ಬೆಂಗಳೂರು, ಫೆ.21 www.bengaluruwire.com : ರಾಜಧಾನಿಯ ಆಸ್ತಿ ಮಾಲೀಕರಿಗೆ ಒಂದು ಸಿಹಿ ಸುದ್ದಿ. ನಗರದಲ್ಲಿನ ‘ಎ’ ಖಾತಾ ಮತ್ತು ‘ಬಿ’ ಖಾತಾಗಳ ಸ್ವತ್ತು ತೆರಿಗೆ ಇನ್ನು ಮುಂದೆ ಏಕ ರೀತಿಯಲ್ಲಿರಲಿದೆ. ದುಪ್ಪಟ್ಟು ತೆರಿಗೆ ಪಾವತಿ ಮಾಡುತ್ತಿದ್ದ ಸ್ವತ್ತುಗಳ ಮಾಲೀಕರಿಗೆ ಇದರಿಂದ ಹೊರೆ ತಗ್ಗಲಿದೆ.
ಇದೇ ಅಧಿ- ವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
‘ಬೆಂಗಳೂರು ನಗರದಲ್ಲಿ ಕಂದಾಯ ನಿವೇಶನಗಳಲ್ಲಿ ಲಕ್ಷಾಂತರ ಮಂದಿ ಮನೆಗಳನ್ನು ಕಟ್ಟಿಕೊಂಡಿದ್ದು, ಅದಕ್ಕೆ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಉದಾಹರಣೆಗೆ ‘ಎ’ ಖಾತಾದಲ್ಲಿರುವವರು 100 ರೂ. ತೆರಿಗೆ ಪಾವತಿಸುತ್ತಿದ್ದರೆ, ‘ಬಿ’ ಖಾತಾದಲ್ಲಿ ಮನೆ ಕಟ್ಟಿಕೊಂಡವರು 200 ರೂ. ಪಾವತಿಸುತ್ತಿದ್ದರು. ಇನ್ನು ಮುಂದೆ ‘ಎ’ ಮತ್ತು ‘ಬಿ’ ಖಾತಾದಾರರಿಂದ ಒಂದೇ ಪ್ರಕಾರ ತೆರಿಗೆ ವಸೂಲಿ ಮಾಡಲಾಗುವುದು. ಈ ಕ್ರಮದಿಂದ ಲಕ್ಷಾಂತರ ‘ಬಿ’ ಖಾತಾದಾರರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
‘ಬಿ’ ಖಾತಾ ಹೊಂದಿರುವ ನಿವಾಸಿಗಳಿಗೆ ತೆರಿಗೆ ಹೊರೆಯೂ ಕಡಿಮೆ ಆಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ‘ಬಿ’ ಖಾತಾ ಸ್ವತ್ತುಗಳಿವೆ ಎಂದು ಅಂದಾಜು ಮಾಡಲಾಗಿದೆ. ಇನ್ನು ನಗರದಲ್ಲಿ ಒಟ್ಟಾರೆ 19 ಲಕ್ಷಕ್ಕೂ ಹೆಚ್ಚಿನ ಸ್ವತ್ತುಗಳಿವೆ ಎಂದು ಪಾಲಿಕೆ ಹೇಳಿದೆ.
‘ಬಿ’ ಖಾತೆ ಇಲ್ಲಿಯ ತನಕ ಪಾಲಿಕೆ ಅಧಿಕಾರಿಗಳು ನಿಗಧಿಪಡಿಸಿದ್ದೇ ಶುಲ್ಕವಾಗಿತ್ತು. ಅಧಿಕಾರಿಗಳ ಮಾನದಂಡ ಇನ್ನು ನಡೆಯಲ್ಲ. ‘ಎ’ ಖಾತೆಗೆ ಇರುವ ಮಾನದಂಡವನ್ನು ಇನ್ನು ಮುಂದೆ ಪಾಲನೆಯಾಗಲಿದೆ. ‘ಬಿ’ ಖಾತೆಯನ್ನು ‘ಎ’ ಖಾತೆಯನ್ನಾಗಿ ಪರಿವರ್ತಿಸಲು ಇದು ಪ್ರಾಥಮಿಕ ಹಂತ. ಈಗಾಗಲೇ ವರ್ಷಗಳ ಹಿಂದೆಯೆ ಬಿಬಿಎಂಪಿಯಿಂದ ‘ಬಿ’ ಖಾತೆಯನ್ನು ‘ಎ’ ಖಾತೆಯನ್ನಾಗಿ ಪರಿವರ್ತಿಸುವ ಸಮನಬಂಧ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದ್ದರೂ ಸೂಕ್ತ ಕ್ರಮ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಸರ್ಕಾರ ನಗರದ ಮತದಾರರ ಓಲೈಕೆಗೆ ಈ ತಂತ್ರ ಹೆಣೆದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.