ನವದೆಹಲಿ, ಜ.30 www.bengaluruwire.com : ಪ್ರತಿಕೂಲ ಹವಾಮಾನದ ನಡುವೆಯೂ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭವು ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಅದಾದ ಬಳಿಕ ಕ್ರೀಡಾಂಗಣದಲ್ಲಿ ರ್ಯಾಲಿ ನಡೆಯಿತು.
ಕಾಶ್ಮೀರಿ ಉನ್ನತ ನಾಯಕರು, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ ಅವರು ಭಾರೀ ಹಿಮಪಾತದ ನಡುವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರ್ಯಾಲಿಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನ ಪ್ಯಾನ್ ಇಂಡಿಯಾ ಪಾದಯಾತ್ರೆಯ ಸಮಾರೋಪ ಸಮಾರಂಭದ ಭಾಗವಾಗಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 135 ದಿನಗಳ ಸುದೀರ್ಘ ಯಾತ್ರೆಯ ಅಂತ್ಯವನ್ನು ಗುರುತಿಸಲು ಶೇರ್-ಐ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಮೆಗಾ ರ್ಯಾಲಿಯನ್ನು ಆಯೋಜಿಸಿತ್ತು.
ಭಾರತ್ ಜೋಡೋ ಯಾತ್ರೆಯ ಅಂತಿಮ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಶ್ಮೀರದಲ್ಲಿ ನನ್ನ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿತ್ತು ಆದರೆ, “ಇಲ್ಲಿನ ಜನರು ನನಗೆ ಹ್ಯಾಂಡ್ ಗ್ರೆನೇಡ್‌ಗಳನ್ನು ನೀಡಲಿಲ್ಲ ಆದರೆ ಹೃದಯದಲ್ಲಿ ಪ್ರೀತಿಯನ್ನು ತುಂಬಿದ್ದಾರೆ” ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸದಸ್ಯರು ಭಯಭೀತರಾಗಿರುವುದರಿಂದ ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯನ್ನು ನೆನಪಿಸಿಕೊಳ್ಳುವಾಗ ಯಾರನ್ನಾದರೂ ಕಳೆದುಕೊಂಡ ನೋವಿನ ಬಗ್ಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯಲ್ಲಿ ಅಲ್ಲಿನ ಜನರು ತಮ್ಮ ಸಂಬಂಧಿಕರನ್ನು ಕಳೆದುಕೊಂಡವರ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರು. ಈ ಸಂದರ್ಭವನ್ನು ಗುರುತಿಸಲು ಅವರು ಸಾಂಪ್ರದಾಯಿಕ ಕಾಶ್ಮೀರಿ ಫೆರಾನ್ ಧರಿಸಿದ್ದರು.
“ನಾನು ಯಾತ್ರೆಯನ್ನು ನನಗಾಗಲಿ ಅಥವಾ ಕಾಂಗ್ರೆಸ್‌ಗಾಗಿ ಮಾಡಿಲ್ಲ, ದೇಶದ ಅಡಿಪಾಯವನ್ನು ನಾಶಮಾಡುವ ಸಿದ್ಧಾಂತದ ವಿರುದ್ಧ ನಿಲ್ಲುವ ಗುರಿಯಾಗಿದೆ” ಎಂದು ಹೇಳಿದರು.
21 ಪಕ್ಷಗಳ ಪೈಕಿ 12 ಪಕ್ಷಗಳು ರ್ಯಾಲಿಯಲ್ಲಿ ಭಾಗಿ :
ಇಡೀ ಕಾಂಗ್ರೆಸ್ ನಾಯಕತ್ವದ ಹೊರತಾಗಿ, ವಿರೋಧ ಪಕ್ಷಗಳ ಹನ್ನೆರಡು ನಾಯಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಆದಾಗ್ಯೂ, ಹಿಮಪಾತವು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುವಂತ ಸಂದರ್ಭ ಎದುರಾಗಿತ್ತು. ಅಲ್ಲದೆ ವಿಮಾನ ಸಂಚಾರಕ್ಕೂ ಅಡ್ಡಿಯಾಗಿತ್ತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯ ಅಂತಿಮ ಯಾತ್ರೆಗೆ ಆಗಮಿಸುವ ನಿರೀಕ್ಷೆಯಿದ್ದ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸಲು ಸಾಧ್ಯವಾಗಲಿಲ್ಲ.
