ಬೆಂಗಳೂರು, ಜ.27 www.bengaluruwire.com : ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಸಹಕಾರ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ಕ್ಷೇತ್ರದ ವಿವಿಧೆಡೆ ಮನೆಮನೆಗೆ ತೆರಳಿ, ಬಿಜೆಪಿಯ ಕಮಲದ ಚಿಹ್ನೆಯನ್ನು ಮನೆಗಳ ಗೋಡೆಗಳ ಮೇಲೆ ಬರೆದು, “ಬಿಜೆಪಿಯೇ ಭರವಸೆ” ಎಂದು ಸ್ಟಿಕರ್ ಅಂಟಿಸಿದರು.
ಕೆಂಗೇರಿ, ಹೇರೋಹಳ್ಳಿ, ಹೆಮ್ಮಿಗೆಪುರ ವಾರ್ಡ್, ಕೆ.ಗೊಲ್ಲಹಳ್ಳಿ, ಕುಂಬಳಗೋಡು, ಕಗ್ಗಲಿಪುರ, ತರಳು ಗ್ರಾಮ ಪಂಚಾಯತಿ ಸೇರಿದಂತೆ ನಾನಾ ಕಡೆಗಳಲ್ಲಿ ಮತದಾರರಿಗೆ ಕರಪತ್ರಗಳನ್ನು ಹಂಚಿದರು.
ಈ ವೇಳೆ ಮಾತನಾಡಿದ ಸಚಿವರು, ಭಾರತೀಯ ಜನತಾ ಪಕ್ಷದ ವತಿಯಿಂದ ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.
ಅಭಿಯಾನದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ವಾಹನಗಳ ಮೇಲೆ ಸ್ಟಿಕರ್ ಅಂಟಿಸುವುದರ ಜೊತೆಗೆ ಮಿಸ್ಡ್ ಕಾಲ್ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಾಗಲೇ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತೆರೆಮರೆಯಲ್ಲಿ ಪೂರ್ವಸಿದ್ಧತೆಗಳನ್ನು ಆರಂಭಿಸಿವೆ.