ಬೆಂಗಳೂರು, ಫೆ.26 www.bengaluruwire.com : ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. (MSIL) ಸಂಸ್ಥೆಯು ರಾಜ್ಯದಲ್ಲಿ ನದಿ ಮರಳು ಕೊರತೆ ನೀಗಿಸಲು ಮಾರುಕಟ್ಟೆಯ ಸ್ಥಿತಿಗತಿ ಮತ್ತು ಮಾರಾಟದ ಸಾಧ್ಯತೆಯನ್ನು ಅಧ್ಯಯನ ಮಾಡದೆ ಮರಳು ಆಮದು ಮಾಡಿಕೊಂಡಿತ್ತು. ಇದರಿಂದ ನಾಲ್ಕು ವರ್ಷಗಳವರೆಗೆ 21.14 ಕೋಟಿ ಮೌಲ್ಯದ ಸರಕು ನಿಷ್ಕ್ರಿಯವಾಗಿ ಉಳಿದಿತ್ತು. ಇದರಿಂದ 10.57 ಕೋಟಿ ರೂ. ಹೂಡಿಕೆ ಅನುತ್ಪಾದಕವಾಗಿದೆ ಎಂದು 2021ರ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿ ಬಹಿರಂಗಪಡಿಸಿದೆ.
ನದಿ ಮರಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಮತ್ತು ಅದನ್ನು ಮಾರಾಟ ಮಾಡುವಲ್ಲಿ ಸಾಕಷ್ಟು ನಿಯಮಗಳನ್ನು ಎಂಎಸ್ಐಎಲ್ ಸಂಸ್ಥೆ ಉಲ್ಲಂಘಿಸಿದೆ. ಇದರಿಂದ ಕಂಪನಿಯು ಮೊದಲ ಮತ್ತು ಎರಡನೇ ಸರಕುಗಳಲ್ಲಿ ಆಮದು ಮಾಡಿಕೊಂಡ ಒಟ್ಟು 1,03,872.77 ಮೆ.ಟನ್ ಮರಳಿನಲ್ಲಿ 14,759 ಮೆ.ಟನ್ ಗಳನ್ನು ಮಾತ್ರ ಮಾರಾಟ ಮಾಡಿತು. ಹಾಗೂ ಇದರಿಂದ ಸಂಸ್ಥೆಯು ಕೇವಲ ₹ 3.95 ಕೋಟಿ ಗಳಿಸಿತು. ಕೃಷ್ಣಪಟ್ಟಣಂ ಬಂದರಿನಲ್ಲಿ 89,113.77 ಮೆಟ್ರಿಕ್ ಟನ್ ಗಳಷ್ಟು ಮರಳು ಏಪ್ರಿಲ್ 2022ರವರೆಗೆ ಮಾರಾಟವಾಗದೆ ಉಳಿದಿತ್ತು.
ಮಾರ್ಚ್ 2021 ರ ವೇಳೆಗೆ ಕಂಪನಿಯು 1.90 ಕೋಟಿ ರೂ.ಗಳಷ್ಟು ಪರೋಕ್ಷ ವೆಚ್ಚಗಳನ್ನು ಮಾಡಿತ್ತು. ಅಲ್ಲದೆ ಹಲವು ವರ್ಷಗಳಿಂದ ಮರಳು ಮಾರಾಟ ಮಾಡದೆ ಸಂಗ್ರಹಿಸಿಟ್ಟಿದ್ದರಿಂದ ಸರಕಿನ ಮೌಲ್ಯ ಕುಸಿದು 5 ಕೋಟಿ ರೂ. ನಷ್ಟವಾಗಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ.
ರಾಜ್ಯದ ನಿರ್ಮಾಣ ಉದ್ಯಮದಲ್ಲಿ ಬಳಸಲಾಗುವ ನೈಸರ್ಗಿಕ ನದಿ ಮರಳಿನ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ಗಣಿ ಇಲಾಖೆ ಮತ್ತು ಭೂವಿಜ್ಞಾನವು ಇತರ ಆದ್ಯತೆಯ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುವ ಮೂಲಕ ಪರ್ಯಾಯ ಮೂಲಗಳನ್ನು ಅನ್ವೇಷಿಸಲು ಮತ್ತು ರಾಜ್ಯದಾದ್ಯಂತ ಸಗಟು ಅಥವಾ ಚಿಲ್ಲರೆ ಮಾರಾಟಕ್ಕೆ ಅನುಕೂಲವಾಗುವಂತೆ ಎಂಎಸ್ಐಎಲ್ ಕಂಪನಿಗೆ ಸೂಚಿಸಿತ್ತು. ಮಂಡಳಿಯು ಚರ್ಚೆಯ ನಂತರ, ಜಾಗತಿಕ ಟೆಂಡರ್ಗಳನ್ನು ಕರೆದು ಆದ್ಯತೆಯ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳಲು ಮತ್ತು ‘MSIL’ ಬ್ರ್ಯಾಂಡ್ನ ಅಡಿಯಲ್ಲಿ ವ್ಯಾಪಾರ ಮಾಡಲು ಮೇ 2017ರಲ್ಲಿ ಅನುಮೋದನೆ ನೀಡಿತು.
