ವಿಶ್ವದಲ್ಲೇ ಅತಿದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಯನ್ನು ಹೊಂದಿದ ಭಾರತದಲ್ಲಿ ಟೆಕ್ ದೈತ್ಯ ಸಂಸ್ಥೆ ಗೂಗಲ್ ಹಾಗೂ ಆಪಲ್ ಗೆ ಸವಾಲೊಡ್ಡುವಂತೆ ಆಂಡ್ರಾಯ್ಡ್ ರೀತಿ, ದೇಶೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ‘ಇಂಡೋಸ್’ (IndOS) ಹೊರತರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ.
ಭಾರತದ ನ್ಯಾಯೋಚಿತ ವ್ಯಾಪಾರ ನಿಯಂತ್ರಕವು, ಗೂಗಲ್ ಸಂಸ್ಥೆಗೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭಾರಿ ದಂಡವನ್ನು ವಿಧಿಸಿದ ಮೇಲೆ, ಕೇಂದ್ರ ಸರ್ಕಾರವು ಈಗ ಸ್ಥಳೀಯ ‘ದೇಸಿ’ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರಲು ತೀರ್ಮಾನಿಸಿದೆ. ದೇಶದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾರುಕಟ್ಟೆಯಲ್ಲಿ ಗೂಗಲ್ ಆಂಡ್ರಾಯ್ಡ್ (Google ನ Android) ಶೇ.97ರಷ್ಟು ಮತ್ತು ಆಪಲ್ (Apple iOS) ಸಣ್ಣ ಪಾಲನ್ನು ಹೊಂದಿದೆ. ಈ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಅನುವಾಗುವಂತೆ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಕೇಂದ್ರ ಸರ್ಕಾರದ ಉನ್ನತ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಫೀಚರ್ ಫೋನ್ (Feature Phones)ಗಳು ಮತ್ತು ಸ್ಮಾರ್ಟ್‌ಫೋನ್ (Smart Phones) ಗಳನ್ನು ಒಳಗೊಂಡಿರುವ ಭಾರತೀಯ ಮೊಬೈಲ್ ಫೋನ್ ಮಾರುಕಟ್ಟೆಯು 2022ರಲ್ಲಿ 1.4 ಟ್ರಿಲಿಯನ್ ಆದಾಯ ಗಳಿಸುತ್ತಿದ್ದು, 2026ನೇ ಇಸವಿಯ ವೇಳೆಗೆ 2.4 ಟ್ರಿಲಿಯನ್ ಆದಾಯವನ್ನು ಗಳಿಸುವ ಮುನ್ಸೂಚನೆಯನ್ನು ಹೊಂದಿದೆ ಎಂದು ಇತ್ತೀಚಿನ ಫ್ರಾಸ್ಟ್ ಮತ್ತು ಸುಲ್ಲಿವಾನ್ ವರದಿಯಲ್ಲಿ ತಿಳಿಸಲಾಗಿದೆ.
IndOS ಎಂದು ಹೇಳಲಾದ ಈ ಯೋಜನೆಯನ್ನು ಕೇಂದ್ರ ಸರ್ಕಾರ, ಸ್ಟಾರ್ಟ್‌ಅಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮೂಲಕ ಹೊರತರಲು ಉದ್ದೇಶಿಸಿದೆ ಎಂದು ವರದಿ ಮಾಡಿದೆ. “ಭಾರತವು ಜಗತ್ತಿನ ಅತಿದೊಡ್ಡ ಮೊಬೈಲ್ ಸಾಧನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ನಮ್ಮ ಉದ್ದೇಶವು ಸುರಕ್ಷಿತ ಭಾರತೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸುವುದಾಗಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ನ ಪ್ರಾಬಲ್ಯ ಮತ್ತು ಆಪಲ್ ಕಂಪನಿಯ ಐಒಎಸ್ (IOS) ನ ಸಣ್ಣ ಪಾಲಿಗಾಗಿ ಹೊಸ ಆಯ್ಕೆಗಳು ಮತ್ತು ಸ್ಪರ್ಧೆಯನ್ನು ಸೃಷ್ಟಿಸುತ್ತದೆ ”ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಬ್ಯುಸಿನೆಸ್ ಸ್ಟ್ಯಾಂಡರ್ಡ್‌ಗೆ ಹೇಳಿದ್ದಾರೆ.
