ಬೆಂಗಳೂರು, ಫೆ.23 www.bengaluruwire.com : ರಾಜ್ಯದ ಏಳು ಜಿಲ್ಲೆಗಳಲ್ಲಿ 2014-15ರಿಂದ ಮೂರು ವರ್ಷಗಳಲ್ಲಿ 127.64 ಲಕ್ಷ ಮೆಟ್ರಿಕ್ ಟನ್ ಕಟ್ಟಡ ಕಲ್ಲನ್ನು ಹೊರತೆಗೆಯಲು ಅಂದಾಜು 21.27 ಲಕ್ಷ ( 2127 Tonnes Or 21,27,257 K.G ) ಕೆ.ಜಿಗಳಷ್ಟು ಸ್ಪೋಟಕಗಳನ್ನು ಬಳಸಿದ್ದರೂ ಆ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ಅನುಮತಿಯನ್ನೇ ಪಡೆದಿರಲಿಲ್ಲ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮಹಾಲೇಖಪಾಲಕರು 2017-18ನೇ ಸಾಲಿನ ವರದಿಯಲ್ಲಿ ಗಣಿ ಗುತ್ತಿಗೆ ಕುರಿತು ಉಲ್ಲೇಖಿಸಿದ್ದ ಅಂಶಗಳ ಬಗ್ಗೆ 2022-23ನೇ ಸಾಲಿನ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (Public Accounts Committee – PAC) ಸರ್ಕಾರಕ್ಕೆ ಮಂಡಿಸಿರುವ ವರದಿಯಲ್ಲಿ ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ.
ಸ್ಪೋಟಕಗಳ ಅಧಿನಿಯಮದ ಪ್ರಕಾರ ನಿರ್ದಿಷ್ಟ ಭದ್ರತೆಗಳನ್ನು ಕೈಗೊಳ್ಳುವ ಸಲುವಾಗಿ ಗುತ್ತಿಗೆದಾರರು ಗಣಿಗಾರಿಗೆಗಾಗಿ ಸ್ಪೋಟಕಗಳ ಬಳಕೆಗೆ ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಳ್ಳಬೇಕು. ಆದರೆ ಏಳು ಜಿಲ್ಲೆಗಳಲ್ಲಿ 1,046 ಗುತ್ತಿಗೆಗಳ ಪೈಕಿ 250 ಗುತ್ತಿಗೆಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳ ದಾಖಲೆಗಳೊಂದಿಗೆ ಲೆಕ್ಕಪರಶೋಧನೆಯು ಕ್ರಾಸ್ ಚೆಕ್ (ಅಡ್ಡ ಪರಿಶೀಲನೆ) ಮಾಡಿದಾಗ 209 ಗಣಿ ಗುತ್ತಿಗೆಗಳಲ್ಲಿ ಅಂದರೆ ಶೇ.83.60 ಪ್ರಕರಣಗಳಲ್ಲಿ ಗಣಿಗಾರಿಕೆ ನಿವೇಶನಗಳಲ್ಲಿ ಸ್ಪೋಟಕ ಸಿಡಿಸುವಿಕೆಗಾಗಿ ಗಣಿ ಗುತ್ತಿಗೆದಾರರು ಅನುಮತಿಯನ್ನೇ ಪಡೆದುಕೊಂಡಿರಲಿಲ್ಲ ಎಂಬ ಆಘಾತಕಾರಿ ಅಂಶವನ್ನು ಶಾಸಕ ಮತ್ತು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಕೃಷ್ಣ ಭೈರೇಗೌಡ ನೇತೃತ್ವದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಕಲ್ಲು ಗಣಿಗಾರಿಕೆ ಯೋಜನೆಗಳ ಪ್ರಕಾರ ಸರಾಸರಿ ಆರು ಟನ್ನುಗಳಷ್ಟು ಕಟ್ಟಡ ಕಲ್ಲನ್ನು ಹೊರತೆಗೆಯಲು ಒಂದು ಕೆ.ಜಿ ಸ್ಪೋಟಕದ ಅಗತ್ಯತೆಯಿದೆ. ಹೀಗಿರುವಾಗ ಪರಿಶೀಲನೆ ನಡೆಸಿದ 7 ಜಿಲ್ಲೆಗಳಲ್ಲಿ 2014-15ರಿಂದ 2016-17ನೇ ಇಸವಿಯ ತನಕ 127.64 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕಟ್ಟಡ ಕಲ್ಲನ್ನು ಹೊರತೆಗೆಯಲು 21.27 ಲಕ್ಷ ಟನ್ ಸ್ಪೋಟಕಗಳನ್ನು ಬಳಸಿರಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಂದಾಜಿಸಿದೆ.
