ಬೆಂಗಳೂರು, ಫೆ.20 www.bengaluruwire.com : ಕನ್ನಡ ಚಿತ್ರರಂಗದ ಅಪರೂಪದ ವ್ಯಕ್ತಿತ್ವದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್(90) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ ಅವರು ಜಯದೇವ ಆಸ್ಪತ್ರೆಯಲ್ಲಿ ಬೆಳಗ್ಗೆ 6 ಗಂಟೆಗೆ ಕೊನೆ ಉಸಿರೆಳೆದಿದ್ದಾರೆ.
ಸಹಕಾರನಗರದ ಭಗವಾನ್ ಅವರ ನಿವಾಸದಲ್ಲಿ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ತದನಂತರ ಮಧ್ಯಾಹ್ನ 12ರಿಂದ 4 ಗಂಟೆವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸಂಜೆ 5 ಗಂಟೆ ವೇಳೆಗೆ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಅವರು 1933ರ ಜುಲೈ 3 ರಂದು ಮೈಸೂರಿನಲ್ಲಿ ಜನಿಸಿದರು. ಬೆಂಗಳೂರು ಹೈಸ್ಕೂಲಿನಲ್ಲಿ ಶಾಲೆಯಲ್ಲಿ ಕಲಿತ ಅವರು, ಸಣ್ಣ ವಯಸ್ಸಿನಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದರು. ಇವರು ಹಾಗೂ ದೊರೈರಾಜು ಸೇರಿ ಡಾ.ರಾಜ್ ಕುಮಾರ್ ಅವರ 30 ಚಿತ್ರಗಳನ್ನು ನಿರ್ದೇಶಿಸಿದ್ದರು.
ಸಂಧ್ಯಾರಾಗ, ಮಾಂಗಲ್ಯ ಬಂಧನ, ಜೀವನ ಚೈತ್ರ, ಗಿರಿಕನ್ಯೆ, ವನ, ಜೇಡರ ಬಲೆ, ಬಯಲುದಾರಿ, ಮುಗಿಯದ ಕಥೆ, ಬೆಂಕಿಯ ಬಲೆ, ಸಮಯದ ಗೊಂಬೆ ಸೇರಿ ಹಲವು ಸಿನಿಮಾ ನಿರ್ದೇಶಿಸಿದ್ದಾರೆ. ಕಸ್ತೂರಿ ನಿವಾಸ, ಎರಡು ಕನಸು, ಆಪರೇಷನ್ ಡೈಮಂಡ್ ರಾಕೆಟ್, ಚಂದನದ ಗೊಂಬೆ, ಮುನಿಯನ ಮಾದರಿ, ಹೊಸಬೆಳಕು, ಯಾರಿವನು, ನೀನು ನಕ್ಕರೆ ಹಾಲು ಸಕ್ಕರೆ, ಒಡಹುಟ್ಟಿದವರು ಸೇರಿದಂತೆ ಮುಂತಾದ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.
ಹಿರಿಯ ಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಚಿತ್ರರಂಗ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಶ್ರೀ ಎಸ್. ಕೆ. ಭಗವಾನ್ ರವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.”
“ದೊರೈ-ಭಗವಾನ್ ಜೋಡಿಯು ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಚಿತ್ರಗಳನ್ನು ನೀಡಿದೆ. ಡಾ. ರಾಜ್ ಕುಮಾರ್ ನಟನೆಯ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್ ಜೊತೆ ಸೇರಿ ನಿರ್ದೇಶಿಸಿದ್ದರು. ಓಂ ಶಾಂತಿಃ” ಎಂದು ಹೇಳಿದ್ದಾರೆ.