ಬೆಂಗಳೂರು, ಫೆ.5 www.bengaluruwire.com : ಕರ್ನಾಟಕದ ಜನತೆಗೆ ಒಂದು ಸಂತಸದ ಸುದ್ದಿ. ದಶಕಗಳಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದರು, ನಾಡದೇವತೆಯ ಭಾವಚಿತ್ರ ಯಾವುದೆಂಬುದರ ಬಗ್ಗೆ ಸ್ಪಷ್ಟತೆಯಿರದೆ ಗೊಂದಲ ಏರ್ಪಟಿತ್ತು. ಏಕೀಕೃತವಾದ ಒಂದು ಅಧಿಕೃತ ನಾಡದೇವತೆಯ ಚಿತ್ರವಿಲ್ಲದಿರುವುದೇ ಇದಕ್ಕೆ ಕಾರಣವಾಗಿತ್ತು. ಕೊನೆಗೂ ರಾಜ್ಯ ಸರ್ಕಾರ ಇದಕ್ಕೆ ಇತಿಶ್ರೀ ಹಾಡಿದೆ.
ಚಿತ್ರ ಕಲಾವಿದ ಕೆ.ಸೋಮಶೇಖರ್ ಅವರು ಬಿಡಿಸಿದ ‘ನಾಡದೇವಿ’ಯ ಚಿತ್ರವನ್ನು ರಾಜ್ಯದ ಅಧಿಕೃತ ನಾಡದೇವಿಯ ಚಿತ್ರವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ನಾಡದೇವಿ ಚಿತ್ರವನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡಲು ಲಲಿತಕಲಾ ಅಕಾಡೆಮಿ ಅಂದಿನ ಅಧ್ಯಕ್ಷರಾಗಿದ್ದ ಡಿ.ಮಹೇಂದ್ರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.
ಈ ಸಮಿತಿಯು ಕೂಲಂಕುಷವಾಗಿ ಎಲ್ಲಾ ರೀತಿಯಲ್ಲೂ ಪರಿಶೀಲಿಸಿ, ನಾಡಿನ ಸಾಂಪ್ರದಾಯಿಕ ಕಲೆ ಮತ್ತು ನಾಡಗೀತೆಯಲ್ಲಿರುವ ಪ್ರಮುಖ ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ಕಲಾವಿದ ಸೋಮಶೇಖರ್ ರಚಿತ ‘ನಾಡದೇವಿ’ಯ ಚಿತ್ರವನ್ನೇ ಅಧಿಕೃತಗೊಳಿಸುವಂತೆ ಸಮಿತಿಯು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿಗೆ ಈಗ ಸರ್ಕಾರ ಅಧಿಕೃತವಾಗಿ ತನ್ನ ಅನುಮೋದನೆ ನೀಡಿದೆ. ಹೀಗೆ ಸರ್ಕಾರ ಅಧಿಕೃತಗೊಳಿಸಿರುವ ನಾಡದೇವಿ ಚಿತ್ರದ ಹಿಂದೆ ಕರ್ನಾಟಕದ ನಕ್ಷೆ ಹಾಗೂ ಬಾವುಟವಿದೆ. ನಾಡದೇವಿಯ ಪಾದದ ಕೆಳಗೆ ಕಮಲದ ಹೂವಿದೆ.
ಕಲಾವಿದ ಕೆ.ಸೋಮಶೇಖರ್ ಬಿಡಿಸಿದ ತೈಲವರ್ಣ ಚಿತ್ರದಲ್ಲಿ ಭುವನೇಶ್ವರಿಯ ತಾಯಿ ಹಿಂಬದಿಯಲ್ಲಿ ರಾಜ್ಯದ ಸಂಸ್ಕೃತಿ, ಇತಿಹಾಸ ಹಾಗೂ ಭಾಷೆಯ ಸಂಕೇತಿಸುವ ಕರ್ನಾಟಕ ನಕ್ಷೆಯನ್ನು ಹೊಂದಿರುವ ‘ನಾಡದೇವಿ’ಯ ಚಿತ್ರ ಇನ್ನು ಮುಂದೆ ಅಧಿಕೃತವಾಗಿ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ರಾರಾಜಿಸಲಿದೆ. ಅದೇ ರೀತಿ ಕನ್ನಡಿಗರಿಗೆ ಅಧಿಕೃತವಾಗಿ ನಾಡದೇವತೆಯ ಚಿತ್ರ ಲಭಿಸಿದಂತಾಗಿದೆ. ‘ನಾಡದೇವಿ’ಯ ಚಿತ್ರವು ಕರ್ನಾಟಕ ರಾಜ್ಯದ ಇತಿಹಾಸ, ಪರಂಪರೆ, ನೈತಿಕತೆಯಿಂದ ಹಿಡಿದು ಇಂದಿನ ತನಕದ ದಿನವನ್ನು ಪರಿಗಣನೆಗೆ ತೆಗೆದುಕೊಂಡು ಚಿತ್ರ ಕಲಾವಿದ ಕೆ.ಸೋಮಶೇಖರ್ ಅವರು ಈ ಚಿತ್ರವನ್ನು ಬಿಡಿಸಿದ್ದರು.
ರಾಜ್ಯದಲ್ಲಿ ಹಲವು ಸಂದರ್ಭಗಳಲ್ಲಿ ನಾಗರೀಕರು ನಾಡದೇವತೆ ಭುವನೇಶ್ವರಿಯನ್ನು ದುರ್ಗೆ, ದೇವಿ, ಸರಸ್ವತಿ ಅಥವಾ ಇತರ ದೇವಿಯಂತೆ ಚಿತ್ರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ಒಂದೇ ನಾಡದೇವತೆಯ ಭಾವಚಿತ್ರವನ್ನು ಸಂಕೇತಿಸುವ ಚಿತ್ರವನ್ನು ಅಧಿಕೃತಗೊಳಿಸುವಂತೆ ಸರ್ಕಾರಕ್ಕೆ ಮನವಿ ಬಂದಿದ್ದವು. ಈ ಹಿನ್ನಲೆಯಲ್ಲಿ 2021ರ ಸೆಪ್ಟೆಂಬರ್ ನಲ್ಲಿ ಸರ್ಕಾರವು ಲಲಿತಾ ಕಲಾ ಅಕಾಡೆಮಿ ಅಂದಿನ ಅಧ್ಯಕ್ಷರಾಗಿದ್ದ ಡಿ.ಮಹೇಂದ್ರ ಅಧ್ಯಕ್ಷತೆಯಲ್ಲಿ ಐವರು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಕಲಾವಿದೆ ಮತ್ತು ತಜ್ಞರಾದ ಚೂಡಾಮಣಿ ನಂದಗೋಪಾಲ್, ಎಚ್.ಎಚ್.ಮ್ಯಾದರ್, ಬಾಬು ನಡೋನಿ ಹಾಗೂ ವಿ.ಎಸ್.ಕಡೆಮಣಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಸತತ ಒಂದು ವರ್ಷಗಳ ಸುಧೀರ್ಘ ಕಾಲ ಚರ್ಚೆ ನಡೆಸಿ ನಾಡದೇವಿಯ ಚಿತ್ರವನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.