ಬೆಂಗಳೂರು, ಜ.22 www.bengaluruwire.com : ಅರಮನೆ ಮೈದಾನದಲ್ಲಿ ನಡೆದ ಎರಡು ದಿನಗಳ ಉತ್ತರ ಕರ್ನಾಟಕ ಉತ್ಸವದಲ್ಲಿ ಉತ್ತರ ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನ ಸೂರೆಗೊಂಡವು.
ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಭಾಗದ ಜನರು ಆ ಭಾಗದ ಆಟಗಳಾದ ಲಗೋರಿಯಾಟ,ಬುಗರಿ, ಗೋಲಿಯಾಟ, ಚಿನ್ನಿದಾಂಡು ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು.
ಉತ್ತರ ಕರ್ನಾಟಕದ ಜಾನಪದ ಕಲೆಗಳಾದ ಗೀಗಿ ಪದ, ತತ್ವ ಪದ, ಕರಡಿ ಮಜಲು, ಹೆಳವರ ಪದ, ಸೋಬಾನೆ ಪದಗಳನ್ನು ಕಲಾವಿದರು ಪ್ರದರ್ಶಿಸಿದರು. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದವು. ಧಾರವಾಡ ಜಿಲ್ಲೆಯ ಮಲ್ಲಕಂಬ ಪ್ರದರ್ಶನ, ಎಲ್ಲರ ಮೈ ರೋಮಾಂಚನಗೊಳಿಸಿತು.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಇಳಕಲ್ ಸೀರೆಯುಟ್ಟ ಮಹಿಳೆಯರ ಫ್ಯಾಷನ್ ಶೋ, ಉತ್ತರ ಕರ್ನಾಟಕದ ಒಡಪುಗಳು ಕಾರ್ಯಕ್ರಮಕ್ಕೆ ಮೆರಗು ತಂದವು.
ಭಾನುವಾರದ ಕಾರ್ಯಕ್ರಮದಕ್ಕೆ ಯುವ ಉದ್ಯಮಿ ಭರತ್ ಬೊಮ್ಮಾಯಿ ಆಗಮಿಸಿ, ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿ ಪ್ರತಿಬಿಂಬಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಾವು ಎಲ್ಲಿಯೇ ಹೋದರೂ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ಮಾತನಾಡಿ, ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 3.24 ಎಕರೆ ಜಾಗ ಕೊಟ್ಟಿದ್ದಾರೆ. ಅಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ, ಉತ್ತರ ಕರ್ನಾಟಕ ಭಾಗದಿಂದ ಬರುವವರಿಗೆ ವಸತಿ ನಿಲಯ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.