ಶೃಂಗೇರಿ, ಜ.18 www.bengaluruwire.com : ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿರುವ ತೀತ್ವಾಲ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾರದಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗಾಗಿ ಶೃಂಗೇರಿ ಶಾರದಾ ಮಠದಿಂದ ದೇಣಿಗೆಯಾಗಿ ನೀಡಲಾಗಿದ್ದ 3.5 ಅಡಿ ಎತ್ತರದ ಶ್ರೀ ಶಾರದಾಂಬೆ ಮೂರ್ತಿಯನ್ನು ಜ.24ರಂದು ಶೃಂಗೇರಿಯಿಂದ ತೀತ್ವಾಲ್ ಗೆ ಕೊಂಡೊಯ್ಯಲಾಗುತ್ತಿದೆ.
ತೀತ್ವಾಲ್‌ಗೆ ಪ್ರಯಾಣದ ಮಾರ್ಗ ಹೀಗಿದೆ :
ಜನವರಿ 24 ರಂದು ಶೃಂಗೇರಿ ದೇವಸ್ಥಾನದಿಂದ ವಾಹನದಲ್ಲಿ ಯಾತ್ರೆ ಆರಂಭವಾಗಲಿದ್ದು, ಬೆಂಗಳೂರು, ಮುಂಬೈ, ಅಹಮದಾಬಾದ್, ಜೈಪುರ, ದೆಹಲಿ, ಚಂಡೀಗಢ, ಅಮೃತಸರ, ಜಮ್ಮು ಮತ್ತು ಕುಪ್ವಾರದ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದೆ.
ಈ ಯಾತ್ರೆಯು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ವಿಗ್ರಹ ಯಾತ್ರೆ ಮಾರ್ಚ್ 20 ರಂದು ಕುಪ್ವಾರದ ಟಿಕ್ಕರ್‌ನಿಂದ ಟೀಟ್ವಾಲ್ ತಲುಪಲಿದೆ ಎಂದು ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿಯ ಮುಖ್ಯಸ್ಥ ರವೀಂದರ್ ಪಂಡಿತ ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.
ಜನವರಿ 24 ರಂದು ಶೃಂಗೇರಿ ಮಠದಿಂದ ಶಾರದಾ ದೇವಿ ಪಂಚಲೋಹ ವಿಗ್ರಹದ ಯಾತ್ರೆ ಆರಂಭವಾಗಲಿದ್ದು, ಈ ಸರಳ ಸಮಾರಂಭದಲ್ಲಿ ಶೃಂಗೇರಿ ಸ್ವಾಮಿಗಳು, ಶಾರದ ಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ ಮತ್ತಿತರರು ಭಾಗವಹಿಸಲಿದ್ದಾರೆ.
ಕಾಶ್ಮೀರ ಮತ್ತು ಶೃಂಗೇರಿ ನಡುವೆ ಸುಮಾರು 1,200 ವರ್ಷಗಳ ಸಂಪರ್ಕವಿದೆ. ಶೃಂಗೇರಿಯ ಮಠದಿಂದ ನೀಡಲಾಗುವ ಪಂಚಲೋಹ (ಐದು ಲೋಹಗಳ) ವಿಗ್ರಹವು ಶೃಂಗೇರಿಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಪೂಜಿಸಲ್ಪಡುವ ಶ್ರೀ ಶಾರದಾಂಬೆ ಮೂರ್ತಿಯ ಪ್ರತಿರೂಪವಾಗಿದೆ.
ವಸಂತ ನವರಾತ್ರಿಯ ಮೊದಲ ದಿನದಂದು (ಮಾರ್ಚ್ 22) ಕಾಶ್ಮೀರದ ತೀತ್ವಾಲ್ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ರವೀಂದ್ರ ಪಂಡಿತ ಅವರು ತಿಳಿಸಿದ್ದಾರೆ.
ಬೆಂಗಳೂರು ಸಮೀಪದ ಬಿಡದಿಯಿಂದ ನಾಲ್ಕು ಟ್ರಕ್ ಲೋಡ್ ಮಾರ್ಬಲ್‌ಗಳನ್ನು ದೇವಾಲಯಕ್ಕಾಗಿ ಬಳಸಲಾಗುವುದು ಎಂದು ಅವರು ಹೇಳಿದರು.
ಫೆಬ್ರವರಿ 2022 ರಲ್ಲಿ, ಶಾರದಾ ಉಳಿಸಿ ಸಮಿತಿಯ ಪದಾಧಿಕಾರಿಗಳು ಶೃಂಗೇರಿಯ ಶ್ರೀಗಳನ್ನು ಭೇಟಿಯಾಗಿ ಶಾರದಾ ದೇವಸ್ಥಾನ ಮತ್ತು ಕೇಂದ್ರದ ದರ್ಶನದ ದಾಖಲೆಯ ಪ್ರತಿಯನ್ನು ಪ್ರಸ್ತುತಪಡಿಸಿದರು. ಅಕ್ಟೋಬರ್ 2022 ರಲ್ಲಿ ವಿಜಯದಶಮಿ ದಿನದಂದು ವಿಗ್ರಹವನ್ನು ಶಾರದಾ ಉಳಿಸಿ ಸಮಿತಿಗೆ ಹಸ್ತಾಂತರಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.