ಶಿವಮೊಗ್ಗ, ಫೆ.27 www.bengaluruwire.com : ಇಂದಿಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭೇಟಿ ನೀಡಿದ್ದು, ಸೋಗಾನೆಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಸೇರಿದಂತೆ 3,600 ಕೋಟಿ ರೂ.ಗಿಂತ ಹೆಚ್ಚಿನ ಬಹು ವಿಧದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಇದಕ್ಕೂ ಮೊದಲು ನವದದೆಹಲಿಯಿಂದ ಸೇನಾ ವಿಮಾನದಲ್ಲಿ ಬಂದ ಮೋದಿಯವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿದರು. ಬಳಿಕ ವಿಮಾನ ನಿಲ್ದಾಣದ ಉದ್ಘಾಟನೆ ಬಳಿಕ, ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ಹೊಸ ರೈಲು ಮಾರ್ಗ (Shivamogga – Shikaripura – Ranebennur new Railway line) ಮತ್ತು ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ (Koteganguru Railway coaching depot) ಸೇರಿದಂತೆ ಶಿವಮೊಗ್ಗದಲ್ಲಿ ಎರಡು ರೈಲ್ವೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು. 215 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಬಹು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ (multi-village schemes) ಶಂಕುಸ್ಥಾಪನೆ ನೆರವೇರಿಸಿದರು. ಜಲ ಜೀವನ್ ಮಿಷನ್ (Jal Jeevan Mission) ಅಡಿಯಲ್ಲಿ 950 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹುಗ್ರಾಮ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಶಿವಮೊಗ್ಗ ನಗರದಲ್ಲಿ 895 ಕೋಟಿ ರೂ.ಗೂ ಅಧಿಕ ಮೊತ್ತದ 44 ಸ್ಮಾರ್ಟ್ ಸಿಟಿ ಯೋಜನೆಗಳನ್ನು (Smart City Projects) ಉದ್ಘಾಟಿಸಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರಕವಿ ಕುವೆಂಪು (National poet Kuvempu) ಅವರ “ಏಕ ಭಾರತ ಶ್ರೇಷ್ಠ ಭಾರತ”ಕ್ಕಾಗಿ ಸಮರ್ಪಣಾ ಭಾವವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಮಲೆನಾಡಿಗೆ ತಲೆಬಾಗಿ ನಮಿಸಿದರು. ಶಿವಮೊಗ್ಗದಲ್ಲಿ ನೂತನವಾಗಿ ಉದ್ಘಾಟನೆಗೊಂಡ ವಿಮಾನ ನಿಲ್ದಾಣವನ್ನು ಉಲ್ಲೇಖಿಸಿದ ಪ್ರಧಾನಿ, “ಬಹಳ ದಿನಗಳ ನಂತರ ಇಂದು ನಾಗರಿಕರ ಅಗತ್ಯಗಳನ್ನು ಪೂರೈಸಲಾಗಿದೆ” ಎಂದು ಹೇಳಿದರು. ವಿಮಾನ ನಿಲ್ದಾಣದ ಭವ್ಯವಾದ ಸೌಂದರ್ಯ ಮತ್ತು ನಿರ್ಮಾಣದ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, “ಕರ್ನಾಟಕದ ಸಂಪ್ರದಾಯಗಳು ಮತ್ತು ತಂತ್ರಜ್ಞಾನದ ಸಮ್ಮಿಲನವನ್ನು ಈ ಏರ್ ಪೋರ್ಟ್ ಎತ್ತಿ ತೋರಿಸಿದೆ. ಇದು ಕೇವಲ ವಿಮಾನ ನಿಲ್ದಾಣವಾಗದೆ ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವ ಅಭಿಯಾನವಾಗಿದೆ” ಎಂದು ಹೇಳಿದರು.