ಹಿಮಪಾತದಿಂದ ಗೋಚರತೆ ಪ್ರಮಾಣ ಕಡಿಯಿತ್ತು ಮತ್ತು ನಿರಂತರ ಹಿಮಪಾತವು ಶ್ರೀನಗರಕ್ಕೆ ಎಲ್ಲಾ ವಿಮಾನಗಳನ್ನು ವಿಳಂಬಗೊಳಿಸಿದೆ ಎಂದು ಶ್ರೀನಗರದ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ರಿಷಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ವಿಸ್ತಾರಾ ಏರ್‌ಲೈನ್ಸ್ ದೆಹಲಿಯಿಂದ ಶ್ರೀನಗರಕ್ಕೆ ತನ್ನ ಎರಡೂ ವಿಮಾನಗಳನ್ನು ದಿನದ ಮಟ್ಟಿಗೆ ರದ್ದುಗೊಳಿಸಿದೆ.
ಸಮಾರಂಭಕ್ಕೆ 21 ಪಕ್ಷಗಳನ್ನು ಆಹ್ವಾನಿಸಲಾಗಿತ್ತು, ಆದರೆ ಕೆಲವರು ಭದ್ರತೆಯ ಕಾರಣದಿಂದ ಹಾಜರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಟಿಡಿಪಿ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ಭಾನುವಾರ ಲಾಲ್ ಚೌಕ್ ಪ್ರದೇಶದಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ “ಪಾದಯಾತ್ರೆ” ಮುಕ್ತಾಯಗೊಂಡಿತು. ಆದರೆ ಹಿಮಪಾತಕ್ಕೆ ಸಾಕ್ಷಿಯಾಗಿರುವ ಶ್ರೀನಗರದಲ್ಲಿ ಸೋಮವಾರ ಅಧಿಕೃತ ಸಮಾರೋಪ ನಡೆಯಿತು.
ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಉದ್ಧವ್ ಠಾಕ್ರೆ ಅವರ ಶಿವಸೇನೆ, ಸಿಪಿಐ(ಎಂ), ಸಿಪಿಐ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕೇರಳ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಮತ್ತು ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ ) 12 ಪಕ್ಷಗಳು ಪಾಲ್ಗೊಳ್ಳುವುದನ್ನು ದೃಢಪಡಿಸಿದ್ದವು.
ಅಂತೂ ಸಂಪನ್ನಗೊಂಡಿತು 3,970 ಕಿ.ಮೀ ಯಾತ್ರೆ :
ದೇಶದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ ಕಾಶ್ಮೀರ ತನಕದ ಯಾತ್ರೆಯು ಸೆಪ್ಟೆಂಬರ್ 7 ರಂದು ಪ್ರಾರಂಭವಾಯಿತು ಮತ್ತು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 136 ದಿನಗಳಲ್ಲಿ 3,970 ಕಿಮೀ ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಕೊನೆಗೊಂಡಂತಾಗಿದೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಸಭೆಗಳು ಮತ್ತು 13 ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಅವರು 275 ಕ್ಕೂ ಹೆಚ್ಚು ಯೋಜಿತ ನಡಗೆಯ ಮೂಲಕ ಜನರೊಂದಿಗೆ ಸಂವಹನಗಳನ್ನು ಮತ್ತು 100 ಕ್ಕೂ ಹೆಚ್ಚು ಕುಳಿತುಕೊಂಡು ಸಂವಹನಗಳನ್ನು ನಡೆಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು ಮತ್ತು ಭಾರತ್ ಜೋಡೋ ಯಾತ್ರೆಯ ಸ್ಮಾರಕವನ್ನು ಅನಾವರಣಗೊಳಿಸಿದರು. ಬಳಿಕ ರ್ಯಾಲಿ ನಡೆಯಿತು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯು ದಕ್ಷಿಣದಿಂದ ಉತ್ತರಕ್ಕೆ ಸಾಗಿದೆ, ಆದರೆ ಇದು ದೇಶಾದ್ಯಂತ ಪರಿಣಾಮ ಬೀರಿದೆ ಮತ್ತು ಈ ಯಾತ್ರೆಯು ದೇಶಕ್ಕೆ ಪರ್ಯಾಯ ದೃಷ್ಟಿಕೋನವನ್ನು ನೀಡಿದೆ ಎಂದು ಪ್ರತಿಪಾದಿಸಿದರು.
