ಬೆಂಗಳೂರು, ಫೆ.27 www.bengaluruwire.com : ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ‘ಬೆಂಗಳೂರು ವೈರ್’ ಎಕ್ಸ್ ಕ್ಲೂಸಿವ್ ಸಂದರ್ಶನ ಮಾಡಿದ್ದು, ಅವರು ಮುಂಬರುವ ವಿಧಾನಸಭಾ ಚುನಾವಣೆ 2023ರ ಬಗ್ಗೆ ಯಾವೆಲ್ಲಾ ಸಿದ್ಧತೆಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ ಎಂಬುದರ ಬಗ್ಗೆ, ಚುನಾವಣಾ ಅಕ್ರಮ ನಿಯಂತ್ರಣ, ಪಾರದರ್ಶಕ ಚುನಾವಣೆ, ಮತಯಂತ್ರ ನಿರ್ವಹಣೆ, ಮತದಾನ ಕೇಂದ್ರಗಳ ಸೌಕರ್ಯ, ಭದ್ರತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ‘ಬೆಂಗಳೂರು ವೈರ್’ ಜೊತೆ ಮುಕ್ತ ಮಾತುಕತೆ ನಡೆಸಿದ್ದಾರೆ.
• ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಯಾವ ರೀತಿ ಸಜ್ಜಾಗಿದೆ?
ಉತ್ತರ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಬಹುತೇಕ ಅಂತಿಮ ಹಂತ ತಲುಪಲಿದೆ. ವಿದ್ಯುನ್ಮಾನ ಮತ ಯಂತ್ರಗಳ ಶೇಖರಣೆ ಹಾಗೂ ಮತಗಟ್ಟೆಗಳ ಅಂತಿಮ ಪಟ್ಟಿ ತಯಾರಾಗುತ್ತಿದ್ದು ಮತಗಟ್ಟೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಕುರಿತು ಪ್ರಾಥಮಿಕ ಹಂತದ ಪೂರ್ವ ತಯಾರಿಗಾಗಿ ನಿರಂತರವಾಗಿ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
• ಯಾವಾಗ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ?
ಉತ್ತರ: ಚುನಾವಣೆಯನ್ನು ಘೋಷಿಸುವ ಹಾಗೂ ದಿನಾಂಕ ಗೊತ್ತುಪಡಿಸುವ ಅಧಿಕಾರ ಭಾರತ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಕುರಿತು ಅವರು ಘೋಷಿಸುವ ದಿನಾಂಕಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿರುತ್ತದೆ.
• ಚುನಾವಣಾ ಪೂರ್ವ ಹಾಗೂ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ?
ಉತ್ತರ: ಈಗಾಗಲೇ ಚುನಾವಣಾ ಪೂರ್ವ ತಯಾರಿ ಸಂದರ್ಭದಲ್ಲಿ ಮತದಾರರಿಗೆ ಒಡ್ಡುತ್ತಿರುವ ಆಮಿಷಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ಧಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸಂಬಂಧಿಸಿದ ಜಾರಿ ನಿರ್ದೇಶನ ಇಲಾಖೆಗಳಿಗೆ ಸೂಚಿಸಲಾಗಿದ್ದು, ಅವರು ತಮ್ಮ ವ್ಯಾಪ್ತಿಯ ದೂರುಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
• ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ ಪ್ರಕರಣದ ತನಿಖೆ ಯಾವ ರೀತಿ ನಡೆಯುತ್ತಿದೆ?
ಉತ್ತರ: ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಲೋಪಗಳ ಕುರಿತು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ನೀಡಿರುವ ದೂರುಗಳ ಕುರಿತು ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇತ್ತೀಚಿಗೆ ನಡೆದ “ಚಿಲುಮೆ” ಸಂಸ್ಥೆಯ ಲೋಪದ ಕುರಿತ ದೂರಿನ ಬಗ್ಗೆ ಪ್ರಾದೇಶಿಕ ಆಯುಕ್ತರು ತನಿಖೆ ಪೂರ್ಣಗೊಳಿಸಿ ವರದಿ ನೀಡಿದ್ದು ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಹೇಳಿದ್ದಾರೆ. ಈ ಕುರಿತು SVEEP ಹೆಸರಿನಲ್ಲಿ ಮತದಾರರ ಮಾಹಿತಿ ಸಂಗ್ರಹಿಸುವ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
• ಈ ಬಾರಿಯ ಚುನಾವಣೆಗೂ ಹಾಗೂ ಕಳೆದ ಬಾರಿ ಚುನಾವಣೆ ನಡೆಸುತ್ತಿರುವುದಕ್ಕೂ ತಂತ್ರಜ್ಞಾನ ಅಳವಡಿಕೆ ದೃಷ್ಟಿಯಿಂದ ಹೇಗೆ ವಿಭಿನ್ನವಾಗಿದೆ?
