದ್ಧಾಶ್ರಮ ತೆರೆಯುವ ರೀತಿಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ 16 ಕೋಟಿ ರೂ.ಗಳನ್ನು ‘ಶ್ರವಣ ವಸತಿ’ ವೃದ್ಧಾಶ್ರಮ ತೆರೆಯಲಾಗುತ್ತದೆ. ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ‘ಪಟ್ಟಣ ಮಾರಾಟ ಸಮಿತಿ’ ರಚಿಸಲಾಗುತ್ತದೆ. ಅಲ್ಲದೆ ಬೀದಿಬದಿ ವ್ಯಾಪಾರ ವಲಯಗಳನ್ನು ಅಭಿವೃದ್ಧಿಪಡಿಸಲು 25 ಕೋಟಿ ರೂ. ಯೋಜನೆ ಜಾರಿಗೊಳಿಸಲಾಗುತ್ತದೆ.
‘ಬೆಂಗಳೂರು ವೈದ್ಯಕೀಯ ವ್ಯವಸ್ಥೆ’ ಜಾರಿಗೆ ಕ್ರಮ :
ಬೆಂಗಳೂರಿನಲ್ಲಿ ಸಾಮಾನ್ಯ ಜನರ ವೈದ್ಯಕೀಯ ಚಿಕಿತ್ಸೆಗಳಿಗಾಗಿ ‘ಬೆಂಗಳೂರು ವೈದ್ಯಕೀಯ ವ್ಯವಸ್ಥೆ’ ಪ್ರಾರಂಭಿಸಲಿದ್ದು, ಇದಕ್ಕಾಗಿ ಬೆಂಗಳೂರಿಗಾಗಿಯೇ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಟ್ಟದ ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡಲಾಗುತ್ತದೆ. ಯಾವುದೇ ರೋಗಿ ವಿಶೇಷ ಚಿಕಿತ್ಸೆ ಅಗತ್ಯ ಪೂರೈಸಲು ಕಾಲ್ ಸೆಂಟರ್, ಹೆಲ್ಪ್ ಡೆಸ್ಕ್, ಉಚಿತ ನೋಂದಾವಣಿ, ಉಚಿತ ಚಿಕಿತ್ಸೆ ಹಾಗೂ ಚಿಕಿತ್ಸೆ ನಂತರ ಫಾಲೋಅಪ್, ಸೇರಿದಂತೆ ನಾಗರೀಕರ ವೈದ್ಯಕೀಯ ದಾಖಲೆಗಳ ನಿರ್ವಹಣೆ ಮಾಡಲಾಗುತ್ತದೆ. ಈ ಯೋಜನೆಗೆ 2 ಕೋಟಿ ರೂ. ಮೀಸಲಿಡಲಾಗಿದೆ.
ಪಾಲಿಕೆಯ 243 ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾಗವಾಗಿ 92 ಕೋಟಿ ರೂ. ವೆಚ್ಚದಲ್ಲಿ 61 ಹೊಸ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ.
‘ಬೆಂಗಳೂರು ಸಾರ್ವಜನಿಕ ಶಾಲೆ’ ಮಾದರಿಯಲ್ಲಿ ಪಾಲಿಕೆಯ ಎಲ್ಲಾ ಶಾಲಾ-ಕಾಲೇಜುಗಳ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು 65 ಕೋಟಿ ರೂ. ಮೀಸಲಿಟ್ಟಿದೆ. ಪಾಲಿಕೆ ಶಾಲಾ- ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸ್ವಯಂಸೇವಾ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಕ್ರಮಕ್ಕಾಗಿ ‘ಸಿಎಸ್ಆರ್ ನೀತಿ’ ಅಳವಡಿಸಿಕೊಳ್ಳಲಾಗುತ್ತದೆ ಎಂದು ಹಣಕಾಸು ವಿಶೇಷ ಆಯುಕ್ತರು ತಿಳಿಸಿದ್ದಾರೆ.
