ಬೆಂಗಳೂರು, ಫೆ.4 www.bengaluruwire.com : ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ದೊಡ್ಡ ಪರದೆಯ ಮೇಲೆ ಹೊಸ ಹೊಸ ಚಲನಚಿತ್ರಗಳು ಬರ್ತಾನೆ ಇರುತ್ತೆ. ಅದರ ಮಧ್ಯೆ ವಿಭಿನ್ನ ಕಥೆ, ಪ್ರಯೋಗದ ಮೂಲಕ ಚಿತ್ರರಸಿಕರನ್ನು ಸೆಳೆಯುವ ಸಿನಿಮಾಗಳು ತೆರೆ ಕಾಣುತ್ತವೆ. ಕಿರುಚಿತ್ರಗಳು ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
ಸೋಶಿಯಲ್ ಮೀಡಿಯಾ ತನ್ನ ಪ್ರಭಾವ ಹೆಚ್ಚಿಸಿಕೊಂಡ ಮೇಲಂತೂ ಹೊಸ ಹೊಸ ಕಿರುಚಿತ್ರಗಳು ಜನರ ಮನಸ್ಸನ್ನು ಸೆಳೆಯುತ್ತಿದೆ. ಆ ಮೂಲಕ ಕಿರುಚಿತ್ರಗಳಿಂದ ದೊಡ್ಡ ಪರದೆಯ ಚಲನಚಿತ್ರಗಳಿಗೆ ಹೊಸ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ. ಇದೀಗ ಫೆ.3ರಂದು ಯೂಟ್ಯೂಬ್ ನಲ್ಲಿ ವಿ.ಎಸ್.ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ‘ನಮ್ ಏರಿಯಾ ಹೀರೋ’ ಕಿರುಚಿತ್ರ ತೆರೆ ಕಂಡಿದೆ. ಹೀಗೆ ತೆರೆಕಂಡ ನಂತರ ಫೆ.4ರ ಮಧ್ಯಾಹ್ನದ ವೇಳೆಗಾಗಲೇ 27,608 ಮಂದಿ ಈ ಕಿರುಚಿತ್ರವನ್ನು ನೋಡಿದ್ದಾರೆ.
ಒಬ್ಬ ಸಾಮಾನ್ಯ ವರ್ಗದ ಯುವಕನೊಬ್ಬ ತಾನು ಸಿನಿಮಾ ರಂಗದಲ್ಲಿ ಹೀರೋ ಆಗಿ ಮಿಂಚಬೇಕು ಎಂದು ಆಸೆಯಿಟ್ಟುಕೊಂಡು ಪ್ರಯತ್ನ ನಡೆಸುತ್ತಿರುವಾಗಲೇ ಪ್ರೀತಿಯ ಮೋಹದಲ್ಲಿ ಸಿಲುಕಿಯೂ ಕೊನೆಗೂ ಒಂದೆಡೇ ಪ್ರೀತಿ ಮತ್ತೊಂದು ಕಡೆ ತನ್ನ ನಟನಾಗುವ ಕನಸು ಎರಡೂ ನನಸಾಗಿ ಯಶಸ್ವಿಯಾಗುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಈ ಶಾರ್ಟ್ ಫಿಲಮ್ ಕೇವಲ 15.54 ನಿಮಿಷದ ಅವಧಿಯದ್ದಾದರೂ, 2.30 ನಿಮಿಷ ಒಂದು ಹಾಡನ್ನು ಈ ಕಿರುಚಿತ್ರ ಹೊಂದಿರೋದು ವಿಶೇಷ. ಇದೇ ಮೊದಲ ಬಾರಿಗೆ ಶಾರ್ಟ್ ಫಿಲಂನಲ್ಲಿ ಇಂತಹ ಪ್ರಯತ್ನ ನಡೆಸಲಾಗಿದೆ ಎಂದು ಚಿತ್ರ ನಿರ್ಮಿಸಿದ ತಂಡ ಹೇಳಿಕೊಂಡಿದೆ.
ಈ ಚಿತ್ರದ ನಾಯಕ ನಟನಾಗಿ ದಿನೇಶ್, ಕಿರುಚಿತ್ರದ ನಟಿಯಾಗಿ ರೂಪಶೆಟ್ಟಿ ಅಭಿನಯಿಸಿದ್ದಾರೆ. ‘ನಮ್ ಏರಿಯಾ ಹೀರೋ’ ಕಿರುಚಿತ್ರಕ್ಕೆ ದಿಲೀಪ್ ನಿರ್ದೇಶಕರಾಗಿ, ಮಂಜುಳಾ ವಸಂತ್ ನಿರ್ಮಾಪಕರಾಗಿದ್ದರೆ, ಉಪ ನಿರ್ದೇಶಕ ರೋಹಿತ್ ಶಂಕರ್, ಕೊರಿಯೋಗ್ರಫರ್ ರಾಜ್ ಕಿಶೋರ್ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಅವತಾರ್ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಸಲಾಗಿದೆ.
ಉಳಿದಂತೆ ತಾರಾಗಣದಲ್ಲಿ, ದಿಲೀಪ್, ಗುರು, ನಿತಿನ್, ಬಸವರಾಜ್, ರಮೇಶ್, ಶಶಿ, ವರುಣ, ವಿಷ್ಣು, ಅಭಿಷೇಕ್, ಸುಮನ್ ಮತ್ತಿತರರು ಅಭಿನಯಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪಾತ್ರಗಳಲ್ಲಿ ತನ್ಮಯತೆಯಿಂದ ಅಭಿಯನಯಿಸಿ, ಒಂದು ದೊಡ್ಡ ಪರದೆಯ ಸಿನಿಮಾದಲ್ಲಿ ಕೆಲಸ ಮಾಡಿದಂತೆ ನಟಿಸಿದ್ದಾರೆ. ಎಲ್ಲೂ ಕೂಡ ನೋಡುಗರಿಗೆ ಇದೊಂದು ಕಿರುಚಿತ್ರ ಅಂತ ಅನಿಸದಂತೆ ಈ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.
ಫೆ.3ರಂದು ಸಂಜೆ 5 ಗಂಟೆಗೆ ನಿಂಗರಾಜ್ ಸಿಂಗಡಿ ಯೂಟ್ಯೂಬ್ ಚಾನಲ್ (Youtube) ನಲ್ಲಿ ‘ನಮ್ ಏರಿಯಾ ಹೀರೋ’ ಕಿರುಚಿತ್ರ ಅಪಲೋಡ್ ಆಗಿದೆ. ಇತ್ತೀಚೆಗೆ ನಡೆದ ಪ್ರಿಮಿಯರ್ ಶೋನಲ್ಲಿ ಕಲಾವಿದರು, ಚಿತ್ರರಸಿಕರು ಈ ಕಿರುಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಂದಹಾಗೆ ‘ನಮ್ ಏರಿಯಾ ಹೀರೋ’ ಕಿರುಚಿತ್ರದ ನಾಯಕ ದಿನೇಶ್ ಅಲಿಯಾಸ್ ದಿನಿ ಮೂಲತಃ ನೆಲಮಂಗದವರು. ಬಿಇ ಮೆಕಾನಿಕಲ್ ಎಂಜಿನಿಯರಿಂಗ್ ಓದು ಮುಗಿಸುವ ಹಂತದಲ್ಲಿ ಸಿನಿಮಾ ರಂಗದಲ್ಲಿ ನಾಯಕನಾಗಬೇಕು ಎಂದು ಕನಸು ಹೊತ್ತುಕೊಂಡು ಬಂದವರು. ಈಗಾಗಲೇ ಬಿಸ್ಕೇಟ್, ಚಾಕ್ಲೇಟ್ ಹಲ್ವಾ, ಚುರ್ ಮುರಿಯಂತಹ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಿರುಚಿತ್ರಗಳೆಲ್ಲವೂ ಯುಟ್ಯೂಬ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇವುಗಳು ಹಾಸ್ಯಪ್ರಧಾನವಾಗಿದ್ದರೆ, ‘ನಮ್ ಏರಿಯಾ ಹೀರೋ’ ಕಿರುಚಿತ್ರ ಪೂರ್ಣ ಪ್ರಮಾಣದ ಚಲನಚಿತ್ರದ ರೀತಿಯಲ್ಲಿ ಚಿತ್ರ ನಿರ್ಮಿಸುವ ಪ್ರಯತ್ನ ನಡೆಸಿದ್ದಾರೆ. ಈ ಚಿತ್ರದ ಪೋಸ್ಟರ್ ಅನ್ನು ಇತ್ತೀಚೆಗೆ 20ಕ್ಕೂ ಅಧಿಕ ಸೆಲೆಬ್ರೆಟಿಗಳು ಬಿಡುಗಡೆ ಮಾಡಿ, ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಾಕಿಕೊಳ್ಳುವ ಮೂಲಕ ಸಿನಿಮಾಗೆ ಬೆಂಬಲ ನೀಡಿದ್ದರು.
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.