ಬೆಂಗಳೂರು, ಫೆ.17 www.bengaluruwire.com : ಕರ್ನಾಟಕ ಆಡಳಿತ ಸೇವೆ ಮತ್ತು ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವೆ ವಿ.ಆರ್. ಶೈಲಜಾ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಆಗ್ರಹಿಸಿದೆ.
ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವಿ ಎಂ. ತಿರ್ಲಾಪೂರ, ಕರ್ನಾಟಕ ಆಡಳಿತ ಸೇವೆಯು 100ಕ್ಕಿಂತ ಹೆಚ್ಚು ವರ್ಷಗಳನ್ನು ಪೂರೈಸಿದ ದೇಶದ ಏಕೈಕ ರಾಜ್ಯ ಆಡಳಿತ ಸೇವೆಯಾಗಿದ್ದು ತನ್ನದೇ ಆದ ಭವ್ಯ ಇತಿಹಾಸ ಹೊಂದಿದೆ. ಒಂದು ಶತಮಾನಕ್ಕೂ ಹೆಚ್ಚಿನ ಕಾಲ ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಕೆ.ಎ.ಎಸ್ ಅಧಿಕಾರಿಗಳು ಸಲ್ಲಿಸಿದ ಸೇವೆ ಬಗ್ಗೆ ರಾಜ್ಯ ಹಾಗೂ ರಾಷ್ಟ್ರದ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ ನಾಡು, ನುಡಿ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಕೆಎಎಸ್ ಅಧಿಕಾರಿಗಳು ಈವರೆಗೂ ಅತ್ಯಂತ ಶ್ರದ್ಧಯಿಂದ ಕೆಲಸ ನಿರ್ವಹಿಸಿ ಮೇಲ್ಪಂಕ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ.
ಇಂತಹ ಮಹತ್ತರವಾದ ಕರ್ನಾಟಕ ಆಡಳಿತ ಸೇವೆ ಮತ್ತು ಈ ಸೇವೆಯ ಅಧಿಕಾರಿಗಳ ಬಗ್ಗೆ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ತರವಲ್ಲದ ರೀತಿಯಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿರುವುದು ಕೆ.ಎ.ಎಸ್. ಅಧಿಕಾರಿಗಳ ಸಂಘದ ಗಮನಕ್ಕೆ ಬಂದಿದೆ. ಇಂತಹ ಅಸಂಬದ್ಧ ಹೇಳಿಕೆಯನ್ನು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸುತ್ತದೆ.
ವಿ.ಆರ್. ಶೈಲಜಾ ಅವರ ಬಗ್ಗೆ ಮಾತನಾಡುವ ಭರದಲ್ಲಿ ಕರ್ನಾಟಕ ಆಡಳಿತ ಸೇವೆಯನ್ನು ಅನಾವಶ್ಯಕವಾಗಿ ಎಳೆದು ತಂದಿರುವುದು ಮತ್ತು ಆ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಕೆ.ಎ.ಎಸ್. ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸುತ್ತಾ, ಬೇಷರತ್ತಾಗಿ ಹೇಳಿಕೆಯನ್ನು ಹಿಂಪಡೆಯುವಂತೆ ಸಂಘವು ಒತ್ತಾಯಿಸುತ್ತದೆ ಎಂದು ಡಾ.ರವಿ ಎಂ. ತಿರ್ಲಾಪೂರ ಒತ್ತಾಯಿಸಿದ್ದಾರೆ.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿ ಮತ್ತು ಪತ್ರಕರ್ತ ಪ್ರತಾಪ ಸಿಂಹ ಅವರು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳು ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಅರಿತುಕೊಳ್ಳಬೇಕಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಜಾರಾಂ ರವರಂತಹ ಮೈಸೂರು ಸಿವಿಲ್ ಸರ್ವಿಸ್ ನಿಂದ ಪ್ರಾರಂಭವಾದ ಸೇವೆಯಿದು. ಒಬ್ಬ ಜವಾಬ್ದಾರಿ ಸೇವೆಯಲ್ಲಿರುವ ಸಂಸದರು ಹಗುರವಾಗಿ ಮಾತನಾಡಿರುವುದು ಶೋಭ ತರುವ ವಿಚಾರವಾಗಿರುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿ.ಆರ್. ಶೈಲಜಾರವರು ಒಬ್ಬ ಹಿರಿಯ ಕೆ.ಎ.ಎಸ್. ಅಧಿಕಾರಿಯಾಗಿದ್ದು, ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಇವರ ಕಾರ್ಯಶೈಲಿಯ ಬಗ್ಗೆ ಏನಾದರೂ ವಿಚಾರವಿದ್ದಲ್ಲಿ ಅದನ್ನು ತಕ್ಕ ರೀತಿಯಲ್ಲಿ ಪ್ರಸ್ತಾಪಿಸಲು ಮತ್ತು ಅದರ ಬಗ್ಗೆ ವಿಚಾರಿಸಲು ಹತ್ತು ಹಲವು ಮಾರ್ಗಗಳಿರುತ್ತವೆ. ಅದನ್ನು ಹೊರತುಪಡಿಸಿ ಶೈಲಜಾ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕ ಆಡಳಿತ ಸೇವೆಯನ್ನು ವೃಥಾ ಈ ವಿಷಯದ ಮಧ್ಯೆ ಪ್ರಸ್ತಾಪಿಸುವ ಅಗತ್ಯವಾದರೂ ಏನಿತ್ತು? ಎಂದು ಕೆಎಎಸ್ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ. ಬಿ.ಆರ್. ಹರೀಶ್ ನಾಯ್ಕ ಅವರು ಪ್ರಶ್ನಿಸಿದ್ದಾರೆ.