ಅದರಂತೆ, ಕಂಪನಿಯು ಮೇ 2017ರಲ್ಲಿ ಐದು ವರ್ಷಗಳ ಅವಧಿಗೆ ತಿಂಗಳಿಗೆ 3 ಲಕ್ಷ ಮೆಟ್ರಿಕ್ ಟನ್ (MT) ನೈಸರ್ಗಿಕ ನದಿ ಮರಳನ್ನು ಪೂರೈಸಲು ಜಾಗತಿಕ ಟೆಂಡರ್ಗಳನ್ನು ನಡೆಸಿತು. ಆರಂಭಿಕ ರವಾನೆಯ ವಿತರಣೆಯನ್ನು 50,000 ಮೆ.ಟನ್ ಗಳ ಪ್ರಮಾಣದಲ್ಲಿ 10 ತಿಂಗಳವರೆಗೆ 10 ಸಾಗಣೆಗಳಲ್ಲಿ ಮಾಡಬೇಕಾಗಿತ್ತು. ಟೆಂಡರ್ನ ಅಂದಾಜು ಮೌಲ್ಯವನ್ನು ಆರಂಭಿಕ ರವಾನೆಗೆ 150 ಕೋಟಿ ರೂ. ಎಂದು ಸೂಚಿಸಲಾಗಿತ್ತು. (ಅಂದರೆ ಪ್ರತಿ ಮೆ.ಟನ್ ಗೆ 23,000 ರೂ.).
150 ಕೋಟಿ ರೂ. ಟೆಂಡರ್ ಮೊತ್ತದ ಆಧಾರ ಸರಿಯಾಗಿಟ್ಟಿಲ್ಲ :
ಎಂಎಸ್ಐಎಲ್ ಮೇ 2017ರಲ್ಲಿ ಜಾಗತಿಕ ಟೆಂಡರ್ ಕರೆದಾಗ ಕೇವಲ ಏಕೈಕ ಬಿಡ್ ದಾರರು ಬಂದಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (KTPP) ಕಾಯಿದೆ, 1999 ರ ಅಡಿಯಲ್ಲಿ ಹೊರಡಿಸಲಾದ 3 ಡಿಸೆಂಬರ್ 2002 ರ ಸುತ್ತೋಲೆಯ ಪ್ರಕಾರ ಮೊದಲ ಟೆಂಡರ್ ತಿರಸ್ಕರಿಸಿ ಮರು ಟೆಂಡರ್ ಕರೆಯಬೇಕಿತ್ತು. ಆದರೆ ಆ ಕಾಯ್ದೆಯನ್ನು ಉಲ್ಲಂಘಿಸಿ ಪೋಸಿಡಾನ್ ಎಫ್ ಜೆಡ್ ಇ ಎಂಬ ಅರ್ಹ ಬಿಡ್ ದಾರರಿಗೆ ನೀಡಿತ್ತು. ಇದಲ್ಲದೆ, ಟೆಂಡರ್ಗೆ ಹಾಕಲಾದ 150 ಕೋಟಿ ಅಂದಾಜು ಮೊತ್ತದ ಆಧಾರವನ್ನು ದಾಖಲೆಯಲ್ಲಿ ಇರಿಸಲಾಗಿಲ್ಲ ಎಂಬುದನ್ನು ಮಹಾಲೆಕ್ಕನಿಯಂತ್ರಕರು ಬೊಟ್ಟು ಮಾಡಿ ತೋರಿಸಿದ್ದಾರೆ.