4,412 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ :
2023-24 ನೇ ಸಾಲಿನಲ್ಲಿ ಆಸ್ತಿ ತೆರಿಗೆ ಬಾಬ್ತಿನಲ್ಲಿ ಸೆಸ್ ಸೇರಿದಂತೆ ಒಟ್ಟು 4,790 ಕೋಟಿ ರೂ. ಸಂಗ್ರಹಿಸುವ ಗುರಿಯಿದ್ದು, ಸೆಸ್ ಹೊರತುಪಡಿಸಿ 4,412 ಕೋಟಿ ರೂ. ಆಸ್ತಿ ತೆರಿಗೆ ಗುರಿ ನಿಗದಿಪಡಿಸಲಾಗಿದೆ. ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಸಮಗ್ರ ತೆರಿಗೆ ಸಂಗ್ರಹ ವಿಧಾನ ಪರಿಷ್ಕರಣೆ ಮಾಡಲು ವಾಣಿಜ್ಯ ಉಪಯೋಗಿ ಎಲ್ಲಾ ಪ್ರಮುಖ ಕಟ್ಟಡಗಳ ಆಸ್ತಿ ಸ್ವಯಂ ಘೋಷಣೆ ಪತ್ರಗಳನ್ನು ವಿಶೇಷ ತಪಾಸಣೆ ಮಾಡಲಾಗುತ್ತದೆ.
ಈ ವರ್ಷದಲ್ಲೆ ‘ಬಿ’ ಖಾತೆ ‘ಎ’ ಖಾತೆಗೆ ಬದಲಾವಣೆಗೆ ಕಾಯ್ದೆ ತಿದ್ದುಪಡಿ :
ಪಾಲಿಕೆ ವ್ಯಾಪ್ತಿಯಲ್ಲಿ ‘ಬಿ’ಖಾತೆ ನಿವೇಶನಗಳನ್ನು ಕ್ರಮಬದ್ದಗೊಳಿಸಿ ‘ಎ’ಖಾತೆ ನೀಡುವ ಯೋಜನೆ 2022-23 ವರ್ಷ್ಯಾಂತ್ಯದಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಪಾಲಿಕೆಗೆ ಈ ವರ್ಷವೇ 300 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ. 2023-24ನೇ ವರ್ಷದಲ್ಲಿ 800 ಕೋಟಿ ರೂ. ಆದಾಯ ನಿರೀಕ್ಷೆಯಿದೆ ಎಂದು ವಿಶೇಷ ಆಯುಕ್ತ ಜಯರಾಮ್ ರಾಯ್ ಪುರೆ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಪಾಲಿಕೆ ಅಧಿಕಾರಿ- ನೌಕರರಿಗೆ ಅವಿಷ್ಕಾರ ಪ್ರಶಸ್ತಿ :
ಪಾಲಿಕೆಯಲ್ಲಿ ಹೊಸ ವ್ಯವಸ್ಥೆ, ತಂತ್ರಾಂಶ, ವಿನ್ಯಾಸ, ಸಮಸ್ಯೆ ನಿವಾರಣೆಗೆ ಸೂತ್ರ ಅಥವಾ ಇನ್ನಾವುದೇ ಅವಿಷ್ಕಾರ ಉತ್ತೇಜಿಸಲು ಇನ್ನು ಮುಂದೆ ಪ್ರತಿವರ್ಷ 2 ಲಕ್ಷ ರೂ. ಮೊತ್ತದ ‘ನಾಡಪ್ರಭು ಕೆಂಪೇಗೌಡ ಅವಿಷ್ಕಾರ’ ಪ್ರಶಸ್ತಿ ನೀಡಲು ಬಜೆಟ್ ಭಾಷಣದಲ್ಲಿ ಘೋಷಿಸಿದರು. ಕಂದಾಯ ಇಲಾಖೆಗೆ ತೆರಿಗೆ ಸಂಗ್ರಹ ಗುರಿಯಂತೆ ಉಳಿದ ಎಲ್ಲಾ ಇಲಾಖೆಗಳಿಗೂ ‘ಕಾರ್ಯಯೋಜನೆಯ ಗುರಿ’ ನೀಡಲಾಗುವುದು. ಗುರಿ ಮುಟ್ಟುವರಿಗೆ ಪುರಸ್ಕಾರ ನೀಡಲಾಗುತ್ತದೆ.
ಬಿಬಿಎಂಪಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗೆ ಬೆಂಗಳೂರು ಜಲಮಂಡಳಿಯಲ್ಲಿರುವಂತೆ “ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ ಹೆಸರಲ್ಲಿ ಸೊಸೈಟಿ ರಚಿಸಲು ಕ್ರಮ. ಈ ಸಾಲಿನಲ್ಲಿ ಕಾರ್ಪಸ್ ಫಂಡ್ ಗಾಗಿ 10 ಕೋಟಿ ರೂ. ನಿಗದಿಪಡಿಸಲಾಗಿದೆ.
ನಗರದಲ್ಲಿ ರಸ್ತೆಗುಂಡಿ ತೊಂದರೆ ನಿವಾರಣೆಗೆ ಸಾರ್ವಜನಿಕರು ತಾವು ರಸ್ತೆಗುಂಡಿ ಚಿತ್ರವನ್ನು ಜಿಯೋಟ್ಯಾಗ್ ಮಾಡಿ ಅಪ್ ಲೋಡ್ ಮಾಡಲು ” ಫಿಕ್ಸ್ ಮೈ ಸ್ಟ್ರೀಟ್’ ಆಪ್ 2022-23ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು 2023-24ರಲ್ಲಿ ವಿಸ್ತಾರವಾಗಿ ಜಾರಿಗೆ ತರಲಿದೆ. 35 ಕೋಟಿ ರೂ. ವೆಚ್ಚದಲ್ಲಿ 12 ಕೆರೆಗಳ ಸಮಗ್ರ ಅಭಿವೃದ್ಧಿಪಡಿಲಾಗುತ್ತದೆ.
ಹೊಸದಾಗಿ 150 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್ :
1410 ಕೋಟಿ ರೂ. ವೆಚ್ಚದಲ್ಲಿ 150 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್, 350 ಕಿ.ಮೀ ಅರ್ಟೀರಿಯಲ್ ಹಾಗೂ ಸಬ್ ಅರ್ಟಿರಿಯಲ್ ರಸ್ತೆಗಳ ಲೈಟ್ ಟೆಂಡರ್ ಶ್ಯೂರ್ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿಗೆ 450 ಕೋಟಿ ರೂ. ಮೀಸಲಿಡಲಾಗಿದೆ. 75 ಪ್ರಮುಖ ಜಂಕ್ಷನ್ ಗಳ ಅಭಿವೃದ್ಧಿ, 60 ಅಡಿ ಅಥವಾ ಅದಕ್ಕೂ ಕಡಿಮೆಯಿರುವ ಸಂಚಾರ ದಟ್ಟಣೆಯ ಬಾಟಲ್ ನೆಕ್ ಪರಿಸ್ಥಿತಿ ನಿವಾರಣೆಗೆ 150 ಕೋಟಿ ರೂ. ನಿಗಧಿ ಮಾಡಲಾಗಿದೆ.
ನಗರದಲ್ಲಿ 42 ಮೇಲ್ಸೇತುವೆ (Flyover) ಮತ್ತು 28 ಕೆಳಸೇತುವೆ (Underpass) ಗಳಿದ್ದು, ಈ ವರ್ಷದಲ್ಲಿ ಮತ್ತೆ ನಾಲ್ಕು ಮೇಲ್ಸೇತುವೆಗಳು ಹಾಗೂ ಕೆಳ ಸೇತುವೆ ಸೇರ್ಪಡೆಯಾಗಬಹುದಾಗಿದೆ. ಇವುಗಳ ನಿರ್ವಹಣೆಗೆ 20 ಕೋಟಿ ರೂ. ಮೀಸಲಿರಿಸಿದೆ.
