ಬೆಂಗಳೂರು, ಫೆ.25 www.bengaluruwire.com : ಅಕ್ರಮವಾಗಿ ಆನೆದಂತದಿಂದ ತಯಾರಿಸಿದ ಕಲಾಕೃತಿಗಳು, ಚಿರತೆಯ ಉಗುರುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿಐಡಿ ಅರಣ್ಯ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಲಕ್ಷಾಂತರ ಮೂಲದ ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು – ಹಾಸನ ಹೆದ್ದಾರಿಯ ಮಾಗಡಿ ತಾಲ್ಲೂಕು ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು, ಫೆ.25ರಂದು ಅರಸೀಕೆರೆ ತಾಲ್ಲೂಕಿನ ಆರೋಪಿ ನವೀನ್ ಕುಮಾರ್ ಅಕ್ರಮವಾಗಿ ಆನೆ ದಂತದಿಂದ ತಯಾರಿಸಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಆನೆ ದಂತದಿಂದ ತಯಾರಿಸಿದ 8 ಬ್ರಾಸ್ಲೆಟ್, ಒಂದು ಜ್ಯುವೆಲ್ಲರಿ ಬಾಕ್ಸ್, ಎರಡು ವಾಕಿಂಗ್ ಸ್ಟಿಕ್, ರೋಸ್ವುಡ್ನಿಂದ ತಯಾರಿಸಿದ ಒಂದು ವಾಕಿಂಗ್ ಸ್ಟಿಕ್ ಹಾಗೂ ಎರಡು ಚಿರತೆ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಐಡಿ ಮತ್ತು ಅರಣ್ಯ ಘಟಕದ ಎಡಿಜಿಪಿ ಕೆ.ವಿ.ಶರತ್ ಚಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರಿ ದಳದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಶೆಡ್ಯೂಲ್-1 ರಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.