ಬೆಂಗಳೂರು, ಜ.17 www.bengaluruwire.com : ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರು- ಮೈಸೂರು ನಡುವೆ ಆರಂಭಿಸಿದ ಎಲೆಕ್ಟ್ರಿಕ್ ಬಸ್ ಸೇವೆ (Electric Bus Service) ಇವಿ ಪವರ್ ಪ್ಲಸ್ (EV Power Plus) ಹೆಸರಿನಲ್ಲಿ ಸೋಮವಾರದಿಂದ ಪ್ರಾರಂಭಿಸಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಬೆಂಗಳೂರು ಮೈಸೂರು ನಡುವೆ ಸಂಸ್ಥೆಯು ಒಂದು ಬಸ್ ಸೇವೆಯನ್ನು ಪ್ರಾಯೋಗಾರ್ಥವಾಗಿ ಆರಂಭಿಸಿದ್ದು, ಬರುವ ದಿನಗಳಲ್ಲಿ ಇವಿ ಬಸ್ ಸೇವೆ ಹೆಚ್ಚಿಸಲು ನಿರ್ಧರಿಸಿದೆ.
ಮೊದಲ ದಿನವೇ ಬೆಂಗಳೂರು- ಮೈಸೂರು ನಡುವೆ ಒಟ್ಟಾರೆ 85 ಜನರು ಹೊಸ ಇವಿ ಬಸ್ ನಲ್ಲಿ ಪ್ರಯಾಣಿಸಿ ಎರಡು ನಗರಗಳ ನಡುವೆ ಎಲೆಕ್ಟ್ರಿಕ್ ಬಸ್ ನಲ್ಲಿ ಸಂಚರಿಸಿದ ಅನುಭವ ಪಡೆದರು. ಸೋಮವಾರ ಬೆಳಗ್ಗೆ 6.50ಕ್ಕೆ ಮೆಜಿಸ್ಟಿಕ್ ನಿಂದ 15 ಪ್ರಯಾಣಿಕರನ್ನು ಹೊತ್ತು ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ 35 ಮಂದಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಳಗ್ಗೆ 7.30ಕ್ಕೆ ಅಲ್ಲಿಂದ ತೆರಳಿದ ಇವಿ ಪವರ್ ಪ್ಲಸ್ ಬಸ್ ಎಕ್ಸ್ ಪ್ರೆಸ್ ವೇ ರಸ್ತೆಯ ಮುಖಾಂತರ ಮೈಸೂರು ಬಸ್ ನಿಲ್ದಾಣವನ್ನು 9.45ಕ್ಕೆ ತಲುಪಿತು. ಪುನಃ ಮಧ್ಯಾಹ್ನ 12.10ಕ್ಕೆ 35 ಪ್ರಯಾಣಿಕರನ್ನು ಕೊಂಡೊಯ್ದ ಬಸ್ ಮಧ್ಯಾಹ್ನ 2.45ಕ್ಕೆಲ್ಲ ಪುನಃ ಮೆಜಿಸ್ಟಿಕ್ ನಿಲ್ದಾಣವನ್ನು ತಲುಪಿತು.
ಇನ್ನು ಮಂಗಳವಾರ ಎರಡನೇ ದಿನ ಬೆಂಗಳೂರಿನಿಂದ 43 ಪ್ರಯಾಣಿಕರೊಂದಿಗೆ ಬೆಳಗ್ಗೆ 7.30ಕ್ಕೆ ಮೈಸೂರು ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ನಿಂದ ತೆರಳಿದ ಇವಿ ಪವರ್ ಪ್ಲಸ್ ವಾಹನ 9.44ಕ್ಕೆಲ್ಲ ಮೈಸೂರು ಬಸ್ ನಿಲ್ದಾಣವನ್ನು ತಲುಪಿತು. ಹೊಸ ಎಲೆಕ್ಟ್ರಿಕ್ ಬಸ್ ನಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರೊಬ್ಬರು, ‘ಬೆಂಗಳೂರಿನ ರಸ್ತೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳು ಓಡಾಡುತ್ತಿದೆ. ಬೆಂಗಳೂರು- ಮೈಸೂರು ಎರಡು ನಗರಗಳ ನಡುವೆ ಕೆಎಸ್ ಆರ್ ಟಿಸಿ, ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಿರುವುದು ನಿಜಕ್ಕೂ ಸಂತೋಷದ ವಿಷಯ. ಇದು ನಿಜಕ್ಕೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನಾನು ಆಂಧ್ರಪ್ರದೇಶದವನು, ಇವಿ ಪವರ್ ಪ್ಲಸ್ ಬಸ್ ನಲ್ಲಿ ಪ್ರಯಾಣಿಸಿ ಸಂತೋಷವಾಗಿದೆ. ಕೆಎಸ್ಆರ್ ಟಿಸಿ ಒದಗಿಸಿರುವ ಸೇವೆಯು ನಿಜಕ್ಕೂ ಚೆನ್ನಾಗಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಉದ್ಯಮಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಮತ್ತೊಬ್ಬ ಪುರುಷ ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಂಪೂರ್ಣವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಆಗಿರುವ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ನಲ್ಲಿ ವಿದ್ಯಾರ್ಥಿ ಪಾಸ್‌ಗಳಿಗೆ ಅವಕಾಶ ಇರುವುದಿಲ್ಲ. ಇದು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಇಂಟರ್‌ಸಿಟಿ ಎಲೆಕ್ಟ್ರಿಕ್ ಬಸ್ ಸೇವೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹತ್ವ ಪೂರ್ಣ ಯೋಜನೆಯಾಗಿರುವ ಇದರ ಅಡಿಯಲ್ಲಿ ಒಟ್ಟು 50 ಬಸ್‌ಗಳನ್ನು ಸೇವೆಗೆ ನೀಡಲು ಇಲಾಖೆ ನಿರ್ಧರಿಸಿದೆ. ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರು ಮತ್ತು ಮೈಸೂರಿನ ನಡುವೆ ಕೆಎಸ್‌ಆರ್‌ಟಿಸಿ ಇವಿ ಪವರ್ ಪ್ಲಸ್ ಬಸ್ ಸಂಚರಿಸುತ್ತಿದೆ.
ವೈ-ಫೈ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಕೆ :
ಈ ಎಲೆಕ್ಟ್ರಿಕ್ ಬಸ್‌ನಲ್ಲಿ ಪವರ್ ಪ್ಲಸ್ ವೈ-ಫೈ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಈ ಬಸ್‌ಗಳನ್ನು ತಯಾರು ಮಾಡಿದೆ. ಫೆಬ್ರವರಿ ಎರಡನೇ ವಾರದಲ್ಲಿ ಉಳಿದ 49 ಎಲೆಕ್ಟ್ರಿಕ್ ಬಸ್ ಗಳನ್ನು ಸೇವೆಗೆ ಸೇರ್ಪಡೆ ಮಾಡಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ನಗರಗಳಾದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಗಳಿಗೆ ಇವಿ ಬಸ್ ಸೇವೆಯನ್ನು ಆರಂಭಿಸಲಿದೆ. ಈ ಸಂದರ್ಭದಲ್ಲಿ ಬೆಂಗಳೂರು ಮೈಸೂರು ನಡುವಿನ ಇವಿ ಬಸ್ ಗಳನ್ನು ಹೆಚ್ಚಿಸಲಾಗುತ್ತದೆ ಎಂದು ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿ.ಮೀ ಮೈಲೇಜ್ :
ಇವಿ ಪವರ್ ಪ್ಲಸ್ ಎಲೆಕ್ಟ್ರಿಕ್ ಬಸ್ಸನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು 300 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಯೋಗಿಕವಾಗಿ ಮೊದಲು ಬೆಂಗಳೂರು ಹಾಗೂ ಮೈಸೂರು ನಡುವೆ 1 ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಾಗುತ್ತಿದೆ. ಬೆಂಗಳೂರಿನ ಮೆಜಿಸ್ಟಿಕ್ ನಿಂದ ಮೈಸೂರಿಗೆ 320 ರೂಪಾಯಿ ಹಾಗೂ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ನಿಂದ ಮೈಸೂರು ಬಸ್ ನಿಲ್ದಾಣಕ್ಕೆ 300 ರೂಪಾಯಿ ದರ ನಿಗದಿ ಮಾಡಲಾಗಿದೆ. ಇದು ಐರಾವತ ಕ್ಲಬ್ ಕ್ಲಾಸ್ ಪ್ರಯಾಣ ದರಕ್ಕಿಂತ 30 ರೂ. ಕಡಿಮೆ ದರವಾಗಿದೆ.
ಎಲೆಕ್ಟಿಕ್ ಬಸ್ ಗಳಿಗಾಗಿ ಚಾರ್ಜಿಂಗ್ ಪಾಯಿಂಟ್ :
ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಮೈಸೂರು ಮತ್ತು ಬೆಂಗಳೂರಲ್ಲಿ ಈಗಾಗಲೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕೂಡ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ವಿರಾಜಪೇಟೆ, ದಾವಣಗೆರೆ ಶಿವಮೊಗ್ಗ ನಗರ ಮತ್ತು ಚಿಕ್ಕಮಗಳೂರು ನಗರ ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ಕಾರ್ಯನಿರ್ವಹಣೆಯನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಖಾಸಗಿ ಸಂಸ್ಥೆಯು ನಿರ್ವಹಿಸಲಿದೆ. ಈ ನಿರ್ವಹಣೆಗೆ ಕೆಎಸ್ಆರ್‌ಟಿಸಿ ಕೂಡ ಹಣ ನೀಡಲು ಮುಂದಾಗಿದ್ದು, ಕಾರ್ಯಾಚರಣೆಯ ವೆಚ್ಚವಾಗಿ ಪ್ರತಿ ಕಿ.ಮೀಗೆ 55 ರೂಪಾಯಿಗಳನ್ನು ಪಾವತಿಸಲಿದೆ. ಪ್ರತಿದಿನ ದಿನ ಬದಲಾಗುವ ಡೀಸೆಲ್ ದರವನ್ನು ಹೊಂದಿಸಲಾರದೆ ಪರಪಾಡಲು ಪಡುತ್ತಿರುವ ಕೆಎಸ್ ಆರ್ ಟಿಸಿ, ಭವಿಷ್ಯದಲ್ಲಿ ಇವಿ ಬಸ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವೆಗೆ ಬಳಸಿಕೊಂಡು ತನ್ನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಿಕೊಂಡು ಲಾಭದ ಹಾದಿ ಹಿಡಿಯಲಿದೆಯೇ ಕಾದು ನೋಡಬೇಕು.