ಬೆಂಗಳೂರಿನ ಪ್ರವಾಹ ಪರಿಸ್ಥಿತಿಗೆ ಸಮಗ್ರ ಅಭಿವೃದ್ಧಿ ಯೋಜನೆ :
ಬೆಂಗಳೂರಿನ ಹವಾಮಾನ ಬದಲಾವಣೆ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಿಸಲು 2023-24ರಿಂದ 2025-26 ರ ಮೂರು ವರ್ಷಗಳ ಅವಧಿಯಲ್ಲಿ 3 ಸಾವಿರ ಕೋಟಿ ರೂ.ಗಳ ಸಮಗ್ರ ಯೋಜನೆ ಜಾರಿಗೊಳಿಸಲಾಗುತ್ತದೆ
ಹೆಂಗಸರಿಗಾಗಿ ಶೀ-ಟಾಯ್ಲೆಟ್ :
ನಗರದ ಹೆಂಗಸರು, ಗರ್ಭಿಣಿ ಸ್ತ್ರೀಯರು, ಮಕ್ಕಳಿಗೆ ಹಾಲು ಕುಡಿಸಲು, ಮೊಬೈಲ್ ಚಾರ್ಜಿಂಗ್ ಮತ್ತಿತರ ಉದ್ದೇಶಕ್ಕೆ 250 ಶೀ-ಟಾಯ್ಲೆಟ್ (ಅವಳ ಸ್ಥಳ) ನಿರ್ಮಿಸಲಿದೆ.
ಕಟ್ಟಡ ಅವಶೇಷ ತ್ಯಾಜ್ಯಕೇಂದ್ರ ಸ್ಥಾಪನೆ :
ಈಗಾಗಲೇ ನಗರದಲ್ಲಿ 1750 ಮೆ.ಟನ್ ನಿರ್ಮಾಣ ಹಾಗೂ ಕಟ್ಟಡ ಅವಶೇಷ ತ್ಯಾಜ್ಯಕೇಂದ್ರ ಸ್ಥಾಪಿಸಿದ್ದು, 2023-24ನೇ ವರ್ಷದಲ್ಲಿ ಇನ್ನೂ 5 ಕೇಂದ್ರ ಸೇರಿ ಒಟ್ಟು 3,000 ಮೆ.ಟನ್ ತ್ಯಾಜ್ಯ ನಿರ್ವಹಣಾ ಕೇಂದ್ರ ಸ್ಥಾಪಸಿಲಾಗುತ್ತದೆ. ಈ ಕಟ್ಟಡ ತ್ಯಾಜ್ಯ ಕೇಂದ್ರದಿಂದ ಮತ್ತೊಮ್ಮೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಕಚ್ಚಾವಸ್ತುಗಳನ್ನು ಉತ್ಪಾದಿಸಲಿವೆ. ಪ್ರತಿ ವಾರ್ಡ್ ನಲ್ಲಿ ಘನತ್ಯಾಜ್ಯ ಸಂಸ್ಕರಣಾ ಕೇಂದ್ರ ಹಾಗೂ ಹಸಿತ್ಯಾಜ್ಯ ಕಾಂಪೋಸ್ಟ್ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಪಾಲಿಕೆ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಫಲಕ :
15ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ಪಾಲಿಕೆಯ ಎಲ್ಲಾ ಕಟ್ಟಡಗಳ ಮೇಲೆ ‘ಸೋಲಾರ್ ರೂಫ್-ಟಾಪ್ ನೆಟ್ ಮೀಟರಿಂಗ್’ ಅಳವಡಿಸುವ ಯೋಜನೆ ಕಾರ್ಯಗತಗೊಳಿಸಲಾಗುತ್ತದೆ. ಇದೇ ಆಯೋಗದಡಿಯಲ್ಲಿ ನಗರದ ವಾಯುಮಾಲಿನ್ಯ ನಿಯಂತ್ರಣ ಯೋಜನೆಗಾಗಿ 450 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಜಯರಾಮ್ ರಾಯ್ ಪುರ ತಮ್ಮ ಭಾಷಣದಲ್ಲಿ ತಿಳಿಸಿದರು.