ಉತ್ತರ: ಪ್ರಸಕ್ತ ತಂತ್ರಜ್ಞಾನದ ಯುಗದಲ್ಲಿ ಮತದಾನದ ಜಾಗೃತಿ ಕುರಿತು ಹಾಗೂ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕಳೆದ ಬಾರಿ ಬಳಸಲಾಗಿದ್ದ C-Vigial Appನ್ನು ಈ ಬಾರಿ ಸಹ ಬಳಸಲು ನಿರ್ಧರಿಸಲಾಗಿದ್ದು ಇದರಿಂದ ಸಾರ್ವಜನಿಕರು ಭ್ರಷ್ಟಾಚಾರ ಕಂಡುಬಂದಲ್ಲಿ ಛಾಯಾ ಚಿತ್ರ ಅಥವಾ ವಿಡಿಯೋ ಚಿತ್ರೀಕರಿಸುವ ಮೂಲಕ ನೇರವಾಗಿ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗಾಗಿ ತಮ್ಮ ಮತಗಟ್ಟೆಯ ಹೆಸರು, ಮಾಹಿತಿ, ವಿಳಾಸ ಸೇರಿದಂತೆ ಇತರೆ ಮಾಹಿತಿಯನ್ನು ಒದಗಿಸಲು ಹೊಸ “ಮತದಾರ” ಆಂಡ್ರಾಯ್ಡ್ ಮೊಬೈಲ್ Appನ್ನು ಸಿದ್ಧಪಡಿಸಲಾಗಿರುತ್ತದೆ.
• ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಪ್ರಗತಿ ರಾಜ್ಯದಲ್ಲಿ ಹೇಗಾಗಿದೆ? ಮತದಾರರಿಂದ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ?
ಉತ್ತರ: ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಪ್ರಗತಿ ಉತ್ತಮವಾಗಿದ್ದು ರಾಜ್ಯದಲ್ಲಿ ಈಗಾಗಲೇ ಶೇ.70 ಕ್ಕಿಂತ ಹೆಚ್ಚಿನ ಮತದಾರರು ತಮ್ಮ ಆಧಾರ್ ನೊಂದಿಗೆ ಚುನಾವಣಾ ಗುರುತಿನ ಚೀಟಿಯನ್ನು ಜೋಡಣೆ ಮಾಡಿರುತ್ತಾರೆ. ಇದರಿಂದ ಒಬ್ಬರೇ ಎರಡು ಕಡೆಗಳಲ್ಲಿ ಹೆಸರನ್ನು ಹೊಂದಿರುವುದನ್ನು ತಡೆಯಬಹುದಾಗಿರುತ್ತದೆ. ಮತದಾರರಿಂದ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
• ರಾಜ್ಯದಲ್ಲಿ ಒಟ್ಟು ಎಷ್ಟು ಮತಗಟ್ಟೆಗಳಿವೆ? ಆ ಮತಗಟ್ಟೆ ಕೇಂದ್ರಗಳ ಪರಿಶೀಲನಾ ಕಾರ್ಯ ಯಾವ ರೀತಿ ನಡೆದಿದೆ? ಅಲ್ಲಿ ಯಾವ ಸೌಲಭ್ಯಗಳು ಮತದಾರರಿಗೆ ಲಭ್ಯವಾಗಲಿದೆ?
