ಮೈಸೂರು, ಜ.29 www.bengaluruwire.com : ಸಾಹಸಸಿಂಹ, ಅಭಿಮಾನಿಗಳ ಪಾಲಿನ ದಾದಾ ಡಾ.ವಿಷ್ಣುವರ್ಧನ್ ಸ್ಮಾರಕ ಅಂತೂ 13 ವರ್ಷಗಳ ಹೋರಾಟದ ಬಳಿಕ ಕೊನೆಗೂ ಅವರ ಕುಟುಂಬದವರ ಆಶಯದಂತೆ ಮೈಸೂರಿನ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಉದ್ಬೂರು ಬಳಿಯ ಹಾಲಾಳು ಗ್ರಾಮದಲ್ಲಿ ಲೋಕಾರ್ಪಣೆಯಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಷ್ಣುವರ್ಧನ್ ಅವರ ಪತ್ನಿ ಹಾಗೂ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಸಮ್ಮುಖದಲ್ಲಿ ನೂತನ ಸ್ಮಾರವನ್ನು ಉದ್ಘಾಟನೆ ಮಾಡಿದರು.
2009ರಲ್ಲಿ ಡಾ.ವಿಷ್ಣುವರ್ಧನ್ ಅಗಲಿಕೆಯ ಬಳಿಕ ಅವರ ಸ್ಮಾರಕವನ್ನು ಬೆಂಗಳೂರಿನಲ್ಲೇ ಅವರನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲೇ ನಿರ್ಮಿಸಬೇಕೆಂದು ಅಭಿಮಾನಿಗಳು ಸರ್ಕಾರದ ಮೇಲೆ ಸಾಕಷ್ಟು ಒತ್ತಾಯ, ಆಗ್ರಹ ತಂದಿದ್ದರು. ಆ ಬಳಿಕ ಕಳೆದ ಕೆಲ ವರ್ಷಗಳಿಂದ ಒಂದಲ್ಲ ಒಂದು ವಿಚಾರಕ್ಕೆ ವಿಷ್ಣುವರ್ಧನ್ ಸ್ಮಾರಕ ವಿಷಯ ಪ್ರಮುಖವಾಗಿ ಸುದ್ದಿಯಲ್ಲಿತ್ತು. ಇದೀಗ ಕೊನೆಗೂ ಅದು ಕುಟುಂಬಸ್ಥರ ಆಸೆಯಂತೆ ಮೈಸೂರಿನಲ್ಲಿಯೇ ನಿರ್ಮಾಣವಾಗಿ ಉದ್ಘಾಟನೆಯಾಗಿದೆ.
ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೂ ಮುನ್ನ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ವಿಷ್ಣುವರ್ಧನ್ ಒಬ್ಬ ಮೇರು ನಟ. ಬಹುಭಾಷಾ ನಟ. 200ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಹಸಿಂಹ ನಿಧನದ ನಂತರ ಸ್ಮಾರಕ ನಿರ್ಮಾಣ ಹಾಗೂ ಜಾಗದ ವಿಚಾರದಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿತ್ತು. ಕೊನೆಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಇದೊಂದು ಉತ್ತಮ ಸ್ಮಾರಕ, ಕಲೆ, ಸಂಸ್ಕೃತಿ ಹಾಗೂ ಪ್ರವಾಸ ತಾಣವಾಗಬೇಕು ಎಂಬುದು ನಮ್ಮ ಆಶಯವಾಗಿದೆ” ಎಂದು ಅವರು ಹೇಳಿದರು.
70ರ ದಶಕದಲ್ಲಿ ನಾಗರಹಾವು ಚಿತ್ರದ ಅದ್ಭುತ ಯಶಸ್ಸಿನ ಮೂಲಕ ರಾಷ್ಟ್ರಮಟ್ಟದಲ್ಲಿ ಬಹು ದೊಡ್ಡ ಕ್ರಾಂತಿ ಹಾಗೂ ಸಂಚಲನವನ್ನು ಸೃಷ್ಟಿ ಮಾಡಿದಂತಹ ಹೆಗ್ಗಳಿಕೆಗೆ ಪಾತ್ರವಾದವರು ಡಾ.ವಿಷ್ಣುವರ್ಧನ್. ಸುಮಾರು ನಾಲ್ಕು ದಶಕಗಳ ಕಾಲ, ನಿರಂತರವಾಗಿ 200ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ.
