ಬೆಂಗಳೂರು, ಫೆ.08 www.bengaluruwire.com : ಟರ್ಕಿ (Turkey) ಹಾಗೂ ಸಿರಿಯಾ (Syria)ದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪ (Earthquake) ಹಾಗೂ ನಂತರ ಸಂಭವಿಸಿದ ಸುಮಾರು 200 ಕಂಪನಗಳ ಪರಿಣಾಮ ಎರಡೂ ರಾಷ್ಟ್ರಗಳಲ್ಲಿನ ಜನತೆ ಕೊರೆಯುವ ಚಳಿ, ಬಿದ್ದು ಹೋದ ಕಟ್ಟಡಗಳ ನಡುವೆ ಜೀವಿಸುವಂತಾಗಿದೆ. ಅಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ.
ಈ ಪ್ರಬಲ ಭೂಕಂಪದಿಂದ ಈಗಾಗಲೇ 7,800ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಅಮೆರಿಕ ಭೂಸರ್ವೇಕ್ಷಣಾ ಇಲಾಖೆಯು ಎರಡೂ ರಾಷ್ಟ್ರಗಳ ಸಾವಿನ ಪ್ರಮಾಣ 11 ಸಾವಿರಕ್ಕೆ ಹೆಚ್ಚಬಹುದು ಎಂದು ಹೇಳಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಈ ಸಾವಿನ ಸಂಖ್ಯೆ 20 ಸಾವಿರ ದಾಟಬಹುದು ಎಂದು ತಿಳಿಸಿದ್ದಾರೆ. ಆದರೆ ಕಟ್ಟಡದ ಅವಶೇಷಗಳಡಿ ಇನ್ನೂ 1,80,000 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎಲ್ಲರೂ ಮೃತಪಟ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ, ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ (Karnataka Disaster Management Authority) ಫೆ.7ರಿಂದ ಸಹಾಯವಾಣಿ ಆರಂಭ ಮಾಡಿದೆ. ಘಟನೆಯ ಸಂಬಂಧ ರಾಜ್ಯ ಸರ್ಕಾರ ಭಾರತದ ರಾಯಭಾರಿ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದೆ. ನಿನ್ನೆಯಿಂದ ಸದ್ಯ ಇಲ್ಲಿ ತನಕ ಯಾವುದೇ ಕರೆ ಬಂದಿಲ್ಲ. ಕರೆ ಬಂದ ತಕ್ಷಣ ಅಗತ್ಯ ಸಹಾಯಕ್ಕೆ ತಯಾರಾಗಿದ್ದೇವೆ. ಟರ್ಕಿ ಭೂಕಂಪನ ವಿಚಾರ ಸಂಬಂಧ, ಯಾರಿಗಾದರೂ ಸಹಾಯ ಬೇಕಿದ್ದಲ್ಲಿ ತಕ್ಷಣ 080-22340676 ಸಹಾಯವಾಣಿ ನಂಬರ್ಗೆ ಕರೆ ಮಾಡಿ ಅಥವಾ [email protected] ಇಮೇಲ್ ಮುಖಾಂತರ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯ ನಿರ್ದೇಶನದ ಮೇರೆಗೆ ಸಿರಿಯಾಗೆ ಪರಿಹಾರ ಸಾಮಗ್ರಿ ಹಾಗೂ ಎರಡು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ತಂಡಗಳೊಂದಿಗೆ ತರಬೇತಿ ಪಡೆದ ಶ್ವಾನ ದಳ, ಶೋಧ ಮತ್ತು ಪರಿಹಾರ ಕಾರ್ಯಚರಣೆಗೆ ಅಗತ್ಯವಾದ ವಸ್ತುಗಳನ್ನು ಹೊತ್ತು ಟರ್ಕಿಯ ದುರಂತ ಸ್ಥಳಕ್ಕೆ ಹೋಗಿದೆ. ಇದಲ್ಲದೆ ಭಾರತೀಯ ಸೇನಾಪಡೆಯು, ಮೂಳೆ ತಜ್ಞರು, ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರು ಸೇರಿದಂತೆ ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ತಂಡವನ್ನು ಅಲ್ಲಿಗೆ ಕಳುಹಿಸಿಕೊಡಲಾಗಿದೆ. ಈ ತಂಡವು ತುರ್ತು ಚಿಕಿತ್ಸೆಗೆ ಅಗತ್ಯವಾದ ಎಕ್ಸ್ ರೇ, ವೆಂಟಿಲೇಟರ್, ಆಮ್ಲಜನಕ ಉತ್ಪಾದನಾ ಯಂತ್ರ, ಹೃದಯ ಮಿಡಿತ ವೀಕ್ಷಿಸುವ ಮಾನಿಟರ್ ಸೇರಿದಂತೆ ಹೊರಾಂಗಣದಲ್ಲಿ 30 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಲು ಅಗತ್ಯವಾದ ಸಮಾನು ಸರಂಜಾಮುಗಳೊಂದಿಗೆ ಅಲ್ಲಿಗೆ ತೆರಳಿದೆ. ಭಾರತದಿಂದ ನಿನ್ನೆ ರಾತ್ರಿಯೇ ಭಾರತೀಯ ವಾಯುಪಡೆಯ ವಿಮಾನದ ಮುಖಾಂತರ ಸಂತ್ರಸ್ತರ ನೆರವಿಗಾಗಿ ಪರಿಹಾರ ಸಾಮಗ್ರಿ, ಜೀವ ರಕ್ಷಣ ಔಷದಿಗಳು ಹಾಗೂ ತುರ್ತು ಔಷಧಿಗಳನ್ನು ಸಿರಿಯಾಗೆ ಕೊಂಡೊಯ್ದಿದೆ.
ಟರ್ಕಿಯಲ್ಲಿ 3 ತಿಂಗಳು ತುರ್ತು ಪರಿಸ್ಥಿತಿ ಘೋಷಣೆ :
ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ನಲುಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ಮೂರು ತಿಂಗಳ ತುರ್ತು ಪರಿಸ್ಥಿತಿ ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಭೂಕಂಪದಿಂದಾಗಿ ಕನಿಷ್ಠ 20,426 ಜನ ಗಾಯಗೊಂಡಿದ್ದಾರೆ ಮತ್ತು 5,775 ಕಟ್ಟಡಗಳು ಧರೆಗುರುಳಿವೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪನದಿಂದ ಸಿರಿಯಾದ ಅಲೆಪ್ಬೊ ಹಾಗೂ ಹಮಾನಗರ ಮತ್ತು ಟರ್ಕಿಯ ದಿಯಾರ್ ಬಕೀರ್ ವರೆಗೆ ಸಾವಿರಾರು ಕಟ್ಟಡಗಳು ಕುಸಿದು ಬಿದ್ದಿದೆ. ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಗಳು ಧರೆಗುರುಳಿದೆ. 24,400ಕ್ಕೂ ಹೆಚ್ಚು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಏಜನ್ಸಿಯು ತಿಳಿಸಿದೆ.
ದಶಕದಲ್ಲೇ ಅತಿದೊಡ್ಡ ಭೂಕಂಪ :
ಸೋಮವಾರ ಟರ್ಕಿಯಲ್ಲಿ ಸಂಭವಿಸಿದ ಭೂಕಂಪವು ದಶಕದಲ್ಲೇ ಸಂಭವಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪವಾಗಿದೆ ಎಂದು ಟರ್ಕಿ ದೇಶದ ಅಧ್ಯಕ್ಷರು ತಿಳಿಸಿದ್ದು, ಭೂಕಂಪ ಶಾಸ್ತ್ರಜ್ಞರು ಈ ಭೂಕಂಪ ಟರ್ಕಿಯಲ್ಲಿ ಈವರೆಗೆ ಸಂಭವಿಸಿದ ಭೂಕಂಪಗಳ ಪೈಕಿ ಅತಿ ದೊಡ್ಡದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಧನ್ಯವಾದ ತಿಳಿಸಿದ ಟರ್ಕಿ :
ಕಳೆದ 24 ಗಂಟೆಗಳಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪದಿಂದ ತತ್ತರಿಸಿರುವ ತನ್ನ ದೇಶದ ನೆರವಿಗೆ ಧಾವಿಸಿದ ಭಾರತಕ್ಕೆ ಟರ್ಕಿ ದೇಶ ಧನ್ಯವಾದವನ್ನು ಅರ್ಪಿಸಿದೆ. ದೇಶಕ್ಕೆ ಹಣವನ್ನು ಒದಗಿಸಿದ ಉದಾರತೆಗಾಗಿ ಭಾರತವನ್ನು ಕೊಂಡೊಡುತ್ತಾ, ಭಾರತದಲ್ಲಿನ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ನವದೆಹಲಿಗೆ ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಅಗತ್ಯ ಕಾಲದಲ್ಲಿ ನೆರವಿಗೆ ಬಂದವನೇ ನಿಜವಾಗಿಯೂ ಸ್ನೇಹಿತ ಎಂದು ಹೇಳಿದ್ದಾರೆ.
ಆನ್ ಲೈನ್ ಕ್ಯಾಮರಾದಲ್ಲಿ ಸೆರೆಯಾಯ್ತು ಭೂಕಂಪನ ದೃಶ್ಯ :
ಟರ್ಕಿಯಲ್ಲಿ ಭೂಕಂಪನ ಸಂಭವಿಸುವ ಸಂದರ್ಭದಲ್ಲಿ ಕುಟುಂಬವೊಂದು ಮನೆಯೊಳಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಆನ್ ಲೈನ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.