ಉತ್ತರ: ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳಿದ್ದು ಮತದಾನದ ದಿನದಂದು ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ, ದಿವ್ಯಾಂಗ ಮತ್ತು ಹಿರಿಯ ಮತದಾರರಿಗಾಗಿ ವಾಹನ ವ್ಯವಸ್ಥೆ, ನಿರೀಕ್ಷಣಾ ಕೊಠಡಿ ಸೇರಿದಂತೆ ಇತರೆ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಗೆ ಆಹ್ವಾನಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
• ಈ ಬಾರಿ ಯಾವ ರೀತಿಯ ಮತಯಂತ್ರಗಳನ್ನು ಬಳಸಲಾಗುತ್ತಿದೆ? ಅವುಗಳ ಕಾರ್ಯ ನಿರ್ವಹಣೆ, ಪರಿಶೀಲನಾ ಕಾರ್ಯ ಹೇಗೆ ನಡೆಯುತ್ತಿದೆ?
ಉತ್ತರ: ಈ ಬಾರಿಯ ಚುನಾವಣೆಯಲ್ಲಿ M3 ಹೊಸ ವಿದ್ಯುನ್ಮಾನ ಯಂತ್ರಗಳನ್ನು ಬಳಸಲು ಉದ್ದೇಶಿಸಲಾಗಿದ್ದು ಹೈದ್ರಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್(ECIL) ಈ ಮತಯಂತ್ರಗಳನ್ನು ತಯಾರಿಸಿದ್ದು ಈಗಾಗಲೇ 27 ಜಿಲ್ಲೆಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮೊದಲ ಹಂತದ ಪರಿಶೀಲನೆ ಪೂರ್ಣಗೊಂಡಿದ್ದು ಇನ್ನುಳಿದ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಚಾಲನೆಯಲ್ಲಿದೆ.
• ಪಾರದರ್ಶಕ ಹಾಗೂ ನ್ಯಾಯಯುತ ಚುನಾವಣೆಗೆ ಭದ್ರತಾ ಕಾರ್ಯ ಹೇಗೆ ಕೈಗೊಳ್ಳಲಾಗುತ್ತಿದೆ? ಕೇಂದ್ರ ಸೇನಾಪಡೆಗಳ ನಿಯೋಜನೆ ಯಾವ ಹಂತದಲ್ಲಾಗುತ್ತದೆ?
ಉತ್ತರ: ರಾಜ್ಯದಲ್ಲಿ ನಡೆಯುವ ಪ್ರತಿ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಭದ್ರತೆಗಾಗಿ ಕೇಂದ್ರಿಯ ಭದ್ರತಾ ಪಡೆಗಳ ಸೇವೆಯನ್ನು ಪಡೆಯುವುದು ಅವಶ್ಯಕವಾಗಿರುತ್ತದೆ. ಈ ಬಾರಿ ಸಹ ಬೇಡಿಕೆ ಸಲ್ಲಿಸಲಾಗಿದ್ದು ಕೇಂದ್ರ ಗೃಹ ಸಚಿವಾಲಯ ಚುನಾವಣೆ ಅವಧಿಯಲ್ಲಿ ಎಷ್ಟು ಪಡೆಗಳನ್ನು ನಿಯೋಜಿಸಬೇಕು ಎಂಬುದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ.
• ಇತರ ಪಕ್ಷ ಅಥವಾ ವ್ಯಕ್ತಿಗಳ ಪರ ಕೆಲಸ ಮಾಡುವ ಅಧಿಕಾರಿಗಳನ್ನು ಹೇಗೆ ನಿಯಂತ್ರಿಸಲಾಗುತ್ತೆ? ಒಂದು ವೇಳೆ ಆರೋಪ ಬಂದಲ್ಲಿ ಅವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ?
ಉತ್ತರ: ಈಗಾಗಲೇ ಸ್ವಂತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಒಂದೇ ಕಡೆ ಸೇವೆ ಸಲ್ಲಿಸಿರುವ ಅಧಿಕಾರಗಳನ್ನು ಗುರುತಿಸಿ ವರ್ಗಾವಣೆಗೆ ಕ್ರಮ ಕೈಕೊಳ್ಳಲಾಗಿದೆ. ಸರ್ಕಾರಿ ಅಧಿಕಾರಿ, ಸಿಬ್ಬಂದಿ ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಅಥವಾ ಪಕ್ಷಪಾತದಿಂದ ಕೂಡಿದ ದೂರುಗಳು ಬಂದಲ್ಲಿ ಸರ್ಕಾರ ಹಂತದಲ್ಲಿ ಪರಿಶೀಲಿಸಿ ಕ್ರಮಕೈಕೊಳ್ಳಲಾಗುವುದು.