ಹಿಮಪಾತಕ್ಕೆ ಮಾರುಹೋದ ಡಿ.ಕೆ.ಶಿವಕುಮಾರ್ :
ಭಾರತ್ ಜೋಡೋ ಯಾತ್ರೆಯ ಸಮರೋಪ ಸಮಾರಂಭಕ್ಕೆ ಶ್ರೀನಗರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಮಾಜಿ ಸಚಿವರಾದ ಕೆ.ಜೆ.ಜಾರ್ಜ್ ಅವರ ಜೊತೆ ಕೊಡೆ ಹಿಡಿದು ವಿಡಿಯೋವೊಂದರಲ್ಲಿ ಮಾತನಾಡಿದ್ದು ಹೀಗೆ, ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದೇವೆ. ದೇಶವನ್ನು ಒಗ್ಗೂಡಿಸಿ, ದೇಶದ ಐಕ್ಯತೆಗೆ ರಾಹುಲ್ ಗಾಂಧಿ ಅವರು ಆರಂಭಿಸಿದ ಯಾತ್ರೆಗೆ ಇಂದು ಅಂತಿಮ ದಿನವಾಗಿದೆ.
“ರಾಹುಲ್ ಗಾಂಧಿಯವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಊಟ ಮುಗಿಸಿ, ನಮ್ಮ ಕೋಣೆಗೆ ಬಂದು ಮಲಗುವಷ್ಟರಲ್ಲಿ ರಾತ್ರಿ 1 ಗಂಟೆಯಾಗಿತ್ತು. ರಾತ್ರಿ ಇಲ್ಲಿನ ತಾಪಮಾನ ಕೇವಲ 9 ಡಿಗ್ರಿ ಸೆಲ್ಸಿಯಸ್ ಇತ್ತು. ಬೆಳಗಿನ ಜಾವ 2 ಗಂಟೆ ನಂತರ ಹಿಮ ಸುರಿಯಲು ಆರಂಭವಾಗಿದ್ದು, ಇಡೀ ಪ್ರದೇಶ ಹಿಮದಿಂದ ತುಂಬಿ ಹೋಗಿದೆ. ಇಂದು ಬೆಲಗ್ಗೆ ಕೊಠಡಿಯ ಹೊರಗೆ ಬಂದು ನೋಡಿದಾಗ ನನ್ನ ಜೀವನದಲ್ಲಿ ಎಂದೂ ನೋಡಿರದ ಹಿಮಪಾತ ಹಾಗೂ ಇಲ್ಲಿನ ಸೌಂದರ್ಯ ನನ್ನ ಮನಸೂರೆಗೊಂಡಿದೆ. ಧಾರಕಾರ ಮಳೆಯಂತೆ ಹಿಮ ಸುರಿಯುತ್ತಿದೆ. ಹಿಂದೆಂದೂ ನಾನು ಈ ರೀತಿಯ ಅದ್ಭುತ ದೃಶ್ಯ ಕಂಡಿರಲಿಲ್ಲ. ಈ ಹಿಂದೆ ನಾನು ಸ್ವಿಜರ್ಲೆಂಡ್ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಂದು ನನಗಾರುವ ಪ್ರಕೃತಿ ಸೌಂದರ್ಯದ ಅನುಭವ ಹಿಂದೆಂದೂ ಆಗಿರಲಿಲ್ಲ. ಇದನ್ನು ಎಂದೂ ಮರೆಯಲು ಸಾಧ್ಯವಿಲ್ಲ” ಎಂದು ಹಿಮಪಾತದ ಅನುಭವವನ್ನು ಆ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಶ್ರೀನಗರ ಪ್ರವಾಸ ರದ್ದು :
ದೆಹಲಿಯಿಂದ ಶ್ರೀನಗರಕ್ಕೆ ತೆರಳಬೇಕಿದ್ದ ಎಲ್ಲ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಶ್ರೀನಗರ ಪ್ರವಾಸ ರದ್ದಾಗಿತ್ತು. ಬೆಳಗ್ಗೆ 9.15ಕ್ಕೆ ವಿಮಾನದಲ್ಲಿ ಸಿದ್ದರಾಮಯ್ಯ ಅವರು ಶ್ರೀನಗರಕ್ಕೆ ಪ್ರಯಾಣ ಬೆಳಸಬೇಕಿತ್ತು. ಇದಕ್ಕಾಗಿ ಅವರು ಭಾನುವಾರ ರಾತ್ರಿಯೇ ದೆಹಲಿಗೆ ಆಗಮಿಸಿದ್ದರು.