ಡಾ.ವಿಷ್ಣುವರ್ಧನ ಪ್ರತಿಷ್ಠಾನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಾ.ವಿಷ್ಣುವರ್ಧನ್ ಸ್ಮಾರಕ ರಾಜ್ಯ ಸರ್ಕಾರವು, ಮೈಸೂರು ಜಿಲ್ಲೆಯಲ್ಲಿ 5 ಎಕರೆ ಜಾಗವನ್ನು ನಿಗದಿಪಡಿಸಿತ್ತು. ಸ್ಮಾರಕ ನಿರ್ಮಾಣಕ್ಕಾಗಿ ಒಟ್ಟು 11 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೋಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದವರ ಮೂಲಕ ಸ್ಮಾರಕ ನಿರ್ಮಾಣದ ಕಾಮಗಾರಿ ನಡೆಸಿದ್ದಾರೆ.
ವಿಷ್ಣುದಾದನ ಹೆಸರಿನ ಸ್ಮಾರಕ ಉದ್ಘಾಟನೆ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ, ಬೈಕ್ ರ್ಯಾಲಿ, ಅನ್ನದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿಗಳು ವೇದಿಕೆಯಲ್ಲಿ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಆರಂಭಿಸುವಾಗ ವಿಷ್ಣು ಅವರ ಅಭಿಮಾನಿಗಳು ಡಾ.ವಿಷ್ಣುವರ್ಧನ್ ಅವರಿಗೂ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಭಿತ್ತಿಪತ್ರಗಳನ್ನು ಹಿಡಿದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ, ನೀವು ಪ್ಲೇಕಾರ್ಡ್ ಹಿಡಿದು ಕೇಳಿರುವ ಬೇಡಿಕೆಯಂತೆ, ನಿಮ್ಮ ಭಾವನೆಗಳಿಗೆ ಸ್ಪಂದಿಸಲಿದೆ ಎಂದಷ್ಟೆ ಹೇಳಿದರು.
ಸಾಹಸ ಸಿಂಹನ ಸ್ಮಾರಕದಲ್ಲಿನ ವಿಶೇಷಗಳೇನು?:
ಡಾ.ವಿಷ್ಣುವರ್ಧನ್ ಸ್ಮಾರಕ ಭವನವು ಅವರು ನಟಿಸಿರುವ ಚಲನಚಿತ್ರ ಹಾಗೂ ಅವರ ಜೀವನ ಚರಿತ್ರೆಯ ಸುಮರು 728 ಛಾಯಾಚಿತ್ರಗಳನ್ನು ಒಳಗೊಂಡ ಒಂದು ಬೃಹತ್ ಫೊಟೋ ಗ್ಯಾಲರಿ (ಚಿತ್ರವೇದಿಕೆ), 6.5 ಅಡಿ ಎತ್ತರದ ವಿಷ್ಣುವರ್ಧನ್ ಅವರು ರಾಜರ ಧಿರಿಸಿನಲ್ಲಿರುವ ಆಳೆತ್ತದ ಸುಂದರ ಪ್ರತಿಮೆ, ನೀರಿನ ಕಾರಂಜಿ, 250 ಆಸನಗಳುಳ್ಳ ಥಿಯೇಟರ್, ವಿಶಾಲವಾದ ಉದ್ಯಾನವನ, ಕಲಿಕಾ ಕೇಂದ್ರ, ಭೂದೃಶ್ಯ, ತರಬೇತಿ ಕೊಠಡಿ, ನಾಟಕಗಳಿಗಾಗಿ ಮೇಕಪ್ ಕೊಠಡಿ, ಕಚೇರಿ, ಪಾಕಶಾಲೆ, ಉಪಹಾರ ಕೇಂದ್ರ, ಅತಿಥಿಗಳು ಉಳಿಯಲು ವಸತಿ ವ್ಯವಸ್ಥೆ, ಶೌಚಾಲಯಗಳನ್ನೊಳಗೊಂಡ ಹೊರಾಂಗಣ ಉದ್ಯಾನವನ ಗಳನ್ನು ಒಳಗೊಂಡಿದೆ.
ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಪ್ರತಿದಿನವೂ ಅಭಿಮಾನಿಗಳೂ ಒಳಗೊಂಡಂತೆ ಎಲ್ಲರಿಗೂ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲು ರೂಪು ರೇಷೆಗಳು ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಡಾ.ವಿಷ್ಣುವರ್ಧನ್ ಅಭಿನಯಿಸಿದ ಚಿತ್ರಗಳ ಆಯ್ದ ಹಾಡು ಮತ್ತು ಸಂಭಾಷಣೆಗಳನ್ನು ಧ್ವನಿ ಮತ್ತು ದೃಶ್ಯ ರೂಪದಲ್ಲಿ ಕೇಳಿಸುವ ಹಾಗೂ ತೋರಿಸುವ ಪ್ರಯತ್ನ ನಡೆದಿದೆ. ಸ್ಮಾರಕ ಕಟ್ಟಡವು ತಳ ಮಹಡಿ ಹಾಗೂ ನೆಲಮಹಡಿಯನ್ನು ಹೊಂದಿದೆ. ಪ್ರವೇಶ ದ್ವಾರಕ್ಕೆ ಡಾ.ವಿಷ್ಣುವರ್ಧನ್ ಪ್ರತಿಮೆ ಕಾಣುತ್ತದೆ. ಆದರೆ, ಪ್ರವೇಶ ದ್ವಾರ ಹಾಗೂ ಪ್ರತಿಮೆಯ ನಡುವೆ ಸುಂದರ ಕಾರಂಜಿಯನ್ನು ಸ್ಥಾಪಿಸಲಾಗಿದೆ. ಕಾರಂಜಿ ಇರುವ ಆವರಣದಲ್ಲಿ ಡಾ.ವಿಷ್ಣುವರ್ಧನ್ ಅವರ ಆಯ್ದ ಸಂಭಾಷಣೆಗಳನ್ನು ಉಕ್ಕಿನ ಅಕ್ಷರಗಳಲ್ಲಿನ ಕೆತ್ತನೆಯಲ್ಲಿ ಅಳವಡಿಸಲಾಗಿದೆ.
ಸಾಂಸ್ಕೃತಿಕ ನಗರಿ ವಿಷ್ಣು ಅಚ್ಚುಮೆಚ್ಚಿನ ಊರು :
ಮೈಸೂರು ನಗರದ ಬಗ್ಗೆ ವಿಷ್ಣುವರ್ಧನ್ ಅವರು ಮೊದಲಿನಿಂದಲೂ ಇಷ್ಟವಾದ ಊರು. ಸಾಂಸ್ಕೃತಿಕ ನಗರಿಯನ್ನು ಅವರು ಸಾಕಷ್ಟು ಮೆಚ್ಚಿಕೊಂಡಿದ್ದರು. ಇವರ ತಮ್ಮ ಬಾಲ್ಯವನ್ನು ಇದೇ ಊರಿನಲ್ಲಿ ಕಳೆದು, ಹೈಸ್ಕೂಲ್ ಅನ್ನು ಇಲ್ಲಿಯೇ ಓದಿ ಮುಘಿಸಿದ್ದರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಮೈಸೂರಿಗೆ ಬಂದಾಗಲೆಲ್ಲಾ ಇಲ್ಲಿ ಸಮಯ ಕಳೆಯುತ್ತಿದ್ದರು. ಇದೀಗ ಅದೇ ಊರಿನಲ್ಲಿ ಅವರ ಸ್ಮಾರಕ ನಿರ್ಮಾಣವಾಗಿರುವುದು ಅವರ ಪತ್ನಿ ಹಾಗೂ ನಟಿ ಡಾ.ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಸೇರಿದಂತೆ ಅವರ ಕುಟುಂಬದವರಿಗೆ ಖುಷಿ ಕೊಟ್ಟಿದೆ. ಅಲ್ಲದೆ ತಮ್ಮ ಕಡೆಯ ದಿನಗಳನ್ನ ಮೈಸೂರಲ್ಲಿ ಕಳೆಯಲು ವಿಷ್ಣವರ್ಧನ್ ಆಸೆಪಟ್ಟಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬೇಕಾಗಿದೆ.
ಕನ್ನಡ ಚಿತ್ರರಂಗದ ಪ್ರಜ್ವಲಿಸುವ ತಾರೆಗೆ ಸಂದ ಗೌರವಗಳು ಹಲವು :
ಕನ್ನಡ ಚಿತ್ರರಂಗದಲ್ಲಿ ಸುಮಾರು 37 ವರ್ಷಗಳ ಕಾಲ ಪ್ರಜ್ವಲಿಸಿದ್ದ ಹಾಗೂ ಸಿನಿಮಾ ಆಗಸದಲ್ಲಿ ಮಿಂಚಿದ ಪ್ರತಿಭಾನ್ವಿತ ತಾರೆ ವಿಷ್ಣು ಅವರು ನಾಗರಹಾವು, ಹೊಂಬಿಸಿಲು, ಬಂಧನ, ಲಯನ್ ಜಗಪತಿ ರಾವ್, ಲಾಲಿ, ವೀರಪ್ಪ ನಾಯಕ ಮತ್ತು ಆಪ್ತ ರಕ್ಷಕ ಚಿತ್ರಗಳಲ್ಲಿನ ತಮ್ಮ ಅಭಿಯನಕ್ಕಾಗಿ ರಾಜ್ಯ ಸರ್ಕಾರದಿಂದ ಒಟ್ಟು ಏಳು ಬಾರಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾಲ್ಕು ಬಾರಿ ಫಿಲಂ ಫೇರ್ ಪ್ರಶಸ್ತಿ, ಎರಡು ಬಾರಿ ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿ, 1990ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. 2007ರಲ್ಲಿ ಇವರ ನಟನಾ ಕಲೆಗೆ ಡಾ.ರಾಜ್ ಕುಮಾರ್ ಪ್ರಶಸ್ತಿಯೂ ಸಂದಿದೆ. 2009ರಲ್ಲಿ ಡಾ.ವಿಷ್ಣುವರ್ಧನ್ ನಿಧನದ ನಂತರ ಅವರ ಹೆಸರಿನಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಸುಧೀರ್ಘ ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ರಾಜ್ಯ ಸರ್ಕಾರ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಕಲಾವಿದನಿಗೆ ಸಂದಗೌರವ :
ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಗೌರವಾರ್ಥ ಬಿಬಿಎಂಪಿಯು ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿಯ ತನಕ ಸಂಪರ್ಕ ಕಲ್ಪಿಸುವ 14.4 ಕಿ.ಮೀ ಉದ್ದದ ರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಿತ್ತು. ಇದು ಓರ್ವ ಕಲಾವಿದನ ಹೆಸರಿನಲ್ಲಿ ನಾಮಕರಣ ಮಾಡಿರುವ ಭಾರತದಲ್ಲೇ ಅತಿ ಉದ್ದದ ರಸ್ತೆಯಾಗಿದೆ.
ಸ್ಮಾರಕ ನಿರ್ಮಾಣಕ್ಕೆ ಈ ಹಿಂದೆ ಬಿಎಸ್ ವೈ ಶಂಕುಸ್ಥಾಪನೆ :
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈ ಹಿಂದೆ 2020ರ ಸೆಪ್ಟೆಂಬರ್ 15ರಂದು ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣುವರ್ಧನ್ ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ. ಆಡಿಟೋರಿಯಂ ಕೂಡ ಇಲ್ಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತು ನಾಟಕಗಳ ಚಟುವಟಿಕೆ ನಡೆಸುವ ಕುರಿತು ವಿಷ್ಣು ಕುಟುಂಬಸ್ಥರು ಯೋಜನೆ ರೂಪಿಸಿದ್ದಾರೆ. ಸ್ಮಾರಕದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗಿದೆ.
ಭಾನುವಾರದ ಡಾ.ವಿಷ್ಣು ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ನಟ ಹಾಗೂ ನಿರ್ದೇಶಕ ಅನಿರುದ್ದ್, ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಹರ್ಷ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.