• ಮತ ಚಲಾವಣೆ ಪ್ರಮಾಣ ಹೆಚ್ಚಾಗಲು ರಾಜ್ಯ ಚುನಾವಣಾ ಆಯೋಗ ಒಟ್ಟಾರೆ ಯಾವ ಕ್ರಮ ಕೈಗೊಂಡಿದೆ? ಕಡಿಮೆ ಮತದಾನವಾಗುವ ಕಡೆ ಚುನಾವಣಾ ಆಯೋಗ ವಿಶೇಷ ಗಮನ ಹರಿಸಿದೆಯಾ?
ಉತ್ತರ: ರಾಜ್ಯದಲ್ಲಿ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಮತದಾನದ ವಿಧಾನಸಭಾ ಕ್ಷೇತ್ರವಾರು ಮತದಾನವನ್ನು ಪರಿಶೀಲಿಸಲಾಗಿದ್ದು ಕಡಿಮೆ ಮತದಾನವಾಗಿರುವ ವಿಧಾನಸಭಾ ಕ್ಷೇತ್ರದೊಳಗೆ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಕಾರಣಗಳನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಭಾಗವಹಿಸುವಂತೆ ಕ್ರಮಕೈಕೊಳ್ಳಲಾಗುತ್ತದೆ. ಅದಕ್ಕಾಗಿ ಮತಗಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿ, ಮತದಾರರ ಪಟ್ಟಿಯ ಬಗ್ಗೆ ಜಾಗೃತಿ, ಮತದಾನದ ಒಂದು ವಾರದ ಮುಂಚಿತವಾಗಿ ವೋಟರ್ ಸ್ಲಿಪ್‌ಗಳ ವಿತರಣೆಗಾಗಿ ಕ್ರಮ ಕೈಕೊಳ್ಳಲಾಗಿದೆ.
• ಹೊಸ ಮತದಾರರು ಈ ಬಾರಿ ಎಷ್ಟಿದ್ದಾರೆ? ಮತದಾನಕ್ಕೆ ಅವರನ್ನು ಸೆಳೆಯಲು ಆಯೋಗ ಕ್ರಮವಹಿಸಿದೆಯಾ?
ಉತ್ತರ: ಈವರೆಗೆ ರಾಜ್ಯದಲ್ಲಿ ಹೊಸದಾಗಿ 18 ರಿಂದ 19 ವರ್ಷದೊಳಗಿನ ಏಳು (7) ಲಕ್ಷ ಯುವ ಮತದಾರರು ಇಲ್ಲಿಯವರೆಗೆ ನೊಂದಾಯಿಸಿಕೊಳ್ಳಲಾಗಿದ್ದು ಇನ್ನೂ 40,000ಕ್ಕಿಂತ ಹೆಚ್ಚಿನ ಅರ್ಜಿಗಳ ವಿಲೇವಾರಿ ಬಾಕಿ ಇದ್ದು ಹೊಸ ಮತದಾರರು ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಭಾರತ ಚುನಾವಣಾ ಆಯೋಗವು ಇತ್ತೀಚಿಗೆ ವರ್ಷಕ್ಕೆ ನಾಲ್ಕು ಬಾರಿ ಹಾಗೂ 17 ವರ್ಷ ತುಂಬಿದವರು ಸಹ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ. ಇದಕ್ಕಾಗಿ Voter Helpline App ಸಿದ್ಧಪಡಿಸಲಾಗಿದ್ದು Online ಮೂಲಕವೇ ಸಾರ್ವಜನಿಕರು ತಮ್ಮ ಹೆಸರು ಸೇರಿಸುವಿಕೆ, ವರ್ಗಾಯಿಸುವಿಕೆ ಅಥವಾ ವಿಳಾಸ ಬದಲಾವಣೆ ಮಾಡಬಹುದಾಗಿದೆ.