ಬೆಂಗಳೂರು, ಜ.26 www.bengaluruwire.com : ಕಾಶ್ಮೀರ ಪುರವಾಸಿನಿ ಶ್ರೀ ಶಾರದಾ ದೇವಿ ಈಗ ಬೆಂಗಳೂರಿನ ಕಾಶ್ಮೀರ ಭವನದಲ್ಲಿ ವಿರಾಜಮಾನಳಾಗಿದ್ದಾಳೆ. ಶೃಂಗೇರಿಯಿಂದ ಕಾಶ್ಮೀರದ ಶಾರದಾ ದೇವಸ್ಥಾನಕ್ಕೆ ಕೊಂಡೊಯ್ಯತ್ತಿರುವ ಪಂಚಲೋಹದ ದರ್ಶನಕ್ಕೆ ಜ.28 ಮಧ್ಯಾಹ್ನದವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ದೇಶದ ಗಡಿನಿಯಂತ್ರಣ ರೇಖೆಯಲ್ಲಿ ನಿರ್ಮಿಸಿರುವ ನೂತನ ಶಾರದಾ ದೇವಸ್ಥಾನಕ್ಕೆ ಶೃಂಗೇರಿ ಮಠದಿಂದ ಪಂಚಲೋಹ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಲು, ರಸ್ತೆಮಾರ್ಗದ ಮೂಲಕ ಕೊಂಡೊಯ್ಯಲಾಗುತ್ತಿದೆ. ಶೃಂಗೇರಿಯಿಂದ ಜ.24ರಂದು ಹೊರಟು ಚಿಕ್ಕಮಗಳೂರು, ಹಾಸನ ಮೂಲಕ ಜ.25ರಂದು ನಗರಕ್ಕೆ ವಾಹನದ ಮೂಲಕ ದೇವಿಯ ಪಂಚಲೋಹ ವಿಗ್ರಹವನ್ನು ತರಲಾಗಿತ್ತು.
ಜ.25 ಸಂಜೆ 6 ಗಂಟೆಯಿಂದ ರಾತ್ರಿ 9.30ರ ತನಕ ನಗರದ ಶಂಕರಪುರದಲ್ಲಿರುವ ಶಂಕರಮಠದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಜ.26ರಂದು ಬೆಳಗ್ಗೆ ಕಾಶ್ಮೀರಭವನಕ್ಕೆ ಬೆಳಗ್ಗೆ 8.30ಕ್ಕೆಲ್ಲಾ ಶಂಕರಮಠದಿಂದ ಪಂಚಲೋಹ ವಿಗ್ರಹವನ್ನು ತೀತ್ವಾಲ್ ಗೆ ಕೊಂಡೊಯ್ಯುವ ವಾಹನದಲ್ಲಿ ತರಲಾಗಿತ್ತು.
ಬೆಳಗ್ಗೆಯಿಂದಲೇ ನಗರದ ನಾನಾ ಭಾಗಗಳಿಂದ ಜಯನಗರದ ಕಾಶ್ಮೀರ ಭವನಕ್ಕೆ ಆಗಮಿಸಿದ ಶಾರದಾ ದೇವಿಯ ಭಕ್ತರು ವಾಹನದ ಹಿಂಭಾಗದಲ್ಲಿ ವಿಗ್ರಹವನ್ನು ಇಟ್ಟಿರುವ ಕಡೆ ಸಾಲಿನಲ್ಲಿ ನಿಂತು, ಸಂಜೆ 7 ಗಂಟೆಯ ತನಕ ಅಲಂಕೃತ ಸರಸ್ವತಿಯ ವಿಗ್ರಹದ ದರ್ಶನ ಪಡೆದರು. ಕೆಲವು ಗಾಯನದ ಮೂಲಕ ಶ್ರೀ ದೇವರಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಜ.27 ರಂದು ಭಕ್ತರಿಗೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ. ಅದೇ ದಿನ ಶಾರದಾ ದೇವಿ ಹವನ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದೆ. ಜ.28 ಶನಿವಾರ
ದೇವಿಯ ದರ್ಶನವು ಬೆಳಿಗ್ಗೆ 7 ರಿಂದ ಮಧ್ಯಾಹ್ನದವರೆಗೆ ಮಾತ್ರ ಇರುತ್ತದೆ. ಬಳಿಕ ವಾಹನದಲ್ಲಿ ರಥ ಯಾತ್ರೆಯು ಮುಂಬೈಗೆ ಮುಂದುವರಿಯುತ್ತದೆ.
ಇದೇ ಸಂದರ್ಭದಲ್ಲಿ ಬೆಂಗಳೂರು ವೈರ್ ಜೊತೆ ಮಾತನಾಡಿದ ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿ ಸಂಸ್ಥಾಪಕರಾದ ರವೀಂದ್ರ ಪಂಡಿತ್ ಅವರು, “ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶ್ರೀ ಶಾರದಾ ಸರ್ವಜ್ಞ ಪೀಠದ ಪುನರುತ್ಥಾನಕ್ಕೆ, ತೀತ್ವಾಲ್ ನಲ್ಲಿ ನಿರ್ಮಿಸುತ್ತಿರುವ ಶಾರದಾ ದೇವಸ್ಥಾನವು ಮೊದಲ ಹೆಜ್ಜೆಯಾಗಿದೆ. ಸದ್ಯ ಶೃಂಗೇರಿಯಿಂದ ವಾಹನದ ಮೂಲಕ ಬೆಂಗಳೂರಿನ ಕಾಶ್ಮೀರ ಭವನಕ್ಕೆ ಗುರುವಾರ ಬೆಳಗ್ಗೆ ಶಾರದಾ ವಿಗ್ರಹ ತರಲಾಗಿದೆ. ಎಲ್ಲ ಭಕ್ತರು ಈ ಅವಕಾಶ ಬಳಸಿಕೊಂಡು ದೇವಿಯ ದರ್ಶನ ಪಡೆದುಕೊಳ್ಳಬಹುದು” ಎಂದರು.
“ಸಮಾಜ ಸುಧಾರಣೆ ಹಾಗೂ ಸಬಲೀಕರಣ ವಿಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದೆ. ಎಲ್ ಒಸಿಯ ತೀತ್ವಾಲ್ ನಲ್ಲಿ ಶಾರದಾ ದೇವಿ ದೇವಸ್ಥಾನ ತಲುಪಲು ಅಗತ್ಯ ರಸ್ತೆ ಮಾರ್ಗ ರಚಿಸುವಂತೆ ಶಾರದಾ ಸಮಿತಿ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಶ್ಮೀರದ ಗಡಿ ಭಾಗದಲ್ಲಿ ಮೊತ್ತ ಮೊದಲ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದನ್ನು ಬಿಟ್ಟು, ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಾರೆ. ಇದು ನಮಗೆ ಖುಷಿ ಕೊಟ್ಟಿಲ್ಲ. ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಬೇಕು” ಎಂದು ರವೀಂದ್ರ ಪಂಡಿತರು ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ಆಗ್ರಹಿಸಿದ್ದಾರೆ.