ಬೆಂಗಳೂರು, ಜ.23 www.bengaluruwire.com :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (bbmp)ಯ 2023-24ನೇ ಸಾಲಿನ ವಾರ್ಷಿಕ ಆಯವ್ಯಯಕ್ಕೆ “ನನ್ನ ನಗರ ನನ್ನ ಬಜೆಟ್ ಅಭಿಯಾನ” (MyCityMyBudget)ದ 7ನೇ ಆವೃತ್ತಿಯಲ್ಲಿ ನಗರದಾದ್ಯಂತ ಹಲವಾರು ಸಂಘ ಸಂಸ್ಥೆಗಳು ನಾಗರೀಕರಿಂದ ಒಟ್ಟು 16,261 ಸಲಹೆಗಳು ಬಂದಿದೆ.
ಬಿಬಿಎಂಪಿಯ 8 ವಲಯಗಳಲ್ಲಿನ 243 ವಾರ್ಡ್ ಗಳಿಂದ 31 ದಿನದ ಅವಧಿಯಲ್ಲಿ ಕ್ಷೇಮಾಭಿವೃದ್ಧಿ ಸಂಘಗಳು, ಬೆಂಗಳೂರು ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ನಾಗರಿಕರ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡುವ ಪ್ರಕ್ರಿಯೆಯಲ್ಲಿ ಸಂಗ್ರಹವಾದ ಸಲಹೆಗಳ ಪುಸ್ತಕವನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನಾಗರೀಕ ಸಂಸ್ಥೆಗಳು ಮಾಧ್ಯಮಗಳ ಸಮ್ಮುಖದಲ್ಲಿ ಸೋಮವಾರ ಸಲ್ಲಿಕೆ ಮಾಡಿದವು.
ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಳೆದ ಹಲವು ವರ್ಷಗಳಿಂದ ಬಿಬಿಎಂಪಿ ತನ್ನ ಬಜೆಟ್ ಪ್ರಕ್ರಿಯೆಯಲ್ಲಿ ನಾಗರೀಕರ ಸಹಭಾಗಿತ್ವವನ್ನು ಎತ್ತಿಹಿಡಿದಿದೆ. ಜನಾಗ್ರಹ ಮತ್ತು ಬೆಂಗಳೂರು ವಾರ್ಡ್ ಸಮಿತಿ ಬಳಗವು ನನ್ನ ನಗರ ನನ್ನ ಬಜೆಟ್ ಅಭಿಯಾನದ 7ನೇ ಆವೃತ್ತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬಿಬಿಎಂಪಿಗೆ ಸಹಯೋಗ ನೀಡಿದೆ. 243 ವಾರ್ಡ್ ಗಳಿಂದ ಹಲವು ಸಂಘ ಸಂಸ್ಥೆಗಳು, ನಾಗರೀಕರು ನೀಡಿದ ಸಲಹೆಗಳನ್ನು 2023-24ನೇ ಆಯವ್ಯಯದಲ್ಲಿ ಸೂಕ್ತವಾದುದನ್ನು ಅಳವಡಿಸಿಕೊಳ್ಳುತ್ತೇವೆ.” ಎಂದರು.
ವರದಿಯ ಅಂಕಿ ಅಂಶಗಳಲ್ಲೇನಿದೆ? :
ಸ್ವೀಕೃತಿಯಾದ ಸಲಹೆಗಳಲ್ಲಿ ಶೇ.55 ಸಲಹೆಗಳು ನಗರದ ಹಳೆ ವಲಯಗಳಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಿಗೆ ಸೇರ್ಪಡೆಯಾಗುವ ವಾರ್ಡ್ ಗಳಿಗೆ ಸೇರಿದ್ದಾಗಿತ್ತು. ಹಾಗೂ ಉಳಿದ ಶೇ.44 ಹೊರ ವಲಯದಲ್ಲಿನ ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿ ನಗರ ಮತ್ತು ಯಲಹಂಕ ವಲಯಗಳ ವಾರ್ಡ್ ನಿಂದ ಬಂದಿದ್ದವು ಎಂದು ಬಿಪ್ಯಾಕ್ ಸಂಸ್ಥೆಯ ರಾಘವೇಂದ್ರ, ಜನಾಗ್ರಹದ ಮಂಜುನಾಥ್ ತಿಳಿಸಿದರು.
ನಾಗರೀಕರು ನೀಡಿದ ಸಲಹೆಗಳೇನು?:
• ಸಾರ್ವಜನಿಕರು ವಾದಚಾರಿ ಮಾರ್ಗ, ರಸ್ತೆ ಹಾಗೂ ಒಳ ಚರಂಡಿ ನಿರ್ವಹಣೆಗೆ ಆದ್ಯತೆ ನೀಡುವಂತೆ ಅಭಿಪ್ರಾಯಪಟ್ಟಿದ್ದಾರೆ.
• ರಸ್ತೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, 2,490 ಕಿ.ಮೀ. ಅಸ್ತಿತ್ವದಲ್ಲಿರುವ ರಸ್ತೆಗಳನ್ನು ದುರಸ್ತಿ ಮಾಡಲು: 470 ಕಿ.ಮೀ ರಷ್ಟು ಹೊಸ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಹಾಗೂ 950 ಕಿ.ಮೀ. ಗಳಷ್ಟು ಅಸ್ತಿತ್ವದಲ್ಲಿ ರುವ ಪಾದಚಾರಿ ಮಾರ್ಗಗಳನ್ನು ಸರಿ ಮಾಡಲು ಬಯಸಿದ್ದಾರೆ.
