ಬೆಂಗಳೂರು, ಜ.23 www.bengaluruwire.com : ನಗರದ ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ (ಈದ್ಗಾ) ಗಣರಾಜ್ಯೋತ್ಸವ ಆಚರಿಸಲು ಸರ್ಕಾರ ಕೊನೆಗೂ ಅನುಮತಿ ನೀಡಿದೆ. ಈ ಸಂಬಂಧ ಸೋಮವಾರ ಮಧ್ಯಾಹ್ನದ ವೇಳೆಗೆ ಅಧಿಕೃತ ಆದೇಶ ಹೊರಬೀಳಲಿದೆ.
ಈ ಕುರಿತಂತೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸೇರಿದಂತೆ ಮೂರ್ನಾಲ್ಕು ಸಂಘಟನೆಗಳು ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜ.26ರಂದು ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲು ಅನುಮತಿ ಕೋರಿ ಮನವಿ ಮಾಡಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಕಂದಾಯ ಇಲಾಖೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಗಣರಾಜ್ಯೋತ್ಸವನ್ನು ಆಚರಿಸಲು ಅವಕಾಶ ನೀಡಿದೆ.
ಸರ್ವೆ ನಂ. 40 ಗುಟ್ಟಹಳ್ಳಿ ಚಾಮರಾಜಪೇಟೆ ಮೈದಾನದಲ್ಲಿ ಜ.26ರಂದು ಗಣರಾಜ್ಯೋತ್ಸವ ಆಚರಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅನುಮತಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
‘ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಅಚರಣೆಗೆ ಅವಕಾಶ ನೀಡಬೇಕೆಂದು ಮೂರ್ನಾಲ್ಕು ಸಂಘಟನೆಗಳು ಮನವಿ ಮಾಡಿದ್ದವು. ಈ ಕುರಿತಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿತ್ತು. ಕಂದಾಯ ಇಲಾಖೆ ನೀಡಿರುವ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರ ಜಿಲ್ಲಾಧಿಕಾರಿ ದಯಾನಂದ ಬೆಂಗಳೂರು ವೈರ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. .
‘ಆಟದ ಮೈದಾನದಲ್ಲಿ ಗಣರಾ ಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಜ.5ರಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವತಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೆವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಪತ್ರ ಬರೆದಿದ್ದವು. ಚಾಮರಾಜಪೇಟೆ ಮೈದಾನದಲ್ಲಿ ಒಂದೋ ಸರ್ಕಾರದಿಂದ ಗಣರೋಜ್ಯೋತ್ಸವ ಆಚರಿಸಬೇಕು. ಇಲ್ಲವಾದಲ್ಲಿ ನಾಗರೀಕರು ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಬೇಕು ಎಂದು ಜ.21ರವರೆಗೆ ಗಡುವು ನೀಡಿದ್ದೆವು. ಇದೀಗ ಸರ್ಕಾರದಿಂದಲೇ ಗಣರಾಜ್ಯೋತ್ಸವ ಆಚರಿಸುವುದಾಗಿ ಮಾಹಿತಿ ಬಂದಿದೆ. ಇದು ಸಂತೋಷದ ವಿಷಯ’ ಎಂದು ಒಕ್ಕೂಟದ ಅಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ.
‘ನಾಳೆ (ಜ.24) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಗಣರಾಜ್ಯೋತ್ಸವ ಸಂಬಂಧ ಸಭೆ ಕರೆದಿದ್ದು, ಅದರಲ್ಲಿ ತಮಗೂ ಆಹ್ವಾನ ನೀಡಲಾಗಿದೆ. ಜ.26ರಂದು ಚಾಮರಾಜಪೇಟೆ ಮೈದಾನದಲ್ಲಿ ಗಣರೋಜ್ಯೋತ್ಸವ ಆಚರಣೆಗೆ ಸಾರ್ವಜನಿಕರು, ಶಾಲಾ ಮಕ್ಕಳು ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು. ಹಾಗೂ ಹಿರಿಯ ನಾಗರೀಕರಿಗೆ ಸನ್ಮಾನ ಹಾಗೂ ರಾಷ್ಟ್ರಭಕ್ತಿ ಮೆರೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಗುವುದು.
ಜ.21ಕ್ಕೆ ಸರ್ಕಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಂಬಂಧ ಗಡುವು ಅಂತ್ಯವಾಗಿದ್ದ ಹಿನ್ನಲೆಯಲ್ಲಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಭಾನುವಾರ (ಜ.22) ರಂದು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಕ್ಯಾರೆ ಅಂದಿಲ್ಲ ಎಂದು ಒಕ್ಕೂಟದ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಭೆಗೆ ಆಗಮಿಸಿದ್ದ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಮಾತುಕತೆಗೆ ಮುನ್ನವೇ ಸರ್ಕಾರವೇ ಗಣರಾಜ್ಯೋತ್ಸವವನ್ನು ಆಚರಿಸುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೆ ಈ ವಿಚಾರದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ತಮ್ಮ ಜೊತೆ ಮಾತನಾಡಿದ್ದಾಗಿ ಹೇಳಿದ್ದರು ಎಂದು ತಿಳಿಸಿದರು.
ಅಂತೂ ಹಲವು ಗೊಂದಲಗಳು ಬಗೆಹರಿದು ಗಣರಾಜ್ಯೋತ್ಸವ ಆಚರಣೆಗೆ ಕೊನೆಗೂ ಅನುಮತಿ ಸಿಕ್ಕಿರುವುದಕ್ಕೆ ಚಾಮರಾಜಪೇಟೆ ನಾಗರೀಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆ ಮೈದಾನದ ಮಾಲೀಕತ್ವದ ಬಗ್ಗೆ ವಕ್ಫ್ ಹಾಗೂ ಬಿಬಿಎಂಪಿ ನಡುವೆ ಈ ಹಿಂದೆ ಗೊಂದಲ ಉಂಟಾಗಿತ್ತು. ಆಗ ಹೈಕೋರ್ಟ್ ಏಕ ಸದಸ್ಯ ಪೀಠ, ಕಂದಾಯ ಇಲಾಖೆಗೆ ಮಾಲೀಕತ್ವದ ಹಕ್ಕನ್ನು ನೀಡಿತ್ತು. ನಂತರ, ಕಳೆದ ವರ್ಷ ಆ.15ರಂದು ನಗರ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಯನ್ನು ಈ ಮೈದಾನದಲ್ಲಿ ಆಚರಿಸಲಾ ಗಿತ್ತು. ಬಳಿಕ ಇದೇ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ನೀಡಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಆಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಯಾವುದೇ ಉತ್ಸವಗಳಿಗೆ ಕೋರ್ಟ್ ಅವಕಾಶ ಕೊಟ್ಟಿರಲಿಲ್ಲ.
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.