ಬೆಂಗಳೂರು, ಫೆ.16 www.bengaluruwire.com : ನಗರದಲ್ಲಿ ಬನಶಂಕರಿ 6ನೇ ಹಂತದಲ್ಲಿನ ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಬರುವ ದುರ್ವಾಸನೆಯಿಂದ ಬೇಸೆತ್ತು ಈ ಪ್ರದೇಶದ ಸುತ್ತಮುತ್ತಲಿನ ನಾಗರಿಕರು ಸಾಕಷ್ಟು ಆರೋಗ್ಯ ಸಮಸ್ಯೆ ಸೇರಿದಂತೆ ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಈ ಘಟಕವನ್ನು ಮುಚ್ಚಬೇಕೆಂದು ಆಗ್ರಹಿಸಿ ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಗಳವಾರದಿಂದ ಆರಂಭಿಸಿರುವ ಅನಿರ್ದಿಷ್ಟ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ.
ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಗಳವಾರ ಬೆಳಗ್ಗೆಯಿಂದಲೇ ತ್ಯಾಜ್ಯ ಸಂಸ್ಕರಣೆ ಘಟಕದ ಬಳಿ ಪ್ರತಿಭಟನೆ ಆರಂಭಿಸಿದ್ದು, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರಿಸಬೇಕು ಇಲ್ಲವೇ ಮುಚ್ಚಿ ‘ತುರಹಳ್ಳಿಯನ್ನು ಉಳಿಸಿ’ ಎಂದು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗುರುವಾರ ಬೆಂಗಳೂರು ವೈರ್ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್, “ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ ಮುಚ್ಚುವಂತೆ ಒತ್ತಾಯಿಸಿ ಸಂಘದ ಸದಸ್ಯರು, ಸ್ಥಳೀಯ ನಿವಾಸಿಗಳು ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಶಾಸಕ ಹಾಗೂ ಸಚಿವರಾದ ಎಸ್.ಟಿ.ಸೋಮಶೇಖರ್, ಕಸ ಸಂಸ್ಕರಣಾ ಘಟಕವನ್ನು ಮುಚ್ಚಲು ಅಥವಾ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆದಿದೆ. ಸದ್ಯಕ್ಕೆ ಧರಿಣಿ ಕೈಬಿಡಿ, ನಿಮ್ಮ ಸಮಸ್ಯೆಗೆ 3 ದಿನದ ಒಳಗಾಗಿ ಪರಿಹಾರ ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಬಿಬಿಎಂಪಿ ಕಡೆಯಿಂದ ಸ್ಪಷ್ಟ ನಿರ್ಧಾರ ಪ್ರಕಟಿಸುವ ತನಕ ನಮ್ಮ ಧರಣಿ ಮುಂದುವರೆಸುತ್ತೇವೆ” ಎಂದು ತಿಳಿಸಿದ್ದಾರೆ.
“ಘಟಕ ಮುಚ್ಚಿ ಅಥವಾ ಸ್ಥಳಾಂತರ ಮಾಡಿ ಎಂಬ ಬೇಡಿಕೆ ಇಟ್ಟು ಎಂಟು ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಕಳೆದ ಡಿಸೆಂಬರ್‌ನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಅವರೂ ಈ ಬಗ್ಗೆ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರು ಫೆ.9 ರಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಘಟಕ ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ. ಹೀಗಿದ್ದರೂ ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಹೋರಾಟ ನಿರಂತರವಾಗಿ ನಡೆಯಲಿದೆ. ಬಿಬಿಎಂಪಿಯವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಘಟಕ ನಿರ್ಮಿಸಿದ್ದಾರೆ. 10 ಸಾವಿರ ಮನೆಗಳಿದ್ದರೂ, ಖಾಲಿ ಜಾಗ ಎಂದು ಸುಪ್ರೀಂಕೋರ್ಟಿಗೆ ಸುಳ್ಳು ಮಾಹಿತಿ ನೀಡಿತ್ತು. ಪಾಲಿಕೆಯಿಂದ ಸ್ಪಷ್ಟ ನಿರ್ಧಾರ ಕೈಗೊಳ್ಳುವ ತನಕ ತಮ್ಮ ಧರಣಿ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ” ಎಂದು ಮಹೇಶ್ ಹೇಳಿದ್ದಾರೆ.