• ಅಂದಾಜು 240 ಕಿ.ಮೀ ರಸ್ತೆಗಳಿಗೆ, ಹೆಚ್ಚಿನ ಬೀದಿದೀಪಗಳನ್ನು ಒದಗಿಸುವಂತೆ ಹೇಳಿದ್ದಾರೆ. ಆ ಮೂಲಕ ಸುರಕ್ಷಿತ ರಸ್ತೆಗಳ ಅಗತ್ಯವನ್ನು ನಾಗರೀಕರು ತಿಳಿಸಿದ್ದಾರೆ.
• ಘನತ್ಯಾಜ್ಯ ನಿರ್ವಹಣೆ (SWM) ಮೂಲಸೌಕರ್ಯಕ್ಕೆ ಆದ್ಯತೆ ನೀಡಲು ಮಹದೇವಪುರ, ಯಲಹಂಕ ಹಾಗೂ
ದಾಸರಹಳ್ಳಿಯ ವಲಯದ ನಾಗರಿಕರು ಸೂಚಿಸಿದ್ದಾರೆ.
• ಹಣಕಾಸಿನ ಬಂಡವಾಳವನ್ನು ರಸ್ತೆ ಹಾಗೂ ವಾಹನ ಚಲನಶೀಲತೆಯನ್ನು ಉತ್ತಮಗೊಳಿಸುವುದರಲ್ಲಿ ಹಾಕಬೇಕೆಂದು ಬೆಂಗಳೂರಿನ ನಾಗರಿಕರ ಅಭಿಪ್ರಾಯ ಪಟ್ಟಿದ್ದಾರೆ.
• ಒಳ ವಲಯಗಳಿಂದ ಪಾದಚಾರಿ ಮಾರ್ಗದ ನಿರ್ವಹಣೆಗೆ ಹೆಚ್ಚಿನ ಬೇಡಿಕೆಯಿದ್ದರೆ, ಹೊಸ ಹೊರ ವಲಯಗಳಲ್ಲಿ ಪಾದಚಾರಿ ಮಾರ್ಗವನ್ನು ಒದಗಿಸುವಂತೆ ಸಲಹೆಯನ್ನು ನೀಡಿದ್ದಾರೆ.
• ಸಮಗ್ರವಾಗಿ, ಬೆಂಗಳೂರಿನ ನಾಗರಿಕರು ಪ್ರಮುಖ ಆದ್ಯತೆಯನ್ನು ಪರಿಸರ ಹಾಗೂ ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ನೀಡಿದ್ದಾರೆ.
ಸರಳ ಮತ್ತು ಸಾಮಾನ್ಯರು ಓದಿ ಅರ್ಥೈಸಿಕೊಳ್ಳುವ ಬಜೆಟ್ ತಯಾರಿಸಲು ಒತ್ತಾಯ :
ಒಟ್ಟಾರೆ 2023- 24ನೇ ಬಿಬಿಎಂಪಿ ಬಜೆಟ್, ನಾಗರಿಕರ ಸಹಭಾಗಿತ್ವದ ಮಹತ್ವವನ್ನು ಎತ್ತಿಹಿಡಿಯಬೇಕಾದರೆ,
ನಾಗರಿಕರ ಸಲಹೆಗಳನ್ನು ಪರಿಗಣಿಸಬೇಕು ಮತ್ತು ಬಜೆಟ್ ನಲ್ಲಿ ಅನುದಾನವನ್ನು ಮೀಸಲಿರಿಸಬೇಕು. ವಾರ್ಡ್ ಮಟ್ಟದಲ್ಲಿ ಕಾಮಗಾರಿಗಳ ಅನುಷ್ಠಾನ ಪರಿಣಾಮಕಾರಿಯಾಗಬೇಕಾದರೆ, ಕಾರ್ಯವಿಧಾನದ ಮಾನದಂಡಗಳನ್ನು ನಿಗಧಿಪಡಿಸಬೇಕು. ಅಂತೆಯೇ ಬಿಬಿಎಂಪಿಯು ತಮ್ಮ ಮುಂಗಡ ಆಯವ್ಯಯ ಪತ್ರವನ್ನು ಸರಳೀಕರಿಸಿ, ನಾಗರಿಕರು ಓದಿ ಅರ್ಥೈಸಿಕೊಳ್ಳುವಂತಹ ರೀತಿ ಆಯವ್ಯಯ ಪುಸ್ತಕವನ್ನು ತಯಾರಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ನನ್ನ ನಗರ ನನ್ನ ಬಜೆಟ್ ಅಭಿಯಾನದ 7ನೇ ಆವೃತ್ತಿಯನ್ನು ಬಿಬಿಎಂಪಿ ವಿಶೇಷ ಆಯುಕ್ತರು (ಹಣಕಾಸು) ಜಯರಾಮ್ ರಾಯಪುರ ರವರು ಕಳೆದ ನ.24ರಂದು ಚಾಲನೆ ನೀಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಜಯರಾಮ ರಾಯಪುರ್, ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಗಳು ಪಾಲ್ಗೊಂಡಿದ್ದರು.