ಮೊಬೈಲ್ ಟಾರ್ಚ್ ಬೆಳಗಿ ಬಿಎಸ್ ವೈಗೆ ಗೌರವ :
ಪ್ರಧಾನಮಂತ್ರಿ ನರೇಂದ್ರಮೋದಿಯವರು ಇದೇ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು ಮತ್ತು ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮಾಡಿದ ಭಾಷಣ ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದೆ. ಪ್ರಕ್ಷಕರು ಮೊಬೈಲ್‌ಗಳ ಬ್ಯಾಟರಿ ದೀಪಗಳನ್ನು ಬೆಳಗಿಸುವ ಮೂಲಕ ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವಿಸುವಂತೆ ಪ್ರಧಾನ ಮಂತ್ರಿಗಳು ಮಾಡಿದ ಮನವಿಗೆ ನೆರೆದಿದ್ದ ಜನರಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಜನರು ಆಗ ತಮ್ಮ ಮೊಬೈಲ್ ಟಾರ್ಚ್ ಬೆಳಕು ಮಾಡಿ ಹಿರಿಯ ನಾಯಕರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.
ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈ ಪ್ರಗತಿಯ ಹಾದಿಯು ರಸ್ತೆಮಾರ್ಗಗಳು, ವಾಯುಮಾರ್ಗಗಳು ಮತ್ತು ಐವೇಗಳ (ಡಿಜಿಟಲ್ ಸಂಪರ್ಕ) ದಾಪುಗಾಲುಗಳಿಂದ ಸುಗಮವಾಗಿದೆ. ಕರ್ನಾಟಕದ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದ ಪ್ರಗತಿಯ ರಥಕ್ಕೆ ಶಕ್ತಿ ತುಂಬುತ್ತಿದೆ. ಹಿಂದಿನ ಕಾಲದ ದೊಡ್ಡ ನಗರ ಕೇಂದ್ರಿತ ಅಭಿವೃದ್ಧಿಗೆ ವಿರುದ್ಧವಾಗಿ ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಹಳ್ಳಿಗಳಿಗೆ ಮತ್ತು 2 ಮತ್ತು 3ನೇ ಸ್ತರದ ನಗರಗಳಿಗೆ ಅಭಿವೃದ್ಧಿಯ ವ್ಯಾಪಕ ಹರಡುವಿಕೆಯನ್ನು ಎತ್ತಿ ತೋರಿಸಿದೆ. “ಶಿವಮೊಗ್ಗದ ಅಭಿವೃದ್ಧಿಯು ಈ ಚಿಂತನೆಯ ಪ್ರಕ್ರಿಯೆಯ ಫಲಿತಾಂಶವಾಗಿದೆ”, ಅವರು ಹೇಳಿದರು.
2 ವರ್ಷಗಳಲ್ಲಿ ಶಿವಮೊಗ್ಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ :
ಇನ್ನೆರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಮಲೆನಾಡಿನ ಹೆಬ್ಬಾಗಿಲಾಗಿರುವ ಶಿವಮೊಗ್ಗದ ವಾಣಿಜ್ಯೋದ್ಯಮ, ವ್ಯಾಪಾರ, ವಹಿವಾಟು, ಕೃಷಿ, ಕೈಗಾರಿಕೆ, ಔದ್ಯೋಗೀಕರಣ ಇವೆಲ್ಲಕ್ಕೂ ಈ ವಿಮಾನ ನಿಲ್ದಾಣ ಹೆಬ್ಬಾಗಿಲಾಗಲಿದೆ. ಇಡೀ ಭಾರತದ ಮೂಲೆ ಮೂಲೆಗೆ ಈ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಏರ್ಪೋರ್ಟ್ ಕುರಿತ ಕಿರುಚಿತ್ರ ಪ್ರದರ್ಶನವಾಯಿತು. ಈ ಕಿರುಚಿತ್ರದಲ್ಲಿ ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ವಿಮಾನಯಾನ ಪ್ರಯಾಣಿಕರು, ಕೇಂದ್ರ ಸರ್ಕಾರ ವಿಮಾನಯಾನಕ್ಕೆ ನೀಡಿದ ಉತ್ತೇಜನ, ಹೊಸ ವಿಮಾನ ನಿಲ್ದಾಣ ಸ್ಥಾಪನೆ, ಪ್ರವಾಸೋದ್ಯಮ ಕುರಿತು ಮಾಹಿತಿಯಿತ್ತು. ಅಲ್ಲದೆ ಶಿವಮೊಗ್ಗ ವಿಮಾನ ನಿಲ್ದಾಣದ ಸೌಲಭ್ಯಗಳು, ಅದರ ವಿಶೇಷತೆಗಳು, ಆರಂಭದಿಂದ ಹಿಡಿದು ಉದ್ಘಾಟನೆಯವರೆಗಿನ ಮಾಹಿತಿಯನ್ನು ನೀಡಲಾಯಿತು.