ಮನೆ ಕಿಟಕಿ- ಬಾಗಿಲು ತೆರೆದರೆ ದುರ್ವಾಸನೆ :
ಲಿಂಗಧೀರನ ಹಳ್ಳಿ ಬಳಿಯ ಮಧ್ಯ ಭಾಗದಲ್ಲಿ 2014ರಲ್ಲಿ ಬಿಬಿಎಂಪಿಯು ತ್ಯಾಜ್ಯ ವಿಲೇವಾರಿ ಘಟಕವನ್ನು 39,000 ಚದರ ಮೀಟರ್ ಭೂಮಿಯಲ್ಲಿ ನಿರ್ಮಾಣ ಮಾಡಿತ್ತು. ಸೂಕ್ತ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ವಹಿಸದೇ ಇರುವುದರಿಂದ ಬನಶಂಕರಿ 6ನೇ ಹಂತದಲ್ಲಿ ಒಟ್ಟು 14 ಬ್ಲಾಕ್ ಗಳಿದ್ದು, ಸುತ್ತಲಿನ 6 ರಿಂದ 10 ಕಿ.ಮೀ ತನಕ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯ ವಿಲೇವಾರಿ ವಾಸನೆಯಿಂದಾಗಿ ಇಲ್ಲಿನ ಜನರ ಜನಜೀವನ ದುಸ್ತರವಾಗಿದೆ. ದಿನನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಕಿಟಕಿ- ಬಾಗಿಲು ಮುಚ್ಚಿಯೇ ವಾಸಿಸುವಂತಾಗಿದೆ. ಹಲವರಿಗೆ ಉಸಿರಾಟದ ಸಮಸ್ಯೆ, ಅಸ್ತಮಾ ರೋಗಗಳಿಗೆ ತುತ್ತಾಗಿದ್ದಾರೆ. ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿದ್ದು ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಬನಶಂಕರಿ 6ನೇ ಹಂತದ ನಿವಾಸಿ ಸುಘೋಷ ಸ ನಿಗಳೆ ದೂರಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ 2021ರಲ್ಲಿ ಲಿಂಗಧೀರನಹಳ್ಳಿ ಪ್ಲಾಂಟ್ ಅನ್ನು ಮುಚ್ಚಲಾಯಿತು. ಹಳೆಯದಾದ ಈ ತ್ಯಾಜ್ಯ ಸಂಸ್ಕರಣದಲ್ಲಿ ತಾಂತ್ರಿಕ ದೋಷಗಳಿವೆ. ಪರಿಸರಕ್ಕೆ ಹಾನಿಯಾಗದಂತೆ ಕಾಪಾಡಿಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ಬಿಬಿಎಂಪಿಗೆ ಸೂಚಿಸಿತ್ತು. ಈ ಸಂದರ್ಭದಲ್ಲಿ ಬಿಬಿಎಂಪಿಯು ಸಮಸ್ಯೆ ಬಗೆಹರಿಸಲು ಹೆಚ್ಚಿನ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court)ಮೇಲ್ಮನವಿ ಸಲ್ಲಿಸಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಸ್ಥಾವರವನ್ನು ನಡೆಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಯಾವ ದುರಸ್ತಿ ಕ್ರಮವೂ ಕೈಗೊಳ್ಳದೆ ಬಿಬಿಎಂಪಿಯು ಕಣ್ಣಿಗೆ ಬಟ್ಟೆ ತೊಟ್ಟು ಕುರುಡರಂತೆ ವರ್ತಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ಸಂಸ್ಕರಣಾ ಘಟಕ ಮುಚ್ಚಲಾಗದು ಎಂದ ಬಿಬಿಎಂಪಿ :
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (Bangalore Solid Waste Management Ltd.)ನ ಮುಖ್ಯ ಎಂಜಿನಿಯರ್ ಆರ್.ಎಲ್ ಪರಮೇಶ್ವರಯ್ಯ, “ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಿಸಲೆಂದು ನಗರದ 7 ಕಡೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ತೆರೆಯಲಾಗಿತ್ತು. ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಳೀಯ ನಿವಾಸಿಗಳ ಆಗ್ರಹದ ಮೇರೆಗೆ ಮುಚ್ಚಿದರೆ, ಸಾರ್ವಜನಿಕರ ಹಣ ಖರ್ಚು ಮಾಡಿದ್ದು ಮಣ್ಣು ಪಾಲಾಗುತ್ತದೆ. ತಾಂತ್ರಿಕವಾಗಿ ಅಥವಾ ನಿರ್ದಿಷ್ಟ ಸಮಸ್ಯೆಗಳಿದ್ದರೆ ಅದನ್ನು ಬಿಬಿಎಂಪಿಯು ಪರಿಹಸಲಿದೆ” ಎಂದ ಅವರು ಪರೋಕ್ಷವಾಗಿ ಘಟಕ ಮುಚ್ಚಲಾಗದು ಎಂದು ತಿಳಿಸಿದ್ದಾರೆ.
ಈ ಭಾಗದಲ್ಲಿ ಘಟಕ ನಿರ್ಮಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಹಸಿರು ನಿಶಾನೆ ತೋರಿದ ನಂತರ ಘಟಕದಲ್ಲಿ ಸಂಸ್ಕರಣಾ ಕಾರ್ಯಾಚರಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಬಿಬಿಎಂಪಿಗೆ ತಿಳಿಸಿತ್ತು. ಆದರೆ ಕೆಎಸ್‌ಪಿಸಿಬಿ ಷರತ್ತುಗಳ ಅನುಸಾರ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಹಣೆ ಕೈಗೊಳ್ಳಲು ಪಾಲಿಕೆಯು ತಾತ್ಕಾಲಿಕವಾಗಿ ಘಟಕದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಫೆಬ್ರವರಿ 2022ರಲ್ಲಿ ಸ್ಥಾವರವನ್ನು ಪುನಃ ತೆರೆಯಲಾಗಿತ್ತು. ಆದರೆ, 2022ರ ನವೆಂಬರ್ ನಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬಿಬಿಎಂಪಿ ತಾನು ನಿಗದಿಪಡಿಸಿದ ಪರಿಸರ ಕಾನೂನು ಷರತ್ತುಗಳನ್ನು ಪಾಲಿಸಲು ವಿಫಲವಾಗಿದೆ ಎಂದು ದೂರಿತ್ತು.