ಬೆಂಗಳೂರು, ಜ.17 www.bengaluruwire.com : ಟಾಟಾಸುಮೋ ಕಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಗುದ್ದಿದ ವ್ಯಕ್ತಿಯನ್ನು ಪ್ರಶ್ನಿಸಿ ಗಾಡಿಯ ಹ್ಯಾಂಡಲ್ ಹಿಡಿದ ವೃದ್ಧ ಕಾರು ಚಾಲಕನನ್ನು ಟೂವೀಲರ್ ಸವಾರ, ಅನಾಮತ್ತು ಒಂದೂವರೆ ಕಿ.ಮೀ ಎಳೆದೊಯ್ದ ಅಮಾನವೀಯ ಘಟನೆ ನಗರದ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಚಂದ್ರಾಲೇಔಟಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಮೊಬೈಲ್ ನಲ್ಲಿ ಮಾತನಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಬ್ಯಾಟರಾಯನಪುರ ನಿವಾಸಿ ಸುಹೇಲ್ ಅಲಿಯಾಸ್ ಸಾಹಿಲ್ ಸೈಯದ್, ಮುತ್ತಪ್ಪ ಅವರ ಟಾಟಾ ಸುಮೋ ಕಾರಿಗೆ ಹಿಂಬದಿಯಿಂದ ಬಂದು ಗುದ್ದಿದ್ದಾನೆ. ಈ ಬಗ್ಗೆ ಸುಹೇಲ್ ಕ್ಷಮೆಯಾಚಿಸದೆ ದಿಮಾಕಿನಿಂದ ದ್ವಿಚಕ್ರ ವಾಹನ ಸ್ಟಾರ್ಟ್ ಮಾಡಿ ಹೊರಡಲು ಮುಂದಾದಾಗ ಸುಹೇಲ್ ನನ್ನು ಹಿಡಿಯು ಬರದಲ್ಲಿ ಆ ಗಾಡಿಯ ಹಿಂಭಾಗದ ಹ್ಯಾಂಡಲ್ ಅನ್ನು ಹಿಡಿದು ತಡೆದು ನಿಲ್ಲಿಸಲು ಮುತ್ತಪ್ಪ ಮುಂದಾದರು. ಆದರೂ ವೇಗವಾಗಿ ದ್ವಿಚಕ್ರ ವಾಹನವನ್ನು ಓಡಿಸಲು ಆರಂಭಿಸಿದಾಗ, ಮುತ್ತಪ್ಪನ ಸಮೇತ ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಒಂದೂವರೆ ಕಿ.ಮೀ ರಸ್ತೆಯಲ್ಲೇ ಎಳೆದೊಯ್ದಿದ್ದಾನೆ.
ವಯಸ್ಸಾದ ವ್ಯಕ್ತಿಯನ್ನು ರಸ್ತೆಯಲ್ಲಿ ಹೀಗೆ ಎಳೆದೊಯ್ತುತ್ತಿರುವುದನ್ನು ನೋಡಿದ ಇತರೆ ವಾಹನ ಸವಾರರು ಆ ಟೂವೀಲರನ್ನು ಅಡ್ಡಹಾಕಿ ಪ್ರಶ್ನಿಸಿ ಸುಹೇಲ್ ಗೆ ಧರ್ಮದೇಟು ನೀಡಿದ್ದಾರೆ. ಮಾಹಿತಿ ತಿಳಿದ ವಿಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೈಕಿನ ಹಿಂದೆ ನೇತುಬಿದ್ದು ಒಂದೂವರೆ ಕಿಮೀ ಎಳೆದೊಯ್ಯ ಲ್ಪಟ್ಟ ಟಾಟಾಸುಮೋ ಚಾಲಕನಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ, ವಾಹನ ಸವಾರರಿಂದ ಧರ್ಮದೇಟು ತಿಂದ ಬೈಕ್ ಸವಾರನೂ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸರು ಇಬ್ಬರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.