ಹಲವು ತಪ್ಪುಗಳಿಂದ ಮರಳು ದಾಸ್ತಾನು ಮಾರಾಟವಾಗಿಲ್ಲ :
ಕಂಪನಿಯು ಜುಲೈ 2017 ರಲ್ಲಿ ಮಾಡಿದ ಖರೀದಿ ಆದೇಶದ ವಿರುದ್ಧ ಅಕ್ಟೋಬರ್ 2017 ರಲ್ಲಿ 54,190 ಮೆ.ಟನ್ ಮರಳಿನ ಮೊದಲ ರವಾನೆಯನ್ನು ಸ್ವೀಕರಿಸಿತ್ತು ಮತ್ತು ಜನವರಿ 2018 ರಲ್ಲಿ ಕೇವಲ 935 ಮೆ.ಟನ್ ಗಳನ್ನು ಮಾತ್ರ ಮಾರಾಟ ಮಾಡಿತ್ತು. ಉಳಿದ ಮರಳು ಮಾರಾಟವಾಗದಿದ್ದರೂ, ಎಂಎಸ್ಎಎಲ್ಐ ಕಂಪನಿಯು ಡಿಸೆಂಬರ್ 2017 ರಲ್ಲಿ ಎರಡನೇ ಖರೀದಿ ಆದೇಶವನ್ನು ನೀಡಿತು. ಇದರಿಂದಾಗಿ ಜನವರಿ 2018 ರಲ್ಲಿ 49,682.77 ಮೆ.ಟನ್ ಗಳಷ್ಟು ಮರಳನ್ನು ಪಡೆದಿತ್ತು. ಎರಡನೇ ಖರೀದಿ ಆದೇಶವನ್ನು ನೀಡುವ ನಿರ್ಧಾರವು ವಿವೇಕಯುತವಾಗಿಲ್ಲ ಎಂದು ಆಡಿಟ್ ಗಮನಿಸಿದೆ. ಏಕೆಂದರೆ ಮೊದಲು ರವಾನೆಯಾಗಿದ್ದ 54 ಸಾವಿರ ಮೆ.ಟನ್ ಮರಳಿನಲ್ಲಿ ಕೇವಲ 935 ಮೆ.ಟನ್ ಮರಳಷ್ಟೇ ಮಾರಾಟವಾಗಿತ್ತು. ಹೀಗಿದ್ದರೂ, ಎರಡನೇ ಖರೀದಿ ಆದೇಶ ನೀಡಿದ್ದರಿಂದ 10.96 ಕೋಟಿ ರೂ. ಮೌಲ್ಯದ 49,682.77 ಮೆಟ್ರಿಕ್ ಟನ್ ಸ್ಟಾಕ್ ನಿಷ್ಕ್ರಿಯವಾಗಿ ಉಳಿಯುವಂತಾಯಿತು.
ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಆಧರಿಸಿ ಖರೀದಿ ಆದೇಶವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಲು ಗುತ್ತಿಗೆ ಷರತ್ತಿನಲ್ಲಿ ಅವಕಾಶವಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಎರಡನೇ ಖರೀದಿ ಆದೇಶದಿಂದ ಒಟ್ಟಾರೆ 89,113 ಮೆಟ್ರಿಕ್ ಟನ್ ನಷ್ಟು ನೈಸರ್ಗಿಕ ಮರಳು ಕೃಷ್ಣಪಟ್ಟಣಂ ಬಂದರಿನಲ್ಲಿ ಏಪ್ರಿಲ್ 2022ರ ವರೆಗೆ ಮಾರಾಟವಾಗದೇ ಉಳಿಯುವಂತಾಯಿತು ಎಂದು ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಸಾಗಣೆ –ಮಾರಾಟ ಸಾಮರ್ಥ್ಯ ಅರಿಯದೇ ಖಾಸಗಿ ಸಂಸ್ಥೆಗೆ ಗುತ್ತಿಗೆ :
ಒಂದು ಕಡೆ ಬೇಡಿಕೆ ಆಧರಿಸಿ, ಮಾರುಕಟ್ಟೆ ವಿಶ್ಲೇಷಣೆ ನಡೆಸದೆ ಎಂಎಸ್ಐಎಲ್ ನೈಸರ್ಗಿಕ ನದಿ ಮರಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದೂ ಅಲ್ಲದೆ ಎಂಎಸ್ಐಎಲ್ ಖರೀದಿಸಿಟ್ಟಿದ್ದ ಈ ಮರಳನ್ನು ತನ್ನ ಗ್ರಾಹಕರಿಗೆ ಸಾಗಿಸಲು ಮತ್ತು ಮಾರಾಟ ಮಾಡಲು ಸಾಮರ್ಥ್ಯವಿದೆಯೇ ಎಂಬುದನ್ನು ಪರಿಶೀಲಿಸದೆ ಎಂಎಸ್ಐಎಲ್ ಓಶನ್ ಏಜನ್ಸೀಸ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಈ ಸಂಸ್ಥೆಗೆ ಮಾರಾಟದ ಗುರಿಯನ್ನು ಕಂಪನಿಯು ನೀಡಿರಲಿಲ್ಲ. ಹೀಗಾಗಿ ಅಕ್ಟೋಬರ್ 2017ರಿಂದ 2021ರ ಅಕ್ಟೋಬರ್ ತನಕ ಆಮದು ಮಾಡಿಕೊಂಡ ಮರಳಿನ ಪೈಕಿ ಕೇವಲ 14,759 ಮೆಟ್ರಿಕ್ ಟನ್ (ಶೇ.14) ನಷ್ಟು ಮರಳನ್ನು ಮಾರಾಟ ಮಾಡಲು ಸಾಧ್ಯವಾಯಿತು ಎಂಬುದನ್ನು ಸಿಎಜಿ ವರದಿ ಎತ್ತಿ ತೋರಿಸಿದೆ.
30 ಏಪ್ರಿಲ್ 2022ರವರೆಗೂ ಓಷನ್ ಏಜನ್ಸೀಸ್ ಕೃಷ್ಣಪಟ್ಟಣಂ ಬಂದರಿನಲ್ಲಿದ್ದ 21.14 ಕೋಟಿ ರೂ. ಮೌಲ್ಯದ 89,113 ಮೆಟ್ರಿಕ್ ಟನ್ ಮರಳಿನ ಸಂಗ್ರಹವನ್ನು ರವಾನೆ ಮಾಡುವಲ್ಲಿ ವಿಫಲವಾದರೂ ಅವರ ವಿರುದ್ಧ ಎಂಎಲ್ಐಎಲ್ ಸಂಸ್ಥೆಯು ಯಾವುದೇ ಕಾನೂನು ಕ್ರಮ ಕೈಗೊಂಡಿರಲಿಲ್ಲ. ಮರಳು ನಾಲ್ಕೂವರೆ ವರ್ಷ ಮಾರಾಟವಾಗದೇ ಉಳಿದಿದ್ದರಿಂದ ಸರಕಿನ ದಾಸ್ತಾನು ಮೌಲ್ಯ 5 ಕೋಟಿ ರೂ.ನಷ್ಟು ಕುಸಿಯುವಂತಾಯಿತು ಎಂದು ಮಹಾಲೆಕ್ಕಪರಿಶೋಧಕರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಉದ್ದೇಶವೇ ವಿಫಲ :
ಒಟ್ಟಾರೆ ಎಂಎಸ್ಐಎಲ್ ಜುಲೈ 2017ರಿಂದ ಡಿಸೆಂಬರ್ ಅವಧಿಯಲ್ಲಿ ಎರಡು ಬಾರಿ ಖರೀದಿ ಆದೇಶ ನೀಡಿ ಪೂರೈಕೆದಾರರಿಂದ 1,03,872 ಮೆಟ್ರಿಕ್ ಟನ್ ನದಿ ಮರಳು ಆಮದು ಮಾಡಿಕೊಂಡಿದ್ದು, ಕೇವಲ 15,694 ಮೆಟ್ರಿಕ್ ಟನ್ ಮರಳನ್ನಷ್ಟೇ ಮಾರಾಟ ಮಾಡಲು ಶಕ್ತವಾಯಿತು ಎನ್ನುವುದಾದರೆ ರಾಜ್ಯ ಸರ್ಕಾರ ರಾಜ್ಯದಲ್ಲಿನ ನದಿ ತೀರ ಸಂರಕ್ಷಣೆ ಹಾಗೂ ಅಕ್ರಮ ಮರಳುಗಾರಿಕೆ ನಿಯಂತ್ರಿಸಲು ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳುವ ಉದ್ದೇಶ ವಿಫಲವಾಗಿರುವುದು ಸಿಎಜಿ ವರದಿಯಿಂದ ತಿಳಿದುಬಂದಿದೆ.
ಮಾರಾಟವಾಗದೆ ವ್ಯರ್ಥವಾಗಿ ಕೃಷ್ಣಪಟ್ಟಣಂ ಬಂದರಿನಲ್ಲಿ ಉಳಿದ ಮರಳನ್ನು ಈಗಲಾದರು ಎಂಎಸ್ಐಎಲ್ ಕಂಪನಿಯು, ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಸರ್ಕಾರಿ ಇಲಾಖೆಗಳ ಕಾಮಗಾರಿಗಳಿಗೆ ಈ ಮರಳನ್ನು ಬಳಸಿಕೊಂಡು ದಾಸ್ತಾನು ಖಾಲಿ ಮಾಡಲು ಸಿಎಜಿ ಶಿಫಾರಸ್ಸು ಮಾಡಿದೆ. ಅಲ್ಲದೆ ಗುತ್ತಿಗೆ ಷರತ್ತಿನಲ್ಲಿರುವಂತೆ ಮರಳು ಪೂರೈಕೆ ಮತ್ತು ಮಾರಾಟ ಮಾಡುವ ಏಜೆಂಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಜಿ ತನ್ನ ವರದಿಯಲ್ಲಿ ಸೂಚಿಸಿದೆ.