ಬೆಂಗಳೂರು, ಫೆ.22 www.bengaluruwire.com : ನಗರದಲ್ಲಿ ನಿಯಮಬಾಹಿರವಾಗಿ “ಬಿ” ಖಾತೆಯನ್ನು ಅಕ್ರಮ ಮಾರ್ಗಗಳಿಂದ “ಎ” ಖಾತೆಯನ್ನಾಗಿ ಮಾಡಿಕೊಟ್ಟ ಕಂದಾಯ ಅಧಿಕಾರಿಗಳು ಹಾಗೂ ಮನೆ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಇಂತಹ ಪ್ರಕರಣಗಳನ್ನು ಕಂಡು ಹಿಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BMP) ಮುಖ್ಯ ಆಯುಕ್ತರು ನಾಲ್ವರು ಅಧಿಕಾರಿಗಳ ಪರಿಶೀಲನಾ ಸಮಿತಿ ರಚಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮಗಳನ್ನು ಮೀರಿ ನಿವೇಶನಗಳಿಗೆ “ಎ” ಖಾತೆಯನ್ನು ನೀಡಲಾಗುತ್ತಿದೆ ಹಾಗೂ ಅನುಮೋದನೆ ಪಡೆಯದ ಬಡಾವಣೆ ಹಾಗೂ ಸರ್ಕಾರಕ್ಕೆ ಶುಲ್ಕ ಸಲ್ಲಿಸದೇ ನಿರ್ಮಿಸಿರುವ ನಿವೇಶನಗಳಿಗೆ ‘ಎ’ ಖಾತೆ ನೀಡಲಾಗುತ್ತಿದೆ ಎಂಬ ದೂರು ಬಂದಿದೆ. ಈ ಹಿನ್ನಲೆಯಲ್ಲಿ ಪಾಲಿಕೆಯ ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಯಲಹಂಕ ವ್ಯಾಪ್ತಿಯಲ್ಲಿ ಈ ರೀತಿಯ ಅಕ್ರಮ ಹಾಗೂ ನಿಯಮ ಬಾಹಿರ ಖಾತೆ ನೀಡಲಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಪಾಲಿಕೆಗೆ ಬಂದಿದೆ. ಆದ್ದರಿಂದ ಆ ದೂರಿನ ಸತ್ಯಾಸತ್ಯತೆ ಪರಿಶೀಲಿಸಲು ಹಾಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಆಯುಕ್ತರು “ಪರಿಶೀಲನಾ ಸಮಿತಿ” ರಚಿಸಿ ಆದೇಶಿಸಿದ್ದಾರೆ.
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯ್ ಪುರ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಆರ್.ಎಲ್.ದೀಪಕ್, ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ಹರೀಶ್ ಕುಮಾರ್ ಸಮಿತಿ ಸದಸ್ಯರಾಗಿದ್ದರೆ, ಹಣಕಾಸು ವಿಭಾಗದ ಅಪರ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಈ ಸಮಿತಿಯು ಪಾಲಿಕೆಯ ಯಾವುದೇ ಅಧಿಕಾರಿಗಳನ್ನು ಸದಸ್ಯರನ್ನಾಗಿ ಹಾಗೂ ಅಧಿಕಾರಿ-ಸಿಬ್ಬಂದಿಯನ್ನಾಗಿ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತದೆ. ಸಮಿತಿಯು ತನ್ನ ಪರಿಶೀಲನಾ ವರದಿಯನ್ನು ಆದಷ್ಟು ಶೀಘ್ರದಲ್ಲಿ ಅಂದರೆ ಮುಂದಿನ ಒಂದು ತಿಂಗಳ ಅವಧಿಯೊಳಗೆ ನೀಡಬೇಕೆಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ 19 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿದ್ದು, ಅವುಗಳ ಪೈಕಿ 6 ಲಕ್ಷ ಬಿ ಖಾತೆಯ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಗೆ 110 ಹಳ್ಳಿಗಳು, 7 ನಗರ ಸಭೆ ಹಾಗೂ ಒಂದು ಪುರಸಭೆ ಸೇರ್ಪಡೆಯಾಗಿ 2007ರಲ್ಲಿ ಬಿಬಿಎಂಪಿಯಾದ ಬಳಿಕ ಮಹದೇವಪುರ, ಬೊಮ್ಮನಹಳ್ಳಿ, ರಾಜ ರಾಜೇಶ್ವರಿನಗರ ಹಾಗೂ ಯಲಹಂಕ ವಲಯಗಳಲ್ಲಿ “ಬಿ” ಖಾತೆಯನ್ನು ಅಕ್ರಮ ಮಾರ್ಗಗಳಿಂದ “ಎ” ಖಾತೆಯನ್ನಾಗಿ ಮಾಡುವ ಪ್ರಕರಣಗಳು ಹಿಂದಿನಿಂದಲೂ ತೆರೆಮರೆಯಲ್ಲಿ ನಡೆದುಕೊಂಡು ಬರುತ್ತಲೇ ಇದೆ. ಜನಪ್ರತಿನಿಧಿ ಆಡಳಿತವಿದ್ದಾಗ ಪಾಲಿಕೆ ಕೌನ್ಸಿಲ್ ಸಭೆಗಳಲ್ಲಿ ಕಾರ್ಪೊರೇಟರ್ ಗಳು ಈ ಬಗ್ಗೆ ಸಭೆಯ ಗಮನಕ್ಕೆ ತಂದು ಪಾಲಿಕೆ ವಲಯಗಳಲ್ಲಿ ಅಕ್ರಮ “ಎ” ಖಾತೆಗಳ ನಿಯಂತ್ರಣಕ್ಕೆ ಆಗ್ರಹಿಸುತ್ತಿದ್ದ ಹಿನ್ನಲೆಯಲ್ಲಿ ಎ ಖಾತೆಗಳ ಹಾವಳಿ ನಿಯಂತ್ರಣದಲ್ಲಿತ್ತು.
