ಬೆಂಗಳೂರು. ಫೆ.24 www.bengaluruwire.com : ಪ್ರಜಾ ನ್ಯಾಯವೇದಿಕೆ ಹಾಗೂ ವಿವಿಧ ಸಂಘಟನೆಗಳು (ವಿವಿಧ ಸಂಘಟನೆಗಳ ಸಹಭಾಗಿತ್ವ) ದ ನಿಯೋಗ ರಾಜ್ಯದಲ್ಲಿ ಗೌರವಾನ್ವಿತ ಸ್ಥಾನಗಳಲ್ಲಿ ಒಂದಾದ ಲೋಕಾಯುಕ್ತ ಹುದ್ದೆಯಲ್ಲಿರುವ ನ್ಯಾಯಮೂರ್ತಿ ಬಿಎಸ್ ಪಾಟೀಲ್ ರವರನ್ನು ಭೇಟಿಯಾಗಿ ರಾಜೀನಾಮೆಗೆ ಒತ್ತಾಯಿಸಿವೆ.
ಬುಧವಾರ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಜಾ ನ್ಯಾಯವೇದಿಕೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಲೋಕಾಯುಕ್ತರು ಭೇಟಿಯಾದರು. “ಈ ಸಂದರ್ಭದಲ್ಲಿ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಆ ಸ್ಥಾನದಿಂದ ಕೆಳಗೆ ಇಳಿಯಬೇಕೆಂಬ ಹಕ್ಕುಒತ್ತಾಯಕ್ಕೆ ಸ್ವಲ್ಪ ವಿಚಲಿತರಾದ ಬಿಎಸ್ ಪಾಟೀಲರು, ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಬಂದ ಹಲವಾರು ಆರೋಪಗಳನ್ನು ಅಲ್ಲಗೆಳೆದರು ಎಂದು ಪ್ರಜಾ ನ್ಯಾಯವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
, “ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ದಲ್ಲಿರುವ ಧ್ವನಿ ನನ್ನ ಪತ್ನಿ ಶೋಭಾ ಪಾಟೀಲ್ ರವರದ್ದು ಅಲ್ಲ, ನನ್ನ ಮಗ ಸೂರಜ್ ಪಾಟೀಲರದ್ದು ಅಲ್ಲ, ಇದೊಂದು ವ್ಯವಸ್ಥಿತ ಸಂಚು ಮತ್ತು ಪ್ರೊಡಕ್ಷನ್ ಹೌಸಿನಿಂದ ತಯಾರಾದ ಆಡಿಯೋ” ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಹೇಳಿದ್ದಾರೆ. ಅಲ್ಲದೆ ಆ ಆಡಿಯೋವನ್ನು ಹರಿಬಿಟ್ಟವರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದರು” ಎಂದು ಪ್ರಜಾ ನ್ಯಾಯವೇದಿಕೆ ಹೇಳಿದೆ.
ಸಾಮಾಜಿಕ ಹೋರಾಟಗಾರರ ನಿಯೋಗವು, “ತಮ್ಮ ಮೇಲೆ ಮತ್ತು ತಮ್ಮ ಕುಟುಂಬದ ಮೇಲೆ ಬಂದ ಗುರುತರ ಆರೋಪದಿಂದ ಮುಕ್ತರಾಗುವವರೆಗೆ ತಾವು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಳಗೆ ಇಳಿಯಬೇಕು” ಎಂದು ಆಗ್ರಹಿಸಿದರು. “ಈ ಹಿಂದೆ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಭಾಸ್ಕರ್ ರಾವ್ ಮತ್ತು ಅವರ ಕುಟುಂಬದವರ ಭ್ರಷ್ಟಾಚಾರವನ್ನು ನೆನಪಿಗೆ ತಂದು ಅವರನ್ನು ಕೆಳಗಿಳಿಸುವ ಹೋರಾಟ ನಾವೇ ಮಾಡಿದ್ದೇವೆ. ನೀವು ಅದಕ್ಕಿಂತ ಮೊದಲೇ ರಾಜೀನಾಮೆ ಕೊಟ್ಟು ಹೋಗಿ. ಇದೇ ರೀತಿ ಈ ಹಿಂದಿನ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಮೇಲೆ ಆರೋಪಗಳು ಬಂದಾಗ ಅವರು ರಾಜೀನಾಮೆ ಕೊಟ್ಟು ಕೆಳಗಿಳಿದಿದ್ದರು” ಎಂದು ನಿಯೋಗವು ನ್ಯಾಯಮೂರ್ತಿ ಬಿ.ಎಸ್.ಪಾಟೀಲರಿಗೆ ಮನವರಿಕೆ ಮಾಡಿಕೊಟ್ಟಿತು.
“ನಾನು ಹಗ್ಗ ತೆಗೆದುಕೊಂಡು ಹೋಗಬೇಕಾ?” :
ಯಾವುದಕ್ಕೂ ಜಗ್ಗದ ಹೋರಾಟಗಾರರು ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲೇಬೇಕೆಂಬ ಹಕ್ಕು ಅನ್ನು ಅವರ ಮುಂದೆ ಇಟ್ಟಿದ್ದರು. ಅದಕ್ಕೆ ಸ್ಪಂದಿಸಿದ ಬಿಎಸ್ ಪಾಟೀಲ್ ಅವರು “ಎಲ್ಲರ ಮೇಲೂ ಆರೋಪಗಳು ಬರುತ್ತವೆ ಈ ರೀತಿ ಆರೋಪ ಮಾಡುತ್ತಾ ಹೋದರೆ ಈ ಕುರ್ಚಿಯಲ್ಲಿ ಯಾರು ಉಳಿಯುವುದಿಲ್ಲ. ಆರೋಪ ಬಂದಿದೆ ಎಂದ ಮಾತ್ರಕ್ಕೆ ನಾನು ಹಗ್ಗ ತೆಗೆದುಕೊಂಡು ಹೋಗಬೇಕಾ?” ಎಂದು ಮರು ಪ್ರಶ್ನೆ ಹಾಕಿದ ಸಂದರ್ಭದಲ್ಲಿ, ಸಾಮಾಜಿಕ ಹೋರಾಟಗಾರರು ಒಂದು ಕ್ಷಣ ಚಕಿತರಾದ್ದರು.
ಬೇರೆ ಬೇರೆ ವಿಷಯಗಳನ್ನು ಚರ್ಚಿಸುವ ಮೂಲಕ ವಿಷಯಾಂತರ ಮಾಡಲು ಪ್ರಯತ್ನಿಸಿದ ಬಿಎಸ್ ಪಾಟೀಲ್ ಅವರಿಗೆ ಪುನಃ ಪುನಃ ತಮ್ಮ ನೈತಿಕತೆ ಮತ್ತು ತಮ್ಮ ಕುಟುಂಬದ ಮೇಲೆ ಬಂದ ಆರೋಪವನ್ನು ಹೋರಾಟಗಾರರು ಪ್ರಶ್ನಿಸುತ್ತಲೇ ಇದ್ದರು.
ಲೋಕಾಯುಕ್ತ ಕಚೇರಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದನ್ನು ಪ್ರಶ್ನಿಸಿದ ಹೋರಾಟಗಾರರು ನಾವು ಮನವಿ ಕೊಡಲು ಬಂದಾಗ ನಮ್ಮನ್ನು ತಡೆಯುವ ಪ್ರಯತ್ನ ಪೂಲೀಸರಿಂದ ನಡೆದಿರುವುದು ಮತ್ತು ಇಡೀ ಲೋಕಾಯುಕ್ತ ಕಚೇರಿಯ ಸುತ್ತ ಪೊಲೀಸ್ ಸರ್ಪಗಾವಲು ಹಾಕಿರುವುದನ್ನು ಹೋರಾಟಗಾರರು ಒಕ್ಕರಲಿನಿಂದ ಖಂಡಿಸಿದರು.
ಏನಿದು ಪ್ರಕರಣದ ಹಿನ್ನಲೆ? :
ಲೋಕಾಯುಕ್ತ ಬಿಎಸ್ ಪಾಟೀಲ್ ಅವರ ಹೆಸರನ್ನು ಬಳಸಿಕೊಂಡು ಅವರ ಕುಟುಂಬದವರು ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಲಾಭಗಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂಬ ಅನುಮಾನ ತಮ್ಮನ್ನು ಕಾಡುತ್ತಿದೆ ಎಂದು ನೈಜ ಹೋರಾಟಗರಾರ ವೇದಿಕೆ ಆರೋಪಿಸಿತ್ತು. ಅಲ್ಲದೆ ಈ ಕುರಿತಂತೆ ಲೋಕಾಯುಕ್ತರ ಕುಟುಂಬದವರ ವಿರುದ್ಧ ಬಾರ್ ಕೌನ್ಸಿಲ್ ನಲ್ಲಿ ವಕೀಲರ ಕಾಯಿದೆ 1961ರ ಸೆಕ್ಷನ್ 35ರ ಪ್ರಕಾರ ದೂರು ದಾಖಲಿಸಿತ್ತು. ಇದಲ್ಲದೆ ಈ ಕುರಿತಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದ ನೈಜ ಹೋರಾಟಗಾರರ ವೇದಿಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು.