ಬೆಂಗಳೂರು, ಫೆ.19 www.bengaluruwire.com : ಶೇಷಾದ್ರಿಪುರಂ ಹಾಗೂ ರೇಸ್ ಕೋರ್ಸ್ ಕಡೆಯಿಂದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಸಂಪರ್ಕಿಸುವ ರಸ್ತೆಯ ಮಧ್ಯದ ಅವೈಜ್ಞಾನಿಕ ಜಂಕ್ಷನ್ ನಲ್ಲಿನ ದೋಷಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸರಿಪಡಿಸುವ ಕಾಮಗಾರಿ ಕೈಗೊಂಡಿದೆ. ಇದು ‘ಬೆಂಗಳೂರು ವೈರ್’ ವರದಿ ಪರಿಣಾಮವಾಗಿದೆ.
ರಾಜಧಾನಿಯ ಹೃದಯ ಭಾಗದಲ್ಲಿರುವ ಶಿವಾನಂದ ಉಕ್ಕಿನ ಸೇತುವೆ ಬೆಂಗಳೂರಿನ ನರ್ವ್ ಸೆಂಟರ್ ಗಳಲ್ಲಿ ಒಂದು. ಇಂತಹ ಉಕ್ಕಿನ ಸೇತುವೆಯ ಜಂಕ್ಷನ್ ಸೂಕ್ತ ರೀತಿ ನಿರ್ಮಿಸದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಈ ಕುರಿತಂತೆ ‘ಬೆಂಗಳೂರು ವೈರ್’ ನಲ್ಲಿ ಸವಿಸ್ತಾರವಾಗಿ ಆ ಅವೈಜ್ಞಾನಿಕ ಜಂಕ್ಷನ್ ನಿಂದ ಸೃಷ್ಟಿಯಾಗುವ ಸಮಸ್ಯೆಗಳ ಬಗ್ಗೆ #ShivanandSteelBridge Reality Check | ಶಿವಾನಂದ ಸರ್ಕಲ್ ಉಕ್ಕಿನ ಸೇತುವೆಯ ಅವೈಜ್ಞಾನಿಕ ಜಂಕ್ಷನ್ : ಇಲ್ಲಿ ಹುಷಾರಾಗಿ ವಾಹನ ಚಾಲನೆ ಮಾಡಿ…! ಎಂಬ ತಲೆ ಬರಹದ ಸುದ್ದಿಯನ್ನು ಪ್ರಕಟಿಸಿ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು ಈ ಭಾಗದಲ್ಲಿ ಕಾಮಗಾರಿ ಆರಂಭಿಸಿ ಜಂಕ್ಷನ್ ನಲ್ಲಿ ವಿನ್ಯಾಸ ದೋಷವನ್ನು ಸರಿಪಡಿಸುವ ಕಾರ್ಯ ಕೈಗೆತ್ತಿಕೊಂಡಿದೆ.
ಶಿವಾನಂದ ಜಂಕ್ಷನ್ ನಲ್ಲಿ ಸಮಸ್ಯೆ ಏನಿತ್ತು? :
ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕಡೆಗೆ ಬಂದು ಹೋಗುವ ವಾಹನಗಳು ಸುಗಮವಾಗಿ ಸಾಗುವಂತೆ ರೇಸ್ ಕೋರ್ಸ್ ರಸ್ತೆಯ ಜಂಕ್ಷನ್ ನಲ್ಲಿನ ಮೀಡಿಯನ್ ಅನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಿಲ್ಲ. ಹೀಗಾಗಿ ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ಕಡೆಗೆ ಬಲಕ್ಕೆ ತಿರುಗಿ ಸಾಗುವ ವಾಹನಗಳು ಹಾವಿನಂತೆ ಬಳಕುತ್ತಾ ಸೇತುವೆಯನ್ನು ಹತ್ತಬೇಕಾಗಿದೆ. ಹೀಗೆ ಹತ್ತುವ ಸಂದರ್ಭದಲ್ಲಿ ಕೊಂಚ ಮಿಸ್ ಆದರೂ ಮೇಲ್ಸೇತುವೆ ರಾಂಪ್ ಹಾಗೂ ಪಕ್ಕದ ಇಂಟರ್ ಮೀಡಿಯೇಟ್ ಸ್ಲಿಪ್ ರಸ್ತೆ ಮಧ್ಯದ ಭಾಗಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆಯಿತ್ತು.
ರೇಸ್ ಕೋರ್ಸ್ ಕಡೆಯಿಂದ ಬಲಕ್ಕೆ ತಿರುಗಿ ಶೇಷಾದ್ರಿಪುರಂ ಕಡೆಗೆ ಸಾಗುವ ಹಾದಿಯಲ್ಲಿ ಈ ಹಿಂದೆ ಇದ್ದ ಜಂಕ್ಷನ್ ನಲ್ಲಿ ಅಶ್ವಗಳ ಪ್ರತಿಮೆಯಿಂದಾಗಿ ವಾಹನ ಸವಾರರಿಗೆ ಫ್ಲೈಓವರ್ ಹಾಗೂ ಆ ರಸ್ತೆಗೆ ತಾಗಿದಂತೆ ಬಲ ಬದಿಯಲ್ಲಿ ಹಾಕಿರುವ ದೊಡ್ಡ ಸೈನ್ ಬೋರ್ಡ್ (ತಲುಪುವ ದಾರಿಯ ಮಾಹಿತಿ ನೀಡುವ ಫಲಕ) ಸರಿಯಾಗಿ ಕಾಣುವುದಿಲ್ಲ. ಸಾಮಾನ್ಯವಾಗಿ ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳ ಪ್ರಕಾರ ಮೀಡಿಯನ್ ಜಂಕ್ಷನ್ ಗಳಲ್ಲಿ ವಾಹನಗಳ ವೇಗವನ್ನು ಕಡಿಮೆ ಮಾಡಿ ಸುಮಗವಾಗಿ ವಾಹನ ಸಂಚಾರಕ್ಕಾಗಿ ವೃತ್ತಗಳನ್ನು ಮಾಡಿರುತ್ತಾರೆ. ಆದರೆ ರೇಸ್ ಕೋರ್ಸ್ ರಸ್ತೆಯಲ್ಲಿನ ಶಿವಾನಂದ ವೃತ್ತದ ಫ್ಲೈಓವರ್ ಜಂಕ್ಷನ್ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.
ಬಿಬಿಎಂಪಿ ಈಗೇನು ಮಾಡಲು ಹೊರಟಿದೆ? :
ಶಿವಾನಂದ ಜಂಕ್ಷನ್ ನಲ್ಲಿ ಉಕ್ಕಿನ ಸೇತುವೆ ಮಾರ್ಗದ ಫಲಕ ಹಾಗೂ ಮೇಲ್ಸೇತುವೆ ಹಾದಿ ಕಾಣಲು ಅಡ್ಡಲಾಗಿದ್ದ ಕುದುರೆಗಳ ಪ್ರತಿಕೃತಿಯನ್ನು ಪಾಲಿಕೆ ಯೋಜನಾ ವಿಭಾಗದ ಎಂಜಿನಿಯರ್ ಗಳು ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೆ ಜಂಕ್ಷನ್ ವಿಸ್ತೀರ್ಣವನ್ನು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸರಿಪಡಿಸುತ್ತಿದ್ದಾರೆ. ಆದಷ್ಟು ಶೀಘ್ರದಲ್ಲೇ ಈ ಕಾಮಗಾರಿ ಮುಗಿಸಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಬಿಬಿಎಂಪಿ ಯೋಜನಾ ವಿಶೇಷ ಆಯುಕ್ತರು ಏನು ಹೇಳ್ತಾರೆ? :
“ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಬಳಿಕ ಆ ಮೇಲ್ಸೇತುವೆ ಮುಂಭಾಗದ ಜಂಕ್ಷನ್ ಅವೈಜ್ಞಾನಿಕ ವಿನ್ಯಾಸದಿಂದಾಗಿ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ‘ಬೆಂಗಳೂರು ವೈರ್’ನಲ್ಲಿ ಸೂಕ್ತ ಸಾಕ್ಷಿಯೊಂದಿಗೆ ವಿಸ್ತಾರವಾಗಿ ಪ್ರಕಟಿಸಲಾಗಿತ್ತು. ಇದು ಪಾಲಿಕೆ ಗಮನಕ್ಕೆ ಬಂದ ನಂತರ ಈ ಸ್ಥಳದಲ್ಲಿ ಸಂಚಾರಕ್ಕೆ ತೊಡಕಾಗಿದ್ದ ಅಶ್ವಗಳನ್ನು ಇದೇ ಪ್ರದೇಶದ ಬೇರೆ ಸ್ಥಳಗಳಲ್ಲಿ ಸ್ಥಳಾಂತರ ಮಾಡಲು ರಸ್ತೆಯ ಪಕ್ಕದಲ್ಲಿಡಲಾಗಿದೆ. ಜಂಕ್ಷನ್ ನಲ್ಲಿನ ಲೋಪಗಳನ್ನು ಸರಿಪಡಿಸುವ ಕಾಮಗಾರಿ ಆರಂಭವಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ.”
- ಪಿ.ಎನ್.ರವೀಂದ್ರ, ಯೋಜನೆ ವಿಶೇಷ ಆಯುಕ್ತರು, ಬಿಬಿಎಂಪಿ
2017ರಲ್ಲಿ ಬಿಬಿಎಂಪಿಯು ಶಿವಾನಂದ ವೃತ್ತದಲ್ಲಿ ಸ್ಟೀಲ್ ಬ್ರಿಡ್ಜ್ ಕಾಮಗಾರಿಯನ್ನು ಆರಂಭಿಸಲು ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಸಂಸ್ಥೆಗೆ ಕಾರ್ಯಾದೇಶ ನೀಡಿ ಕೇವಲ 9 ತಿಂಗಳಲ್ಲಿ ಕೆಲಸ ಮುಗಿಸುವಂತೆ ತಿಳಿಸಿತ್ತು. ಆದರೆ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಭೂಮಾಲೀಕರು ಕೋರ್ಟ್ ಮೆಟ್ಟಿಲು ಹತ್ತಿದ್ದು, ಕರೋನಾ ಮತ್ತಿತರ ಕಾರಣದಿಂದ 9 ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸ ಐದು ವರ್ಷದ ಬಳಿಕ ಕಳೆದ ಕೆಲವು ತಿಂಗಳ ಹಿಂದಷ್ಟೇ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಪೂರ್ಣ ರೂಪದಲ್ಲಿ ಲಭ್ಯವಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.