ಶಿವಮೊಗ್ಗ ಏರ್ ಪೋರ್ಟ್ ವಿಶೇಷತೆಗಳೇನು?
(What Are Specialities In Shivamogga Airport?) :
ರಾಜ್ಯದ 2ನೇ ಅತಿ ದೊಡ್ಡ ಏರ್ ಪೋರ್ಟ್ ಎಂಬ ಹೆಗ್ಗಳಿಕೆ ಪಡೆದ ಶಿವಮೊಗ್ಗ ಏರ್‌ಪೋರ್ಟ್, ಒಟ್ಟು 775 ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣವಾಗಿದೆ. 449.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 3.2 ಕಿ.ಮೀ ರನ್ ವೇ ಹೊಂದಿದ್ದು, ವಿಮಾನ ನಿಲ್ದಾಣವು ಬೋಯಿಂಗ್ 737 ಮತ್ತು ಏರ್‌ಬಸ್ A320 ಮಾದರಿಯ ವಿಮಾನ ಸೇರಿದಂತೆ ಎಲ್ಲಾ ರೀತಿಯ ವಿಮಾನಗಳು ಇಲ್ಲಿ ಇಳಿಯುವ ರೀತಿ ವಿನ್ಯಾಸಗೊಳಿಸಲಾಗಿದೆ ಮತ್ತು ದಟ್ಟಣೆ ಅವಧಿಯಲ್ಲಿ ಗಂಟೆಗೆ ಸುಮಾರು 200 ಪ್ರಯಾಣಿಕರನ್ನು ನಿಭಾಯಿಸಬಲ್ಲದು. 4320 ಚದರಡಿ ವಿಸ್ತಿರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್ ಹಾಗೂ ವಿಮಾನ ನಿಲ್ದಾಣದ ಸುತ್ತ 15,900 ಮೀಟರ್ ಉದ್ದದ ಕಾಂಪೌಂಡ್ ಈ ವಿಮಾನ ನಿಲ್ದಾಣದಲ್ಲಿದೆ.
ಸಚಿವರಾದ ನಾರಾಯಣಗೌಡ, ವಿ.ಸೋಮಣ್ಣ, ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಚಿವ ಈಶ್ವರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶೇಷ ಪೇಟ ತೊಡಿಸಿ ಶಿವಮೊಗ್ಗ ಏರ್ಪೋರ್ಟ್ ಕಲಾಕೃತಿಯನ್ನು ಕಾಣಿಕೆ ನೀಡಿದರು.
ಬೆಳಗಾವಿಯಲ್ಲಿ 2,240 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ :
ಈ ಕಾರ್ಯಕ್ರಮದ ಬಳಿಕ ಬೆಳಗಾವಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ, ನವೀಕೃತ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವಿಕೆ, ಲೊಂಡ-ಬೆಳಗಾವಿ-ಘಟಪ್ರಭಾ ಮಾರ್ಗದ ಡಬ್ಲಿಂಗ್ ಕಾಮಗಾರಿ ಸೇರಿದಂತೆ 2240 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಳಗಾವಿಯ ಹೊರವಲಯದ ಮಾಲಿನಿ ಸಿಟಿ ಮೈದಾನಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದರು.