ಬೆಂಗಳೂರು, ಫೆ.24 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ 2018 ರಿಂದ ಐದು ವರ್ಷಗಳ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ 13 ನಿಮಿಷ 40 ಸೆಕೆಂಡುಗಳ ಡಾಕ್ಯುಮೆಂಟರಿ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪಲೋಡ್ ಮಾಡಿದ್ದಾರೆ.
ನಗರದಲ್ಲಿ 2018 ರಿಂದ 2022 ರ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ಆ ಸಂದರ್ಭದಲ್ಲಿ ಸೃಷ್ಟಿಯಾದ ಸಮಸ್ಯೆಗಳಿಗೆ ಪ್ರತಿಯಾಗಿ ಕೈಗೊಂಡ ಪರಿಹಾರ ಕ್ರಮಗಳು, ನಗರದ ಸಂಚಾರಿ ಸಮಸ್ಯೆಗಳಿಗೆ ಫ್ಲೈಓವರ್, ಅಂಡರ್ ಪಾಸ್, ರಸ್ತೆ ಅಗಲೀಕರಣ ಕೈಗೊಂಡಿರುವ ಮಾಹಿತಿ ವಿಡಿಯೋದಲ್ಲಿದೆ.
ಇನ್ನು ನಗರದ ನೈರ್ಮಲ್ಯತೆ, ಶುಚಿತ್ವ, ಘನತ್ಯಾಜ್ಯ ವಿಲೇವಾರಿ, ಸಿಲಿಕಾನ್ ಸಿಟಿಯ ಹಸರೀಕರಣಕ್ಕೆ ಒತ್ತು, ಪಾರ್ಕ್, ಕೆರೆಗಳ ಅಭಿವೃದ್ಧಿ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನೀಡಿರುವ ಉತ್ತೇಜನದ ಬಗ್ಗೆ ವಿವರಿಸಲಾಗಿದೆ.
ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ನಗರದ ರಸ್ತೆ ಅಭಿವೃದ್ಧಿಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಅವಧಿ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ, ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜಧಾನಿಯ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಈ ವಿಡಿಯೋ ಮಾಡಲಾಗಿದೆ ಎನ್ನಲಾಗುತ್ತಿದೆ.
ಬಿಬಿಎಂಪಿಯಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಹೆಸರಿನಲ್ಲಿ ಫೆ.22ರಂದು ಯೂಟ್ಯೂಬ್ ಖಾತೆ ತೆರೆಯಲಾಗಿದೆ.