ಬೆಂಗಳೂರು/ಹಾವೇರಿ, ಫೆ.1 www.bengaluruwire.com : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ಷ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನಿಂದ ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮಕ್ಕೆ ಆಗಮಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ. ಮಧ್ಯ ಕರ್ನಾಟಕದ ಬರಗಾಲ ಪೀಡಿತ, ಬಿಸಿಲು ಪ್ರದೇಶದ ನಾಡಿಗೆ ಒಂದು ಲಕ್ಷಕ್ಕಿಂತ ಹೆಕ್ಟರ್ ಪ್ರದೇಶಕ್ಕೆ ನೀರಾವರಿ, ಕುಡಿಯುವ ನೀರಿನ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಬಹಳ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಹೀಗಾಗಿ 5300 ಕೋಟಿ ರೂ. ನೀಡಿದ್ದು ಸ್ವಾಗತಾರ್ಹ ಎಂದರು.
ಕರ್ನಾಟಕದ ಹಲವಾರು ಯೋಜನೆಗಳಲ್ಲಿ ಇದು ಮೊದಲ ರಾಷ್ಟ್ರೀಯ ಯೋಜನೆ. ಈ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಅನುದಾನ ಘೋಷಣೆ ಮಾಡಿದ್ದು ಸಂತಸದ ಸಂಗತಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೇಂದ್ರ ಸರ್ಕಾರದ 2023-24ನೇ ಬಜೆಟ್ ಜನಸ್ನೇಹಿ ಬಜೆಟ್ ಮಾಡಿದ್ದಾರೆ. ಉಳಿತಾಯಕ್ಕೆ ಹೆಚ್ಚು ಒತ್ತು ಕೊಡದೆ, ವೆಚ್ಚ ಆಧಾರಿತ ಹಾಗೂ ಅಭಿವೃದ್ಧಿ ಆಧಾರಿತ ಬಜೆಟ್ ಅನ್ನಬಹುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಯ ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಫ್ ಕೆಸಿಸಿಐ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡಿದ್ದಾರೆ. ಕೃಷಿಯಲ್ಲಿ ಕರ್ನಾಟಕ ಭದ್ರ ಮೇಲ್ದಂಡೆ ಯೋಜನೆಗಾಗಿ 5,300 ಕೋಟಿ ರೂ. ಮೀಸಲಿಟ್ಟಿದ್ದಾರೆ. ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡಿದೆ. ಸಿರಿಧಾನ್ಯಗಳ ಸಂಸ್ಕರಣಾ ಕೈಗಾರಿಕೆಗಳಿಗೆ ಸಬ್ಸೀಡಿ, ತೆರಿಗೆ ವಿನಾಯಿತಿ ನೀಡಿದರೆ ಸ್ಥಳೀಯ ಉದ್ಯೋಗ ಸೃಷ್ಟಿಗೆ ಅವಕಾಶ ಕೊಟ್ಟಿದೆ.
ಶೈಕ್ಷಣಿಕ ಅದರಲ್ಲೂ ಕೈಗಾರಿಕೆಗಳ ಆಧಾರಿತ ಕೌಶಲ್ಯ ಅಭಿವೃದ್ಧಿ ಅವಶ್ಯಕವಾಗಿದೆ. ಇದಕ್ಕೆ ಒತ್ತುಕೊಟ್ಟು ಮಾಡಿದರೆ ಅನುಕೂಲ. ನಮ್ಮ ಚೆನ್ನೈ- ಮುಂಬೈ ಕಾರಿಡಾರ್ ಕೈಗಾರಿಕೆಗಳ ಅವಶ್ಯಕತೆಗೆ ಅನುಕೂಲವಾಗಿದೆ. ರಾಜ್ಯಕ್ಕೆ ಕೋರ್ ಸಂಪರ್ಕ ಇಲ್ಲ. ರಫ್ತುಗೆ ಇದು ಅವಶ್ಯಕ. ಬಂದರು ಸಂಪರ್ಕಕ್ಕೆ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಈ ಬಾರಿಯ ಬಜೆಟ್ ನಲ್ಲಿ ಸಂಪೂರ್ಣ ನೋಡಬೇಕು.
ಸ್ಥಳೀಯವಾಗಿ ನಮ್ಮ ಕರಾವಳಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಕೇಂದ್ರವು ಸ್ಥಳೀಯ ಪ್ರವಾಸಕ್ಕೆ ಒತ್ತುಕೊಟ್ಟಿದೆ. ಇದು ಸ್ವಾಗತಾರ್ಹ. ಕೈಗಾರಿಕೆಗಳು ಸರ್ಕಾರ ಮಟ್ಟದಲ್ಲಿ 39,000 ಅನುಸರಣೆಗಳನ್ನು ತೆಗೆದು ಹಾಕಿದ್ದು, ಸುಲಭವಾಗಿ ವ್ಯಾಪಾರ, ವ್ಯವಹಾರ ನಡೆಸಲು ಅನುಕೂಲವಾಗಿದೆ. ಒಟ್ಟಾರೆ ಈ ಬಜೆಟ್ ಗೆ 10 ಅಂಕಗಳಿಗೆ 7 ಅಂಕವನ್ನು ಈ ಬಜೆಟ್ ಗೆ ನೀಡಬಹುದು ಎಂದು ಎಫ್ ಕೆಸಿಸಿ ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಭೀತಿಯ ನಡುವೆ ನಮ್ಮ ದೇಶದ ಬೆಳವಣಿಗೆಗೆ ಅಗತ್ಯವಾದ ಕೃಷಿ, ಮೂಲಭೂತ ಸೌಕರ್ಯ, ಆರೋಗ್ಯ, ಹಸಿರು ಇಂಧನಕ್ಕೆ ಒತ್ತು ನೀಡಿದ್ದಾರೆ. ಮಧ್ಯಮ ವರ್ಗದ ವೇತನದಾರರಿಗೆ ತೆರಿಗೆದಾರರಿಗೆ ವಾರ್ಷಿಕ 7 ಲಕ್ಷದ ವರೆಗೆ ಸ್ವಲ್ಪ ರಿಲೀಫ್ ನೀಡಿದೆ. ಇದರಿಂದ ಸರಾಸರಿ 25 ರಿಂದ 50 ಸಾವಿರ ರೂ. ಉಳಿತಾಯ ಮಾಡಬಹುದು ಎಂದು ಎಫ್ ಕೆಸಿಸಿಐ ಉಪಾಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.
ಎಫ್ ಕೆಸಿಸಿಐ ಉಪಾಧ್ಯಕ್ಷರಾದ ಎಂ.ಜಿ.ಬಾಲಕೃಷ್ಣ, ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.