ಅನಧಿಕೃತ ಸ್ಪೋಟಕಗಳಿಂದಾದ ಅಪಘಾತಕ್ಕೆ ಸಮಿತಿಯ ವಿಷಾದ :
ಗಣಿಗಾರಿಕೆಗಳಲ್ಲಿ ಅನಧಿಕೃತ ಸ್ಪೋಟಕಗಳ ಅಪಘಾತದಿಂದ ಚಿಕ್ಕಬಳ್ಳಾಪುರ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಸಂಭವಿಸಿದ ಅಮಾಯಕ ಹಾಗೂ ಅಸಹಾಯಕ ಕೂಲಿ ಕಾರ್ಮಿಕರ ಸಾವು- ನೋವುಗಳಿಗೆ ಸಮಿತಿಯು ವಿಷಾದ ವ್ಯಕ್ತಪಡಿಸಿ, ಇಂತಹ ಘಟನೆಗಳಿಗೆ ಕಾರಣಕರ್ತರಾದ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಹಾಗೂ ಇಂತಹ ಘಟನೆಗಳನ್ನು ನಿರಂತರ ಪರೀಕ್ಷಾ ತಪಾಸಣೆಗಳನ್ನು ನಡೆಸದೇ ಕಾನೂನು ಬಾಹಿರ ಸ್ಪೋಟಕಗಳಿಗೆ ಆಸ್ಪದ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮಕೈಗೊಳ್ಳಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.
ಅನಧಿಕೃತ ಸ್ಪೋಟಕ ವಸ್ತುಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ :
ಇಂತಹ ಗುತ್ತಿಗೆಗಳ ಸಂಬಂಧಿತ ಜಿಲ್ಲಾಧಿಕಾರಿಗಳ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮೇಲ್ವಿಚಾರಣಾ ಸಂಸ್ಥೆಗಳು, ಗಣಿ ಭದ್ರತೆ ನಿರ್ದೇಶಕರು ಹೀಗೆ ಕಲ್ಲು ಗಣಿ ಗುತ್ತಿಗೆಗಳಲ್ಲಿ ಸ್ಪೋಟಕಗಳ ಖರೀದಿ ಮತ್ತು ಬಳಕೆ ಬಗ್ಗೆ ಯಾವುದೇ ಮಾಹಿತಿ ಹೊಂದಿರಲಿಲ್ಲ ಎಂಬ ಕಳವಳಕಾರಿ ವಿಷಯವನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸಾಮಾನ್ಯವಾಗಿ ಗಣಿ ಗುತ್ತಿಗೆಗಳನ್ನು ನೀಡುವುದು ಮತ್ತು ನವೀಕರಣ ಮಾಡುವುದು ಸಂಬಂಧಿಸಿದ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆ ಸಮಿತಿಯ ಮೇಲ್ವಿಚಾರಣೆಯ ಅಡಿಯಲ್ಲಿ ಆಗಬೇಕು. ಅದೇ ರೀತಿ ಎಲ್ಲಾ ಗಣಿಗಳಲ್ಲಿ ಸ್ಪೋಟಕಗಳ ಸಿಡಿತಗೊಳಿಸಲು ಈ ಕಚೇರಿಗಳಿಂದ ಆಕ್ಷೇಪಣಾರಹಿತ ಪ್ರಮಾಣಪತ್ರಗಳನ್ನು ಪಡೆಯುವುದು ಮುಖ್ಯವಾಗಿರುತ್ತದೆ. ಆದರೆ ಈ ವಿಚಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ನಡುವೆ ಸಮನ್ವಯತೆಯೇ ಇರಲಿಲ್ಲ ಎಂಬುದನ್ನು ಪಿಎಸಿ ಸಮಿತಿಯು ಬೊಟ್ಟು ಮಾಡಿ ತೋರಿಸಿದೆ. ಇದನ್ನೂ ಓದಿ : ಬೆಂಗಳೂರಿನ ಮಗ್ಗುಲಲ್ಲೇ ಬೃಹತ್ ಬಂಡೆಗಳ ಬ್ಲಾಸ್ಟಿಂಗ್ : ಘಟನೆಯಲ್ಲಿ ಓರ್ವ ವ್ಯಕ್ತಿಯ ತಲೆಗೆ ಗಾಯ – ಅನಾಥಾಶ್ರಮ ಮೇಲ್ಛಾವಣಿ ಜಖಂ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ಲೋಪಗಳೇನು?:
ಗಣಿಸ್ಪೋಟಗಳಲ್ಲಿ ಸ್ಪೋಟಕಗಳನ್ನು ಬಳಸುವಾಗ ಭೂಮಿಯ ಕಂಪನವನ್ನು ಕನಿಷ್ಠ ಮಟ್ಟಕ್ಕೆ ತರುವ ರೀತಿಯಲ್ಲಿ ಸಮೂಹ ಗಣಿ ಪ್ರದೇಶದಲ್ಲಿ ಗಣಿವಾರು ಸಿಡಿಸುವಿಕೆ ಚಟುವಟಿಕೆಗಳ ವೇಳಾಪಟ್ಟಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ನಿರ್ದಿಷ್ಟಪಡಿಸಿರಲಿಲ್ಲ. ಅಲ್ಲದೆ ಇಲಾಖೆಯ ಕ್ಷೇತ್ರ ಕಚೇರಿಗಳು ಮೇಲ್ವಿಚಾರಣೆ ಉದ್ದೇಶಗಳಿಗಾಗಿ ಸಿಡಿತದ ಕಂಪನಗಳನ್ನು ನಿಯತಕಾಲಿಕವಾಗಿ ಅಳತೆ ಮಾಡುವ ಸಲುವಾಗಿ ಅಗತ್ಯ ಉಪಕರಣವನ್ನು ಹೊಂದಿರಲಿಲ್ಲ. ಹೀಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸ್ಪೋಟಕ ಸಿಡಿತದ ಕಂಪನಗಳನ್ನು ಗಮನಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಸಿಡಿತದ ಕಾರಣ ಸಂಭವಿಸಿದ ನಷ್ಟಗಳ ಬಗ್ಗೆ ಸ್ವೀಕರಿಸಲಾದ ದೂರುಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ನೀಡಲಾಗಲಿಲ್ಲ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಹೇಳಿದ್ದೇನು? :
“ಕೇವಲ ಏಳು ಜಿಲ್ಲೆಗಳಲ್ಲಿ 250 ಗಣಿ ಗುತ್ತಿಗೆಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ದಾಖಲೆ ಜೊತೆ ಲೆಕ್ಕಪರಿಶೋಧನೆಯ ಅಡ್ಡಪರಿಶೀಲನೆ ಮಾಡಿದಾಗ 209 ಗುತ್ತಿಗೆ ಗಣಿಕಾರಿಕೆ ನಿವೇಶನಗಳಲ್ಲಿ ಸ್ಪೋಟಕ ಸಿಡಿಸುವಿಕೆಗೆ ಅನುಮತಿ ಪಡೆದಿರಲಿಲ್ಲ. ನಿಜಕ್ಕೂ ಇದು ಗಂಭೀರ ವಿಚಾರ. ಹೀಗಾಗಿ ಚಿಕ್ಕಬಳ್ಳಾಪುರ, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಅನಧಿಕೃತ ಸ್ಪೋಟಕಗಳ ಬಳಕೆಯಿಂದ ಅಪಘಾತಗಳಾಗಿ ಅಮಾಯಕರು ತಮ್ಮದಲ್ಲದ ತಪ್ಪಿಗೆ ಬಲಿಯಾದರು. ಸರ್ಕಾರ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ. ಹೀಗಾಗಿಯೇ ರಾಜ್ಯ ಗಣಿಗಳಿಂದ ಲೂಟಿಯಾಗುತ್ತಿದ್ದರೂ ಸರ್ಕಾರಕ್ಕೆ ರಾಜಧನ ವರಮಾನ ನಷ್ಟವಾಗುತ್ತಿದೆ. ಇದನ್ನೇ ಸಾರ್ವಜನಿಕ ಲೆಕ್ಕಪತ್ರ ವರದಿಯಲ್ಲಿ ತಿಳಿಸಿದ್ದೇವೆ. ಸಮಿತಿ ನೀಡಿದ ಪರಿಹಾರ ಕ್ರಮಗಳನ್ನು ಸರ್ಕಾರ ಅನುಷ್ಠಾನ ಮಾಡುವುದರತ್ತ ಆದ್ಯ ಗಮನ ನೀಡಬೇಕು.”
– ಕೃಷ್ಣಭೈರೇಗೌಡ, ಅಧ್ಯಕ್ಷರು, ಸಾರ್ವಜನಿಕ ಲೆಕ್ಕಪತ್ರ ಸಮಿತಿ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.