ಆದರೆ ಆಡಳಿತಾಧಿಕಾರಿಗಳ ಅವಧಿಯ ಬಳಿಕ ಈ ಬಗ್ಗೆ ಹೆಚ್ಚಿನ ಗಮನ ನೀಡದ ಕಾರಣ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ನಿರಂತರವಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ಬಿ- ಖಾತೆಯ ಸ್ವತ್ತುಗಳಿಗೆ ಎ – ಖಾತೆ ನೀಡುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಅವರ ಏಜಂಟರು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ ಎಂದು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ವಿಚಾರದ ಬಗ್ಗೆ ಆರೋಪ ಮಾಡುತ್ತಲೇ ಬಂದಿದ್ದಾರೆ. ಇದೀಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತರು ನಾಲ್ವರು ಅಧಿಕಾರಿಗಳ ಪರಿಶೀಲನಾ ಸಮಿತಿಗೆ ಅಕ್ರಮವನ್ನು ಪತ್ತೆ ಹಚ್ಚಿ ವರದಿ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತರು ಏನಂತಾರೆ? :
“ಪಾಲಿಕೆಯ ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಯಲಹಂಕ ವ್ಯಾಪ್ತಿಯಲ್ಲಿ ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳಿಗೆ “ಎ” ಖಾತೆಯನ್ನು ನೀಡಲಾಗುತ್ತಿದೆ ಎಂದು ಸಾಕಷ್ಟು ದೂರುಗಳು ಬಂದಿದೆ. ಈ ಹಿನ್ನಲೆಯಲ್ಲಿ ಅಂತಹ ಅನುಮಾನಾಸ್ಪದವಾಗಿ ಖಾತೆ ಮಾಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ, ಹಿಂದೆಯೇ ಈ ಇಂತಹ ನಿವೇಶನಗಳಿಗೆ “ಎ” ಖಾತೆ ಮಾಡಲಾಗಿತ್ತಾ, ಸರ್ಕಾರಕ್ಕೆ ಸೂಕ್ತ ಶುಲ್ಕ ಸಲ್ಲಿಸಿ ನಿವೇಶನ ನಿರ್ಮಿಸಲಾಗಿದೆಯಾ? ಹಿಂದಿನ ನಗರಸಭೆ, ಪುರಸಭೆಯಿಂದ ಬಿಬಿಎಂಪಿಗೆ ಸೇರ್ಪಡೆಯಾದಾಗ ಅಲ್ಲಿನ ರಿಜಿಸ್ಟರ್ ಗಳಲ್ಲಿ ಅಕ್ರಮವಾಗಿ ನಿವೇಶನಗಳನ್ನು ‘ಎ‘ ಖಾತೆ ರಿಜಿಸ್ಟರ್ ಗಳಿಗೆ ದಾಖಲು ಮಾಡಲಾಗಿದೆಯಾ? ಎಂಬ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಿ ವರದಿ ನೀಡಲು ಪರಿಶೀಲನಾ ಸಮಿತಿ ರಚಿಸಲಾಗಿದೆ. ಆ ಸಮಿತಿ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು”
– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತರು
ಮಾನ್ಯುಲ್ ಖಾತೆ ನೀಡಿಕೆ ನಿಲ್ಲಿಸಿ ಕಂಪ್ಯೂಟರ್ ಖಾತೆ ಮಾಡಿ :
“ಬಿಬಿಎಂಪಿ ವ್ಯಾಪ್ತಿಯ 100 ವಾರ್ಡ್ ಗಳನ್ನು ಬಿಟ್ಟರೆ ಉಳಿದ 143 ವಾರ್ಡ್ ಗಳಲ್ಲಿ ಇನ್ನೂ ಭೌತಿಕವಾಗಿ ಖಾತೆ ಪ್ರಮಾಣಪತ್ರ ನೀಡುವ ಸಂಪ್ರದಾಯವಿದೆ. ಇದರಿಂದ ನಕಲಿ ಖಾತೆಗಳ ಹಾವಳಿ ಹಾಗೂ ಅಕ್ರಮವಾಗಿ “ಎ” ಖಾತೆ ಮಾಡುವ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಕೂಡಲೇ ಬಿಬಿಎಂಪಿಯು ಕಂಪ್ಯೂಟರೀಕೃತವಾಗಿ ಖಾತೆಯನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆಯೂ ಬಿಬಿಎಂಪಿ ಅಧಿಕಾರಿಗಳಿಗೆ ಈ ಸಂಬಂಧ ತಿಳಿಸಲಾಗಿದೆ. ಪಾಲಿಕೆಯ ನಾಲ್ಕು ವಲಯಗಳಲ್ಲಿ ಅಕ್ರಮ “ಎ” ಖಾತೆ ನೀಡುವ ಪ್ರಕರಣಗಳನ್ನು ಕಂಡು ಹಿಡಿಯಲು ಬಿಬಿಎಂಪಿ ಆಯುಕ್ತರು ಪರಿಶೀಲನಾ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಲೋಪಗಳು ಕಂಡು ಬಂದರೆ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಿದೆ.”
– ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಶಾಸಕ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.