ಭಾರತದ ಸ್ಪರ್ಧಾತ್ಮಕ ಆಯೋಗವು (CCI) ಇತ್ತೀಚೆಗೆ ಆಲ್ಫಾಬೆಟ್ ಇಂಕ್ (Alphabet In) ಮಾಲೀಕತ್ವದ ಗೂಗಲ್ ಗೆ $161 ಮಿಲಿಯನ್ ಡಾಲರ್ ದಂಡ ವಿಧಿಸಿತ್ತು ಮತ್ತು ಆಂಡ್ರಾಯ್ಡ್‌ನಲ್ಲಿ ತನ್ನ ಪ್ರಾಬಲ್ಯವನ್ನು ಬಳಸಿಕೊಳ್ಳುವುದಕ್ಕಾಗಿ ಮತ್ತು ಅಪ್ಲಿಕೇಶನ್‌ಗಳನ್ನು ಪೂರ್ವ-ಸ್ಥಾಪಿಸಲು (Pre-installing apps) ಸಂಬಂಧಿಸಿದ ಸ್ಮಾರ್ಟ್‌ಫೋನ್ ತಯಾರಕ (Smartphone makers)ರ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಬದಲಾಯಿಸುವಂತೆ ಕೇಳಿದೆ.
ಸಿಸಿಐ ನ ಈ ನಿರ್ಧಾರದಿಂದಾಗಿ ತನ್ನ ದೀರ್ಘಕಾಲದ ವ್ಯವಹಾರ ಮಾದರಿಯನ್ನು ಬದಲಾಯಿಸಲು ಒತ್ತಾಯಿಸಲಾಗುತ್ತಿದೆ ಮತ್ತು ಇದರ ಪರಿಣಾಮ ಸ್ಮಾರ್ಟ್‌ಫೋನ್‌ಗಳು ಹೆಚ್ಚು ದುಬಾರಿಯಾಗಲಿದೆ. ಇಂಟರ್ನೆಟ್‌ಗೆ ಹಾನಿಯಾಗುತ್ತದೆ. ಗೌಪ್ಯತೆಗೆ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು ಅಪ್ಲಿಕೇಶನ್ ಡೆವಲಪರ್‌ಗಳ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಗೂಗಲ್ ಹೇಳಿದೆ.
ಸ್ವದೇಶಿ ಮೊಬೈಲ್ ತಯಾರಕರು ಫೋನ್‌ಗಳಲ್ಲಿ ಭಾರತೀಯ ಆಪರೇಟಿಂಗ್ ಸಿಸ್ಟಮ್‌ನ ಕ್ರಮವನ್ನು ಬೆಂಬಲಿಸುತ್ತಾರೆ ಎಂದು ವರದಿಯಾಗಿದೆ. ಗೂಗಲ್ ತನ್ನ ಆಂಡ್ರಾಯ್ಡ್ ಸಿಸ್ಟಮ್ ಪರವಾನಗಿ (licenses) ಯನ್ನು ಸ್ಮಾರ್ಟ್‌ಫೋನ್ ತಯಾರಕರಿಗೆ ನೀಡುತ್ತದೆ. ಆದರೆ ಗೂಗಲ್, ತನ್ನದೇ ಆದ ಅಪ್ಲಿಕೇಶನ್‌ಗಳನ್ನು ಆ ಮೊಬೈಲ್ ಗಳಲ್ಲಿ ಖಡ್ಡಾಯವಾಗಿ ಪ್ರೀ ಇನ್ ಸ್ಟಾಲ್ ಮಾಡಬೇಕೆಂದು ಸ್ಪರ್ಧಾತ್ಮಕ ವಿರೋಧಿ ನಿರ್ಬಂಧಗಳನ್ನು ಇದು ವಿಧಿಸುತ್ತದೆ ಎಂದು ವಿಮರ್ಶಕರು ಹೇಳುತ್ತಾರೆ. ಆದರೆ ಗೂಗಲ್ ಕಂಪನಿ ಮಾತ್ರ, ಅಂತಹ ಒಪ್ಪಂದಗಳು ಆಂಡ್ರಾಯ್ಡ್ ಅನ್ನು ಮುಕ್ತವಾಗಿಡಲು ಸಹಾಯ ಮಾಡುತ್ತದೆ ಎಂದು ಸಮರ್ಥನೆ ನೀಡುತ್ತಿದೆ.
ಕೇಂದ್ರ ಸರ್ಕಾರ ಹೊಸ ದೇಶೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ‘ಇಂಡೋಸ್’ ಹೇಗೆ? ಮತ್ತು ಯಾವಾಗ ಜಾರಿಗೆ ತರಲು ಹೊರಟಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.