ತೋಟಗಾರಿಕೆ – ಅರಣ್ಯ :
ಪಾಲಿಕೆ ವ್ಯಾಪ್ತಿಯಲ್ಲಿ 2022-23ರಲ್ಲಿ 10 ಉದ್ಯಾನವನ ನಿಋಮಿಸಿದ್ದು, ಈ ವರ್ಷದಲ್ಲಿ ನಗರದ ಪಾರ್ಕ್ ಗಳ ಸಂಖ್ಯೆ 1223 ರಿಂದ 1233ಕ್ಕೆ ಹೆಚ್ಚಾಗಿದೆ. 2023-24ರಲ್ಲಿ 15 ಹೊಸ ಉದ್ಯಾನವನಗಳಿಗೆ 15 ಕೋಟಿ ರೂ. ಹಾಗೂ ಹಳೆ ಉದ್ಯಾನವನಗಳ ನಿರ್ವಹಣೆಗೆ 80 ಕೋಟಿ ರೂ. ನಿಗದಿಪಡಿಸಿದೆ. ಈ 2023-24ರಲ್ಲಿ ಸಸಿ ಬೆಳೆಸಲು, ಬೆಳೆಸುವಿಕೆಗೆ, 15 ಲಕ್ಷ ಸಸಿ ನೆಡಲು ಹಾಗೂ ನಿರ್ವಹಣೆಗೆ 40 ಕೋಟಿ ರೂ. ಮೀಸಲಿರಿಸಿದೆ.
ನಗರದ ಪ್ರವಾಸ ಸ್ಥಳಗಳ ಅಭಿವೃದ್ಧಿ :
ಬೆಂಗಳೂರು ನಗರದ ಪ್ರವಾಸ ಕೇಂದ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2023-24ರಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಕೆಂಪಾಂಬುದಿ ಕೆರೆ – ಬುಲ್ ಟೆಂಪಲ್ ರಸ್ತೆ ಪರಿಸರ, ಸ್ಯಾಂಕಿ ಕೆರೆ, ಕಾಡುಮಲ್ಲೇಶ್ವರ ದೇಗುಲದ ಪರಿಸರ ಹಾಗೂ ಹಲಸೂರು ಕೆರೆ, ಸೋಮೇಶ್ವರ ದೇಗುಲದ ಪರಿಸರವನ್ನು ಪ್ರವಾಸಿ ಕಾರಿಡಾರ್ ಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಮುಖ್ಯ ಆಯುಕ್ತರು ಏನು ಹೇಳಿದರು!?
ಬಜೆಟ್ ಭಾಷಣದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಂಬರುವ ಅಧಿವೇಶನದಲ್ಲಿ ‘ಬಿ’ ಖಾತೆಯಿರುವ ನಿವೇಶನವನ್ನು ‘ಎ’ಖಾತೆಯಲ್ಲಿ ಬದಲಾಯಿಸಲು ಕರ್ನಾಟಕ ಭೂಕಂದಾಯ ಕಾಯ್ದೆ ಹಾಗೂ ನಗರ ಮತ್ತು ಪಟ್ಟಣ ಯೋಜನೆ ಕಾಯ್ದೆಗೆ ತಿದ್ದುಪಡಿ ತರುವ ನಿರಿಕ್ಷೆಯಿಟ್ಟುಕೊಂಡು 2023-24ರ ವರ್ಷದಲ್ಲಿ 800 ಕೋಟಿ ರೂ. ಆದಾಯ ಬರುವ ಅಂದಾಜು ಮಾಡಲಾಗಿದೆ. ನಿಗಧಿಪಡಿಸಿದ ಕಟ್ಟಡ ಉಲ್ಲಂಘನೆಗಿಂತ ಹೆಚ್ಚಿನ ಪ್ರಮಾಣದ ‘ಬಿ’ ಖಾತೆ ಕಟ್ಟಡಗಳಿಗೆ ‘ಎ’ಖಾತೆ ನೀಡುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ನಗರದ ಪೂರ್ವ ಭಾಗದಲ್ಲಿ ಚಾಲ್ತಿಯಲ್ಲಿರುವ ಇ-ಆಸ್ತಿ 2 ಯೋಜನೆಯನ್ನು ಬೆಂಗಳೂರು ದಕ್ಷಿಣ, ಪಶ್ಚಿಮ ವಲಯಗಳಲ್ಲಿ ಜಾರಿಗೆ ತರಲಾಗುತ್ತದೆ. ಇಂದಿರಾ ಕ್ಯಾಂಟೀನ್ ಉತ್ತಮವಾಗಿ ನಡೆಯುತ್ತಿರುವ ಕಡೆಯಷ್ಟೆ ಗುತ್ತಿಗೆದಾರರು ಆಹಾರ ಪೂರೈಸುತ್ತಿದ್ದಾರೆ. ಅದಮ್ಯ ಚೇತನ ಸಂಸ್ಥೆಯು ಬೇಡಿಕೆಯಿರದ ನಗರದ 30-35 ಕ್ಯಾಂಟೀನ್ ಗಳಲ್ಲಿ ರಾತ್ರಿ ಊಟ ವಿತರಣೆಯನ್ನು ನಿಲ್ಲಿಸಿದೆ. ಒಟ್ಟಾರೆ ಈ ಬಾರಿ ಬಜೆಟ್ ನಲ್ಲಿ 50 ಕೋಟಿ ರೂ. ಮೀಸಲಿಡಲಾಗಿದೆ.
2011ರ ಜನಗಣತಿ ಅನ್ವಯ 243 ವಾರ್ಡ್ ಗಳ ಪುನರ್ವಿಂಗಡಣೆ ಮಾಡಲಾಗಿದ್ದು ಈ ಬಾರಿ ಎಲ್ಲಾ ವಾರ್ಡ್ ಗಳಿಗೂ ನಿರ್ವಹಣಾ ಕಾರ್ಯಗಳಿಗೆ 75 ಲಕ್ಷ ರೂ.ಗಳನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 10,947.96 ಕೋಟಿ ರೂ ಬಜೆಟ್ ಮಂಡಿಸಲಾಗಿತ್ತು ಆದರೆ ಬಿಬಿಎಂಪಿಯು ಈವರೆಗೆ 9,937.17 ಕೋಟಿ ರೂ.ನಷ್ಟು ವೆಚ್ಚ ಮಾಡಿದೆ ಎಂದಷ್ಟೇ ತುಷಾರ್ ಗಿರಿನಾಥ್ ಹೇಳಿದರು. ಆದರೆ ವಾಸ್ತವದಲ್ಲಿ ಬಜೆಟ್ ನಲ್ಲಿ ಘೋಷಿತ ಅಂಶಗಳೆಷ್ಟು ಅನುಷ್ಟಾನ ಆದವೆಂದು ತಿಳಿಸಲಿಲ್ಲ.
ಬಿಬಿಎಂಪಿ ಕಾಯ್ದೆಯ ಪ್ರಕಾರ ಮಾ.10ರ ಒಳಗೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮುಂದಿನ ಆರ್ಥಿಕ ವರ್ಷದ ಬಜೆಟ್ ಮಂಡಿಸಬೇಕು. ಅದರಂತೆ ಮಾ.2ರಂದೇ ಬಜೆಟ್ ಮಂಡಿಸಿದ್ದೇವೆ. ಈಗಾಗಲೇ ಆಡಳಿತಾಧಿಕಾರಿ ಈ ಬಜೆಟ್ ಗೆ ಅನುಮೋದನೆ ನೀಡಿದ್ದು ಇನ್ನು ಎರಡು ಮೂರು ದಿನದಲ್ಲಿ ಸರ್ಕಾರಕ್ಕೆ ಬಜೆಟ್ ಅನುಮೋದನೆ ಕಡತ ಕಳಿಸಲಿದ್ದೇವೆ ಎಂದು ಹಣಕಾಸು ವಿಶೇಷ ಆಯುಕ್ತರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶೇಷ ಆಯುಕ್ತರಾದ ಹರೀಶ್ ಕುಮಾರ್, ದೀಪಕ್, ರವೀಂದ್ರ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಲಾಯಿತು.